ಆಸ್ಪತ್ರೆಯ ತೊಟ್ಟಿಯಲ್ಲಿ ನವಜಾತ ಶಿಶು ಪತ್ತೆ!
– ವಿಟ್ಲದಲ್ಲಿ ಜೂಜಾಟದ ಅಡ್ಡೆ ಮೇಲೆ ದಾಳಿ
– ಪುತ್ತೂರು: ಜನರ ಹಣ ಸಂಗ್ರಹ ಮಾಡಿ ಮೋಸ
– ಸಿಎಂ ವಿರುದ್ಧ ವಿವಾದಿತ ಕಮೆಂಟ್: ಅರೆಸ್ಟ್
– ಪಾಕ್: ಹಳಿ ತಪ್ಪಿದ ರೈಲು: 30 ಮಂದಿ ಸಾವು
– ಬಾಂಗ್ಲಾದೇಶದಲ್ಲಿ ಡೆಂಗಿಗೆ 300 ಮಂದಿ ಬಲಿ!
– ನಾಡಬಾಂಬ್ ಇಟ್ಟು ಕಾಡು ಹಂದಿ ಹತ್ಯೆ: ಸೆರೆ
NAMMUR EXPRESS NEWS
ಮುಂಡಗೋಡ: ಮುಂಡಗೋಡು ಪಟ್ಟಣದ ಜ್ಯೋತಿ (ಕ್ರಿಶ್ಚಿಯನ್) ಆಸ್ಪತ್ರೆಯ ಮುಂಭಾಗದಲ್ಲಿನ ತೊಟ್ಟಿಲಿನಲ್ಲಿ ಮೂರು ದಿನದ ನವಜಾತ ಶಿಶುವೊಂದು ಪತ್ತೆಯಾಗಿದೆ. ಜ್ಯೋತಿ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ತೊಟ್ಟಿಲನ್ನು ಇಡಲಾಗಿದ್ದು, ಮಗುವನ್ನು ಸಾಕಲು ಸಾಧ್ಯವಾಗದವರು ತಮ್ಮ ಮಗುವನ್ನು ಈ ತೊಟ್ಟಿಲಲ್ಲಿ ಹಾಕುವಂತೆ ನಾಮಫಲಕವನ್ನು ಹಾಕಲಾಗಿದೆ. ಇದೇ ತೊಟ್ಟಿಲಿನಲ್ಲಿ ಮಗುವನ್ನ ಇಟ್ಟು ಹೋಗಲಾಗಿದೆ. ನವಜಾತ ಶಿಶು ಅಳುತ್ತಿರುವ ಶಬ್ದ ಕೇಳಿದ ಆಸ್ಪತ್ರೆಯವರು ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಶಿರಸಿ ದತ್ತು ಕೇಂದ್ರಕ್ಕೆ ಮಗುವನ್ನ ನೀಡಲು ಕ್ರಮ ಕೈಗೊಂಡಿದ್ದಾರೆ.
ವಿಟ್ಲದಲ್ಲಿ ಜುಗಾರಿ ಅಡ್ಡೆಗೆ ದಾಳಿ
ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ವೀರಕಂಬ ಗ್ರಾಮದ ಎರ್ಮೆಮಜಲು ಗುಡ್ಡ ಪ್ರದೇಶದಲ್ಲಿ ನಡೆಯುತ್ತಿದ್ದ ಇಸ್ಪೀಟು ಜುಗಾರಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಕೇಪುಳಕೋಡಿ ನಿವಾಸಿ ಗಣೇಶ್ (40) ಕುಳ ಕಾರ್ಯಾಡಿ ನಿವಾಸಿ ಸುಮಿತ್(29), ಬರಿಮಾರು ನಿವಾಸಿ ದಯಾನಂದ (30) ಅವರನ್ನು ಬಂಧಿಸಿದ್ಧಾರೆ. ಅವರಿಂದ ಸುಮಾರು 15 ಸಾವಿರ ರೂ. ಮೊತ್ತವನ್ನು ವಶಕ್ಕೆ ಪಡೆಯಲಾಗಿದೆ. 6 ಮಂದಿ ಸ್ಥಳದಿಂದ ಪರಾರಿಯಾಗಿದ್ಧಾರೆ. ಗುಡ್ಡದಲ್ಲಿ ಸುಮಾರು 9 ಮಂದಿ “ಉಳಾಯಿ ಪಿದಾಯಿ’ ಆಟವನ್ನು ಆಡುತ್ತಿದ್ದ ಸಂದರ್ಭ ವಿಟ್ಲ ಪೊಲೀಸರು ದಾಳಿ ನಡೆಸಿದ್ದರು.
ಠೇವಣಿ ಹಣ ವಾಪಸು ನೀಡದೆ ವಂಚನೆ: ದೂರು!
