ಮೂವರು ಮಕ್ಕಳ ಜತೆ ಬಾವಿಗೆ ಹಾರಿದ ತಾಯಿ!
– ಮೂವರು ಮಕ್ಕಳು ಸಾವು: ತಾಯಿ ಬಚಾವ್
– ಲೋನ್ ಆ್ಯಪ್ ಸಾಲ: ಯುವತಿ ನಗ್ನ ಫೋಟೋ ಮಾಡಿ ವೈರಲ್ ಬೆದರಿಕೆ
– ಸಾಗರ: ಲಾರಿಯನ್ನೆ ಕದ್ದೊಯ್ಯಲು ಯತ್ನಿಸಿದ ಕಳ್ಳರು!
– ಕಳಸ! ವೃದ್ಧನ ಎದೆಗೆ ತಿವಿದ ಕಾಡು ಕೋಣ!
– ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ!
NAMMUR EXPRESS NEWS
ಬಾಗಲಕೋಟೆ: ಒಂದು ಗಂಡು ಮಗುವಿದ್ದರೂ ಮತ್ತೆ ಗಂಡು ಮಗುವಾಗಿಲ್ಲವೆಂದು ಮಹಿಳೆಯೊಬ್ಬಳು ಮೂವರು ಮಕ್ಕಳ ಸಹಿತ ಬಾವಿಗೆ ಹಾರಿದ್ದಾಳೆ. ಆದರೆ ಕೊನೆಗೆ ಮೂವರು ಮಕ್ಕಳೂ ಸಾವಿಗೀಡಾಗಿದ್ದು, ತಾಯಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕುಂಬಾರಹಳ್ಳದಲ್ಲಿ ನಡೆದಿದೆ. ಸಂಗೀತಾ ಗುಡೆಪ್ಪನವರ್ ಕೃತ್ಯ ಎಸಗಿದ ತಾಯಿ. ಈಕೆಯ 17 ದಿನಗಳ ಹೆಣ್ಣು ಮಗು ಸೌಜನ್ಯಾ, ಪುತ್ರ ಶ್ರೀಶೈಲ (5), ಮಗಳು ಶ್ರಾವಣಿ (3) ಸಾವಿಗೀಡಾಗಿರುವ ಮಕ್ಕಳು. ಸಂಗೀತಾಗೆ ಇತ್ತೀಚೆಗೆ ಹೆರಿಗೆ ಆಗಿದೆ. ಆದರೆ ಆಕೆಗೆ ಮೂರನೇ ಮಗು ಗಂಡೇ ಆಗಬೇಕೆಂಬ ಆಸೆ ಇತ್ತು. ಆದರೆ 17 ದಿನಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಇದರಿಂದ ತೀವ್ರವಾಗಿ ಮನನೊಂದ ಈಕೆ ಹಸಗೂಸು ಸೇರಿ ಮೂವರು ಮಕ್ಕಳೊಂದಿಗೆ ಹೊಲದಲ್ಲಿದ್ದ ಬಾವಿಗೆ ಹಾರಿದ್ದಾಳೆ.ಪತಿ ಹನಮಂತ ಗುಡೆಪ್ಪನವರ್ ತಕ್ಷಣ ರಕ್ಷಣೆಗೆ ಧಾವಿಸಿದ್ದರಿಂದ ಸಂಗೀತಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಕ್ಕಳನ್ನು ರಕ್ಷಿಸಲು ತಂದೆ ಹರಸಾಹಸ ಪಟ್ಟಿದ್ದರೂ ಸಾಧ್ಯವಾಗಿಲ್ಲ. ಮಕ್ಕಳನ್ನು ಬಾವಿಗೆ ತಳ್ಳಿದ್ದ ಹಿನ್ನೆಲೆಯಲ್ಲಿ ತಾಯಿ ಸಂಗೀತಾ ವಿರುದ್ಧ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಲೋನ್ ಆ್ಯಪ್ ಸಾಲ: ಯುವತಿ ನಗ್ನ ಫೋಟೋ ಮಾಡಿ ವೈರಲ್ ಬೆದರಿಕೆ
