ಬೇಳೆ ಕಾಳುಗಳ ಬೆಲೆಯಲ್ಲಿ ದಿಢೀರ್ ಏರಿಕೆ!?
– ಮಂಗಳೂರು: ಬಸ್ಸಿನಿಂದ ಬಿದ್ದು ಕಂಡಕ್ಟರ್ ಸಾವು
– ಕೊಡಗು: ಮಂಡ್ಯ ಮೂಲದ ಅಧಿಕಾರಿ ಆತ್ಮಹತ್ಯೆ
– ಹಾಸನ: ಕಳೆ ನಾಶಕದಿಂದ ಯುವಕನ ಜೀವ ಹೋಯ್ತು!
NAMMUR EXPRESS NEWS
ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್, ಶೀಘ್ರವೇ ಬೇಳೆಕಾಳುಗಳ ಬೆಲೆಯಲ್ಲಿಯೂ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ. ಗುಜರಾತ್ ನಿಂದ ಬೇಡಿಕೆಗೆ ತಕ್ಕಷ್ಟು ಬೇಳೆಕಾಳುಗಳ ಪೂರೈಕೆ ಆಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೇಳೆಕಾಳುಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗುವ ಸಾಧ್ಯತೆ ಇದೆ. ರೈತರು ದ್ವಿದಳ ಧಾನ್ಯಗಳ ಕೃಷಿಯಿಂದ ಕ್ರಮೇಣವಾಗಿ ಹೆಚ್ಚಿನ ಮೌಲ್ಯದ ನಗದು ಬೆಳೆಗಳಿಗೆ ಬದಲಾಗುತ್ತಿದ್ದಾರೆ, ಇದು ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಅಕಾಲಿಕ ಮಳೆಯು ಬೆಳೆಗಳ ಮೇಲೆ ಪರಿಣಾಮ ಬೀರಿತು. ಕೇಂದ್ರ ಕೃಷಿ ಸಚಿವಾಲಯದ ಆರಂಭಿಕ ಪ್ರಕ್ಷೇಪಗಳ ಪ್ರಕಾರ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ವರದಿಯಾಗಿದೆ. ಉದ್ದಿನ ಬೇಳೆ 160 ರೂ, ಕಡ್ಲೆಬೇಳೆ 90-110 ರೂ.ಹೆಸರುಬೇಳೆ 110 ರೂ, ತೊಗರಿಬೇಳೆ 180 ರೂ. ಹೆಸರುಬೇಳೆ 110 ರೂ. ಕಾಬೂಲ್ ದರ 170 ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬಸ್ ನಿಂದ ಆಯತಪ್ಪಿ ರಸ್ತೆಗೆ ಬಿದ್ದು ಕಂಡಕ್ಟರ್ ಮೃತ್ಯ!
ಮಂಗಳೂರು ಸಿಟಿಬಸ್ ನಲ್ಲಿ ಬಾಗಿಲ ಬಳಿ ನಿಂತಿದ್ದ ಬಸ್ ಕಂಡಕ್ಟರ್ ಆಯತಪ್ಪಿ ಬಿದ್ದು ಸಾವನಪ್ಪಿರುವ ಘಟನೆ ಮಂಗಳವಾರದಂದು ನಂತೂರ್ ಸರ್ಕಲ್ ಬಳಿ ನಡೆದಿದೆ. ಮೃತ ಕಂಡಕ್ಟರ್ ನನ್ನು ಈರಯ್ಯ(23) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಸಿಟಿ ಬಸ್ ಪದುವದಿಂದ ಶಿವಭಾಗ್ ಕಡೆ ಹೋಗುವ ಸಂದರ್ಭ ನಂತೂರು ವೃತ್ತದ ಬಳಿ ಬಸ್ಸಿನ ಎದುರಿನ ಬಾಗಿಲ ಬಳಿ ನಿಂತಿದ್ದ ಈರಯ್ಯ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಈರಯ್ಯನನ್ನುಆಟೋ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿ ಆತ್ಮಹತ್ಯೆ
ಮಡಿಕೇರಿಯ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ನಗರದ ಅರಣ್ಯ ಇಲಾಖೆ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಂಡ್ಯ ಮೂಲದ ಅರಣ್ಯ ಇಲಾಖೆ ಡಿಎಫ್ಒ ರಶ್ಮಿ(27) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯಾಗಿದ್ದಾರೆ.
ಯುವಕನ ಜೀವ ತೆಗೆಯಿತಾ ಕಳೆ ನಾಶಕ?
ಹಾಸನ: ಕಳೆನಾಶಕ ಸಿಂಪಡಣೆ ವೇಳೆ ಮುಂಜಾಗ್ರತಾ ಕ್ರಮವಹಿಸದೆ ಶ್ವಾಸಕೋಶ ಸಮಸ್ಯೆಯಿಂದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಹಾಸನ ತಾಲೂಕಿನ ಕಾರ್ಲೆ ಗ್ರಾಮದಲ್ಲಿ ನಡೆದಿದೆ. ಕೀರ್ತಿ (23) ಮೃತ ದುರ್ದೈವಿ. ಕೀರ್ತಿ ಸತತ ಒಂದು ವಾರ ಶುಂಠಿಗೆ ಕಳೆನಾಶಕ ಸಿಂಪಡಿಸಿದ್ದ. ಅಪಾಯಕಾರಿ ಕಳೆನಾಶಕ ಸಿಂಪಡಿಸುವ ವೇಳೆ ಮುಖಕ್ಕೆ ಮಾಸ್ಕ್ ಧರಿಸದೆ, ಅದೇ ಕೈಯಿಂದಲೇ ನೀರು, ಆಹಾರ ಸೇವಿಸಿದ್ದ. ಯಾವುದೇ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿರಲಿಲ್ಲ ಇದರಿಂದಾಗಿ ವಾಂತಿ, ಆಯಾಸ ಉಂಟಾಗಿತ್ತು. ಉಸಿರಾಟಕ್ಕೂ ಕಷ್ಟವಾಗಿತ್ತು. ಕೂಡಲೇ ಕುಟುಂಬಸ್ಥರು ಕೀರ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಮೂರ್ನಾಲ್ಕು ದಿನದಲ್ಲಿ ಕಿಡ್ನಿ, ಲಿವರ್, ಶ್ವಾಸಕೋಶವು ನಿಷ್ಕ್ರಿಯಗೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾನೆ. ರಕ್ತ ಪರೀಕ್ಷೆ ನಡೆಸಿದಾಗ ಕೀರ್ತಿ ದೇಹದಲ್ಲಿ ವಿಷ ಇರುವುದು ದೃಢಪಟ್ಟಿದೆ.