ಸರ್ಕಾರಿ ಬಸ್-ಕಾರು ಅಪಘಾತಕ್ಕೆ 6 ಬಲಿ
– ರಾಮ ನಗರ ಜಿಲ್ಲೆ ಕನಕಪುರ ತಾಲೂಕಲ್ಲಿ ಘಟನೆ
– ಚಾಕು ಇರಿದು ತಾನೇ ಆಸ್ಪತ್ರೆಗೆ ಕರೆದುಕೊಂಡು ಹೋದ!
– 40 ಅಡಿ ಎತ್ತರದ ಗೋಡೆ ಹಾರಿ ಜೈಲಿನಿಂದ ಪರಾರಿಯಾದ ಆರೋಪಿ!
– ನಾಯಿ ಚೂ ಬಿಟ್ಟ ತಾತ…ತಾತನಿಗೆ ಚಾಕು ಇರಿತ!
NAMMUR EXPRESS NEWS
ರಾಮನಗರ: ಕೆಎಸ್ಆರ್ಟಿಸಿ ಬಸ್ ಮತ್ತು ಕ್ವಾಲಿಸ್ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಘಟನೆ ನಡೆದಿದೆ. ನಾಗೇಶ್, ಜ್ಯೋರ್ತಿಲಿಂಗ, ಪುಟ್ಟರಾಜು, ಕುಮಾರ, ಗೋವಿಂದ ಮೃತ ವ್ಯಕ್ತಿಗಳು ಮತ್ತೊಬ್ಬರ ಹೆಸರು ತಿಳಿದು ಬಂದಿಲ್ಲ. ಕೆಎಸ್ಆರ್ಟಿಸಿ ಬಸ್ ಚಾಲಕನಿಗೂ ತೀವ್ರ ಗಾಯವಾಗಿದೆ. ಕೆಎಸ್ಆರ್ಟಿಸಿ ಬಸ್ಸಿನಲ್ಲಿದ್ದ 12ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಭೀಕರ ಅಪಘಾತದ ಪರಿಣಾಮ ಬಸ್ ನ ಮುಂಭಾಗಕ್ಕೆ ಕಚ್ಚಿಕೊಂಡಿದ್ದ ಕ್ವಾಲಿಸ್ ಕಾರನ್ನು ಅಗ್ನಿಶಾಮಕ ಸಿಬ್ಬಂದಿಯು ಜೆಸಿಬಿ ಮತ್ತು ಕ್ರೇನ್ ಸಹಾಯದಿಂದ ಬೇರ್ಪಡಿಸಿದ್ದಾರೆ. ಮೃತ ಆರು ಮಂದಿ ಬೆಂಗಳೂರು ಮೂಲದ ನಿವಾಸಿಗಳು. ಕೆಲವರು ವಿಧಾನಸೌಧದಲ್ಲಿನೌಕರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಚಾಕು ಇರಿದು ತಾನೇ ಆಸ್ಪತ್ರೆಗೆ ಕರೆದುಕೊಂಡು ಹೋದ!
ರಾಮನಗರ ನಗರದ ಮಹಿಳಾ ಪಿಯು ಕಾಲೇಜು ಎದುರು ಯುವಕನೊಬ್ಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು, ಕಾರಿನಲ್ಲಿ ಅಪಹರಿಸಿರುವ ಘಟನೆ ನಡೆದಿದೆ. ಕನಕಪುರದ ದಾಳಿಂಬ ಗ್ರಾಮದ ನಿವಾಸಿ ಸಂಜನಾ ಎಂದಿನಂತೆ ಬೆಳಿಗ್ಗೆ 9.15ರ ಸುಮಾರಿಗೆ ಸಹಪಾಠಿಗಳೊಂದಿಗೆ ಕಾಲೇಜಿಗೆ ತೆರಳುತ್ತಿದ್ದರು. ಯುವತಿ ಕಾಲೇಜು ಪ್ರವೇಶದ್ವಾರಕ್ಕೆ ಬರುತ್ತಿದ್ದಂತೆ, ಕಾರಲ್ಲಿ ಬಂದ ಯುವಕ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ನೋವಿನಿಂದ ಕುಸಿದ ಯುವತಿಯನ್ನು ಕಾರಿನೊಳಕ್ಕೆ ಎಳೆದುಕೊಂಡು ಪರಾರಿಯಾಗಿದ್ದಾರೆ. ಇದನ್ನು ಗಮನಿಸಿದ ಸ್ಥಳದಲ್ಲಿದ್ದವರು ಕಾರಿಗೆ ಕಲ್ಲು ತೂರಿ ತಡೆಯಲು ಯತ್ನಿಸಿದ್ದಾನೆ. ಆದರೂ, ನಿಲ್ಲಿಸದೆ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಘಟನೆಯನ್ನು ಕಾಲೇಜಿನ ಉಪನ್ಯಾಸಕರಿಗೆ ತಿಳಿಸಿದಾಗ, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದು ಅಪಹರಣಕಾರರ ಪತ್ತೆಗೆ ಬಲೆ ಬೀಸಿದರು. ಇನ್ನು ಚಾಕು ಇರಿದು ಅಪಹರಣ ಮಾಡಿದ ಯುವಕನನ್ನು ದಾಳಿಂಬ ಗ್ರಾಮದ ಚೇತನ್ ಎಂದು ಗುರುತಿಸಲಾಗಿದೆ. ಚಾಕು ಇರಿದ ನಂತರ ತೀವ್ರವಾಗಿ ಗಾಯಗೊಂಡಿದ್ದ ಸಂಜನಾಳನ್ನು ತಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ಮಾಹಿತಿ ತಿಳಿದ ಪೊಲೀಸರು ಚಾಕು ಇರಿದ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
40 ಅಡಿ ಎತ್ತರದ ಗೋಡೆ ಹಾರಿ ಜೈಲಿನಿಂದ ಪರಾರಿಯಾದ ಆರೋಪಿ!
