ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಸಾವು
– ದೊಡ್ಡಬಳ್ಳಾಪುರ ಭೂಚನಹಳ್ಳಿಯ ಕೆರೆಯಲ್ಲಿ ಘಟನೆ
– ಶಾಲೆಯ ವಿದ್ಯಾರ್ಥಿನಿ ಮದುವೆ: ಮಾಸ್ಟರ್ ಸಸ್ಪೆಂಡ್!
– ನಟಿ ಉಳಿದುಕೊಂಡಿದ್ದ ಕೋಣೆಗೆ ಸೀಕ್ರೆಟ್ ಕ್ಯಾಮರಾ
– ಮೇಲಾಧಿಕಾರಿಗಳ ಕಿರುಕುಳ: ಆತ್ಮಹತ್ಯೆ ಯತ್ನ
– ಜೈಲಿನಲ್ಲಿ ಗಾಂಜಾ, ಮೊಬೈಲ್ ಪತ್ತೆ: ನಾಲ್ವರು ಅಮಾನತು
NAMMUR EXPRESS NEWS
ಬೆಂಗಳೂರು: ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಭೂಚನಹಳ್ಳಿಯ ಕೆರೆಯಲ್ಲಿ ನಡೆದಿದೆ. ಮೃತರನ್ನು ತಂದೆ ಪುಟ್ಟರಾಜು(42), ಮಗ ಕೇಶವ(14) ಎಂದು ಗುರುತಿಸಲಾಗಿದೆ. ವರಮಹಾಲಕ್ಷ್ಮೀ ಹಬ್ಬ ಇರುವುದರಿಂದ ತಾವರೆ ಹೂ ಬೇಕೆಂದು ಹೂ ಕೀಳಲು ಕೆರೆದ ಇಳಿದ ತಂದೆ, ಮಗ ಇಬ್ಬರು ಕೂಡ ಸಾವನ್ನಪ್ಪಿದ್ದಾರೆ. ಕೆಸರಿನಲ್ಲಿ ಸಿಲುಕಿ ಇಬ್ಬರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಗುರುವಾರ ಬೆಳಗ್ಗೆ ಅಗ್ನಿಶಾಮಕದಳದ ಸಿಬ್ಬಂದಿ ಕೆರೆಯಿಂದ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಮೃತಪಟ್ಟವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಲೆಯ ವಿದ್ಯಾರ್ಥಿನಿ ಮದುವೆಯಾದ ಮಾಸ್ಟರ್ ಸಸ್ಪೆಂಡ್!
ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಗೌಪ್ಯವಾಗಿ ವಿವಾಹ ಮಾಡಿಕೊಂಡಿದ್ದ ಶಾಲಾ ಶಿಕ್ಷಕನಿಗೆ ಅಮಾನತು ಮಾಡಲಾಗಿದೆ. ಭಾಲ್ಕಿ ತಾಲೂಕಿನ ಹಲಸಿ ತೂಗಾಂವ್ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ಸಂದೀಪ್ ಕುಮಾರ್ ಅವರನ್ನು ಅಮಾನತು ಮಾಡಿರುವ ಬಗ್ಗೆ ವರದಿಯಾಗಿದೆ.ಶಿಕ್ಷಕ ಸಂದೀಪ್ ಕುಮಾರ್ ಅವರ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ಡಿಡಿಪಿಐ ಸಲೀಂ ಪಾಷಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಶಿಕ್ಷಕ ಭಾಲ್ಕಿ ತಾಲೂಕಿನ ಹಲಸಿ ತೂಗಾಂವ್ ಗ್ರಾಮದಲ್ಲಿ 15 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಗೌಪ್ಯವಾಗಿ ಮದುವೆಯಾಗಿದ್ದ.
ಈ ಮೊದಲು ಆತನಿಗೆ ಮದುವೆಯಾಗಿ ಮಗುವಿದ್ದು, ಇದೀಗ ಹಲಸಿ ತೂಗಾಂವ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಎರಡನೇ ಮದುವೆಯಾಗಿದ್ದನು. ಈ ಕುರಿತು ಶಿಶು ಅಭಿವೃದ್ಧಿ ಅಧಿಕಾರಿ ಶಿಕ್ಷಕನ ವಿರುದ್ಧ ಕ್ರಮಕ್ಕಾಗಿ ಪೊಲೀಸರಿಗೆ ದೂರು ನೀಡಿದ್ದರು.