ಲೋನ್ ಆ್ಯಪ್ ಒಂದರಲ್ಲಿ ಸಾಲ ಪಡೆದ ಮಹಿಳೆಯೋರ್ವರಿಗೆ ಸಾಲವನ್ನು ಮರುಪಾವತಿಸಿದ ಬಳಿಕವು ಹೆಚ್ಚಿನ ಲೋನ್ ಪಡೆಯುವಂತೆ ಮಾಡಿ ಹಣ ಪಾವತಿಸಲು ಒತ್ತಾಯಿಸಲಾಗಿದೆ. ಹಣ ಪಾವತಿಸದಿದ್ದಲ್ಲಿ ನಗ್ನ ಫೋಟೋ ವೈರಲ್ ಮಾಡುವ ಬೆದರಿಕೆ ಹಾಕಲಾಗಿದೆ ಎಂದು ಮಂಗಳೂರು ಸೆನ್ ಠಾಣೆಯಲ್ಲಿದೂರು ದಾಖಲಾಗಿದೆ.ಮಹಿಳೆ ಎಪ್ರಿಲ್ 15 ರಂದು quick money ಎಂಬ ಲೋನ್ ಆ್ಯಪ್ ನಲ್ಲಿ 10,000 ರೂ. ಸಾಲಕ್ಕೆ ಮನವಿ ಮಾಡಿದ್ದರು. ತಕ್ಷಣ ಅವರ ಖಾತೆಗೆ 7500 ರೂ. ಕ್ರೆಡಿಟ್ ಆಗಿದೆ. ಮಹಿಳೆ ಸ್ವಲ್ಪ ದಿನಗಳ ಬಳಿಕ ಪೂರ್ತಿ 10,000 ರೂ. ಹಣವನ್ನು ಮರು ಪಾವತಿ ಮಾಡಿದ್ದಾರೆ.
ಆದರೆ ಆ ಬಳಿಕ ಬೇರೆ ಬೇರೆ ವಾಟ್ಸ್ ಆ್ಯಪ್ ಸಂಖ್ಯೆಯಿಂದ ಮಹಿಳೆಗೆ ಕಡ್ಡಾಯವಾಗಿ ಮತ್ತೆ ಲೋನ್ ಪಡೆಯಬೇಕೆಂದು ಒತ್ತಾಯಿಸಲಾಗಿದೆ. ಅಲ್ಲದೆ ಆಕೆಯ ಖಾತೆಗೆ 14000 ರೂ. ಲೋನ್ ಅನ್ನು ಕ್ರೆಡಿಟ್ ಮಾಡಲಾಗಿದೆ. ಈ ಹಣವನ್ನು ಮಹಿಳೆ ಮರು ಪಾವತಿ ಮಾಡಿದ್ದಾರೆ. ಎಲ್ಲಾ ಹಣವನ್ನು ಪಾವತಿಸಿದ ಬಳಿಕವು ಮತ್ತೆ ಹೆಚ್ಚಿನ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಿ 51000 ರೂ. ಲೋನ್ ಮಹಿಳೆ ಖಾತೆಗೆ ವರ್ಗಾಯಿಸಿದ್ದಾರೆ.ಅಲ್ಲದೆ ಮಹಿಳೆಗೆ ಬೇರೆ ಬೇರೆ ಸಂಖ್ಯೆಗಳಿಂದ ಕರೆ ಮಾಡಿ ಹಣ ಹಿಂತಿರುಗಿಸುವಂತೆ ಬೆದರಿಕೆ ಹಾಕಲಾಗಿದೆ. ಅಲ್ಲದೆ ಆಕೆಯ ಫೋಟೋವನ್ನು ಯಾರದ್ದೋ ಯುವಕನೊಂದಿಗೆ ನಗ್ನವಾಗಿ ಇರುವಂತೆ ಎಡಿಟ್ ಮಾಡಿ ಮಹಿಳೆಗೆ ಕಳುಹಿಸಿ ಇತರರಿಗೆ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿಯೂ ಬೆದರಿಸಿದ್ದಾರೆ. ಇದರಿಂದ ಮನನೊಂದ ಮಹಿಳೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಲಾರಿಯನ್ನೆ ಕದ್ದೊಯ್ಯಲು ಯತ್ನಿಸಿದ ಕಳ್ಳರು!