ದಾವಣಗೆರೆಯಲ್ಲಿ ಕೈದಿಯೊಬ್ಬ 40 ಅಡಿ ಎತ್ತರದ ಗೋಡೆ ಹಾರಿ ಜೈಲಿನಿಂದ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಕಾರಾಗೃಹದ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ದೃಶ್ಯ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಯನ್ನು ವಸಂತ್ (23) ಎಂದು ಗುರುತಿಸಲಾಗಿದ್ದು, ಅತ್ಯಾಚಾರದ ಆರೋಪದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ಆತನನ್ನು ಜೈಲಿನಲ್ಲಿ ಇರಿಸಲಾಗಿತ್ತು. ಆಗಸ್ಟ್ 25ರಂದು ಉಪ- ಜೈಲಿನ 40 ಅಡಿ ಎತ್ತರದ ಗೋಡೆಯಿಂದ ವಸಂತ್ ಜಿಗಿದಿದ್ದಾನೆ. ತಪ್ಪಿಸಿಕೊಳ್ಳುವ ಸಮಯದಲ್ಲಿ ಆತನ ಬಲಗಾಲಿಗೆ ಗಂಭೀರ ಗಾಯದ ಹೊರತಾಗಿಯೂ, ಆತ ಜೈಲಿನ ಆವರಣದಿಂದ ತಪ್ಪಿಸಿಕೊಂಡಿದ್ದಾನೆ. ಸುದ್ದಿ ತಿಳಿದ ಕೂಡಲೇ ಜೈಲು ಅಧಿಕಾರಿಗಳು ಮತ್ತು ಸ್ಥಳೀಯ ಪೋಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ ಮತ್ತು ಪರಾರಿ ವಸಂತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಸಂಘಟಿತ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಸಮೀಪದ ಹಾವೇರಿ ಜಿಲ್ಲೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಲಾಗಿದೆ ಮತ್ತು 24 ಗಂಟೆಗಳ ಒಳಗೆ ಮತ್ತೆ ಬಂಧಿಸಲಾಗಿದೆ.
ನಾಯಿ ಚೂ ಬಿಟ್ಟ ತಾತ…ತಾತನಿಗೆ ಚಾಕು ಇರಿತ!
ನಾಯಿಯೊಂದು ಬೊಗಳಿದ್ದಕ್ಕೆ ಅದನ್ನು ವೃದ್ಧನೊಬ್ಬ ಚು ಬಿಟ್ಟಿದ್ದಾನೆ ಎಂಬ ಶಂಕೆಯಿಂದ ವ್ಯಕ್ತಿಯೊಬ್ಬ ಚಾಕು ಇರಿದಿರುವ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ. ಆರೋಪಿ ರಾಜು ವೃದ್ಧ ಬಾಲಸುಬ್ರಹ್ಮಣ್ಯ ಎಂಬವರಿಗೆ ಚಾಕು ಇರಿಯಲಾಗಿದೆ. ರಾಜು ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ನಾಯಿಯೊಂದು ಬೊಗಳಿತ್ತು. ಈ ನಾಯಿಯನ್ನು ವೃದ್ಧನೇ ಬಿಟ್ಟಿದ್ದಾನೆಂದು ಕೋಪಗೊಂಡ ರಾಜು ಚಾಕು ಇರಿದಿದ್ದಾನೆ.ಘಟನೆ ಬಗ್ಗೆ ಮಲ್ಲೇಶ್ವರಂ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ವೃದ್ಧನಿಗೆ ಚಾಕು ಇರಿದ ಆರೋಪಿ ರಾಜುನನ್ನು ಬಂಧಿಸಿದ್ದಾರೆ.