ಜೈಲಿನಲ್ಲಿ ಗಾಂಜಾ, ಮೊಬೈಲ್ ಪತ್ತೆ: ನಾಲ್ವರು ಅಮಾನತು
ಹಾಸನ: ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿ ಗಾಂಜಾ ಹಾಗೂ ಮೊಬೈಲ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಸೆಲ್ ನ ಒಳಗಿನಿಂದ ಖೈದಿಯೊಬ್ಬ ಜೈಲಿನಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ವೀಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಮಾಡಿದ್ದ. ಈ ಹಿನ್ನಲೆಯಲ್ಲಿ ಹಾಸನ ಜಿಲ್ಲಾ ಕಾರಾಗೃಹದ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ನೇತೃತ್ವದ ತಂಡ ದಾಳಿ ನಡೆ ಮೊಬೈಲ್ಗಳು, ಗಾಂಜಾ ಪ್ಯಾಕೆಟ್ಗಳು, ಬೀಡಿ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡಿದ್ದರು. ಈ ವಿಚಾರದಲ್ಲಿ ಕರ್ತವ್ಯ ಲೋಪ ಸಾಬೀತಾದ ಹಿನ್ನಲೆಯಲ್ಲಿ ನಾಲ್ವರುಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಕಾರಾಗೃಹ ಪೊಲೀಸ್ ಮಹಾನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಹಾಸನ ಉಪಕಾರಾಗೃಹದ ಪೊಲೀಸ್ ಅಧೀಕ್ಷಕ ಸುರೇಶ್, ಜೈಲರ್ ಖುತುಬುದ್ದೀನ್ ದೇಸಾಯಿ, ಜಾದವ್ ಹಾಗೂ ಪಾಟೀಲ್ ಅಮಾನತಾದ ಅಧಿಕಾರಿಗಳಾಗಿದ್ದಾರೆ.
ನಟಿ ಉಳಿದುಕೊಂಡಿದ್ದ ಕೋಣೆಗೆ ಸೀಕ್ರೆಟ್ ಕ್ಯಾಮರಾ!
ತಾನು ಉಳಿದುಕೊಂಡ ಹೊಟೇಲ್ ಕೋಣೆಯಲ್ಲಿ ಹಿಡನ್ ಕ್ಯಾಮರಾ ಅಳವಡಿಸಲಾಗಿತ್ತು ಎಂದು ನಟಿ ಕೃತಿ ಕರಬಂಧ ಶಾಕಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತಾನು ಹೋಟೆಲ್ನಲ್ಲಿ ತಂಗಿದ ಸಂದರ್ಭದಲ್ಲಿ ತಾನು ಮತ್ತು ತನ್ನ ತಂಡವು ಕೋಣೆಯಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಲಾಗಿದೆಯೇ ಎಂದು ಪರಿಶೀಲಿಸುತ್ತೇವೆ. ಹೋಟೆಲ್ ಸಿಬ್ಬಂದಿಯೊಬ್ಬರು ನನ್ನ ಕೋಣೆಯಲ್ಲಿ ರಹಸ್ಯವಾಗಿ ಕ್ಯಾಮರಾ ಅಳವಡಿಸಿದ್ದರು. ನನ್ನ ತಂಡ ಮತ್ತು ನಾನು ಕೊಠಡಿಯನ್ನು ಪರಿಶೀಲಿಸಿದಾಗ, ನಾವು ಆ ಕ್ಯಾಮೆರಾ ನೋಡಿದ್ದೇವೆ. ಆ ಹುಡುಗ ಇದರಲ್ಲಿ ನಿಪುಣನಲ್ಲ, ಹಾಗಾಗಿ ಅವನು ಕ್ಯಾಮೆರಾವನ್ನು ತುಂಬಾ ಕೆಟ್ಟದಾಗಿ ಅಳವಡಿಸಿದ್ದನು. ನಾನು ಅದನ್ನು ನೋಡಿದೆ. ಕ್ಯಾಮೆರಾವನ್ನು ಸೆಟ್ ಟಾಪ್ ಬಾಕ್ಸ್ ಹಿಂದೆ ಮರೆಮಾಡಲಾಗಿತ್ತು. ಇದು ತುಂಬಾ ಅಪಾಯಕಾರಿ ಮತ್ತು ಅಂತಹ ಘಟನೆಗಳನ್ನು ತಪ್ಪಿಸಲು, ನೀವೂ ಎಚ್ಚರದಿಂದಿರುವುದು ಬಹಳ ಮುಖ್ಯ ಎಂದು ಕೃತಿ ಹೇಳಿದ್ದಾರೆ. ಕನ್ನಡ ಸಿನಿಮಾ ಶೂಟಿಂಗ್ ವೇಳೆ ಇಂತಹ ಘಟನೆ ನಡೆದಿತ್ತು ಎಂದು ಹೇಳಿದ್ದಾರೆ.
ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಯತ್ನ
ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಹಾಯಕ ಸರ್ವೇಯರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡಿ.ಸಿ ಕಚೇರಿ ಆವರಣದಲ್ಲಿ ವಿಷ ಸೇವಿಸಿ ಸಹಾಯಕ ಸರ್ವೇಯರ್ ಮಹೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಮಹೇಶ್ ಕಳೆದ 6 -7 ವರ್ಷಗಳಿಂದ ಸಹಾಯಕ ಸರ್ವೇಯರ್ ಆಗಿ ಕೆಲಸ ಮಾಡ್ತಿದ್ದು, ಸರ್ವೇ ಮೇಲ್ವಿಚಾರಕಿ ಕವಿತ ಅವರಿಂದ ಕಿರುಕುಳದ ಆರೋಪ ವ್ಯಕ್ತವಾಗಿದೆ. ಸಹಾಯಕ ಸರ್ವೇಯರ್ ಮಹೇಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ಸೂಕ್ತ ಚಿಕಿತ್ಸೆಗಾಗಿ ಮಹೇಶ್ನನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.