ರಸ್ತೆ ಬದಿ ನಿಲ್ಲಿಸಿದ್ದ ಲಾರಿಯೊಂದನ್ನು ಕದಿಯಲು ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದಲ್ಲಿ ನಡೆದಿದೆ. ಆನಂದಪುರದ ಅಶೋಕ ರಸ್ತೆಯಲ್ಲಿ ಸ್ಥಳೀಯ ನಿವಾಸಿಯೊಬ್ಬರು ಲಾರಿಯೊಂದನ್ನ ಪಾರ್ಕ್ ಮಾಡಿದ್ದರು. ಇದನ್ನ ಗಮನಿಸಿದ್ದ ದುಷ್ಕರ್ಮಿಗಳು ತಡರಾತ್ರಿ ಲಾರಿಯ ಬಳಿಗೆ ಬಂದು, ಅದನ್ನ ಸ್ಟಾರ್ಟ್ ಮಾಡಿ ಕೊಂಡೊಯ್ಯಲು ಯತ್ನಿಸಿದ್ದಾರೆ. ಆದರೆ ಎಷ್ಟೆ ಪ್ರಯತ್ನಿಸಿದರೂ ಲಾರಿ ಸ್ಟಾರ್ಟ್ ಆಗಲಿಲ್ಲ. ಹೀಗಾಗಿ ಲಾರಿ ಕದಿಯುವ ಯತ್ನ ಬಿಟ್ಟು, ಲಾರಿಯಲ್ಲಿದ್ದಡೀಸೆಲ್ ಕದ್ದು ಪರಾರಿಯಾಗಿದ್ದಾರೆ. ಈ ಘಟನೆ ಸ್ಥಳೀಯ ನಿವಾಸಿಯೊಬ್ಬರು ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳಸ! ವೃದ್ಧನ ಎದೆಗೆ ತಿವಿದ ಕಾಡು ಕೋಣ!
ವೃದ್ದನ ಹೃದಯ ಭಾಗಕ್ಕೆ ಕಾಡುಕೋಣ ತಿವಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಮುಜೇಖಾನ್ ಗ್ರಾಮದಲ್ಲಿ ನಡೆದಿದ್ದು ದಾಳಿಗೊಳಗಾದ ವೃದ್ಧನ ಸ್ಥಿತಿ ಗಂಭೀರವಾಗಿದೆ. ಕಾಡಂಚಿನ ಗ್ರಾಮವಾದ ಮುಜೇಖಾನ್ ನಿಂದ ಕಳಸಕ್ಕೆ ಬರುವಾಗ ಈ ಘಟನೆ ನಡೆದಿದೆ, ಗಂಭೀರವಾಗಿ ಗಾಯಗೊಂಡಿರುವ ಮರೀಗೌಡ (60) ರನ್ನು ಕಳಸದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ!
ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ನಡೆದಿದೆ. ಹೇಮಂತ್ ಕುಮಾರ್ (16) ಹುಳಿಯಾರು ಕರೆ ಅಂಗಳದಲ್ಲಿ ಶವ ವಾಗಿ ಪತ್ತೆಯಾಗಿದ್ದು ಮೃತ ದುರ್ದೈವಿ ಹಂದನಕೆರೆ ಹೋಬಳಿಯ ಗೋಪಾಲಪುರದ ನಿವಾಸಿಯಾಗಿದ್ದಾನೆ.
ಎಸ್.ಎಸ್.ಎಲ್.ಸಿ ಓದುತ್ತಿದ್ದ ಹೇಮಂತ್ ಕುಮಾರ್, ಕ್ರೀಡಾಕೂಟದಲ್ಲಿ ಭಾಗವಹಿಸಲು ಮೂರು ದಿನದ ಹಿಂದೆ ತನ್ನ ಪೋಷಕರಿಗೆ ಹೇಳಿ ಮನೆಯಿಂದ ಹೋಗಿದ್ದನು. ವಾಪಸ್ ಮನೆಗೆ ಬರದ ಕಾರಣ ಪೋಷಕರು ಎಷ್ಟು ಹುಡಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.