ಪುತ್ತೂರು ನಗರದ ಖಾಸಗಿ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಒನ್ ಸೌಹಾರ್ದ ಸಹಕಾರಿ ಸಂಘ ಮತ್ತು ಈ ಸಂಸ್ಥೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಟಾರ್ಗೆಟ್ 2 ಸಕ್ಸೆಸ್ ಎಂಬ ಟ್ರೇಡಿಂಗ್ ವ್ಯವಹಾರ ಸಂಸ್ಥೆಗಳು ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ ಮರಳಿ ನೀಡದೆ ವಂಚಿಸಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಪುತ್ತೂರು ಒಳಮೊಗ್ರು ಗ್ರಾಮದ ನಿವಾಸಿ ನಾರಾಯಣ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. 2022 ಮಾ. 11ರಿಂದ ದೂರುದಾರರು ಹಾಗೂ ಸಾರ್ವಜನಿಕರಿಂದ ಹಣವನ್ನು ಠೇವಣಿಯಾಗಿ ಸಂಗ್ರಹಿಸಿ ಹಾಗೂ ತನ್ನ ಸಿಬಂದಿಗಳಿಗೆ ಕೂಡ ಗುರಿಯನ್ನು ನಿಗದಿಪಡಿಸಿ ಒತ್ತಡ ಹೇರಿ ಠೇವಣಿಗಳನ್ನು ಸಂಗ್ರಹಿಸಿ ಸಾರ್ವಜನಿಕರಿಂದ ಹಣ ಪಡೆದು ಠೇವಣಿ ಅವಧಿ ಮುಗಿದರೂ ಠೇವಣಿ ಸಂಗ್ರಹಿಸಿದ ಹಣವನ್ನು ಪಿರ್ಯಾದುದಾರರಿಗೆ ಹಾಗೂ ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ವಾಪಸು ನೀಡದೆ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿದ್ದಾಗಿದೆ.
ಸಿಎಂ ವಿರುದ್ಧ ವಿವಾದಿತ ಕಮೆಂಟ್: ಅರೆಸ್ಟ್
ವಾಟ್ಸಾಪ್ ಗ್ರೂಪ್ನಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕುರಿತು ವಿವಾದಿತ ಕಮೆಂಟ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ನಡೆದಿದೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಕಾಮೆಂಟ್ ಬಹಳ ವೈರಲ್ ಆಗಿತ್ತು. ಬಂಧಿತ ವ್ಯಕ್ತಿ ಸಹಾಬುದ್ದೀನ್ ಅನ್ಸಾರಿ ಎಂದು ತಿಳಿದುಬಂದಿದ್ದು, ಟ್ವಿಟರ್ ಮೂಲಕ ನಾವು ದೂರನ್ನು ಸ್ವೀಕರಿಸಿದೆವು. ಕಾಮೆಂಟ್ನ ಸ್ಕ್ರೀನ್ ಶಾಟ್ ಕೂಡ ಪಡೆಯಲಾಗಿದೆ ಎಂದು ಕೋಟ್ವಾಲಿ ಪೊಲೀಸ್ ಠಾಣೆಯ ಎಸ್ಎಚ್ಒ ಅಜಯ್ ಕುಮಾರ್ ಸೇರ್ ಮಾಹಿತಿ ನೀಡಿದ್ದಾರೆ.
ಹಳಿ ತಪ್ಪಿದ ರೈಲು: 30 ಮಂದಿ ಸಾವು
ಪಾಕಿಸ್ತಾನದ ಸಿಂಧೆ ಪ್ರಾಂತ್ಯದಲ್ಲಿ ಸಂಭವಿಸಿದ ಎಕ್ಸ್ಪ್ರೆಸ್ ರೈಲು ಅಪಘಾತದಲ್ಲಿ, ಸಾವಿನ ಸಂಖ್ಯೆ 30 ಕ್ಕೆ ಏರಿಕೆಯಾಗಿದೆ. 80 ಜನ ಗಾಯಗೊಂಡಿದ್ದಾರೆ ಎಂದು ರೈಲ್ವೆ ಸಚಿವ ಸಾದ್ ರಫೀಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕರಾಚಿಯಿಂದ ರಾವಲ್ಪಿಂಡಿಗೆ ಹೊರಟಿದ್ದ ಹಜಾರಾ ಎಕ್ಸ್ಪ್ರೆಸ್ ರೈಲು ನವಾಬ್ ಶಾ ಜಿಲ್ಲೆಯ ಬಳಿ ಹಳಿತಪ್ಪಿದೆ. ಕರಾಚಿಯಿಂದ 275 ಕಿ.ಮೀ ದೂರದಲ್ಲಿ ರೈಲು ಅಪಘಾತಕ್ಕೀಡಾಗಿದೆ. ರೈಲ್ವೆ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿವೆ, ಗಾಯಾಳುಗಳಿಗೆ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು ಒಂದು ಸಾವಿರ ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಹಲವಾರು ಮಂದಿ ರೈಲು ಬೋಗಿಗಳಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಡೆಂಗಿಗೆ 300 ಮಂದಿ ಬಲಿ!
ಮಾರಣಾಂತಿಕ ಡೆಂಗಿ ಜ್ವರ ಬಾಂಗ್ಲಾದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಈಗಾಗಲೇ 61,500ಕ್ಕೂ ಹೆಚ್ಚು ಜನ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೆ 300 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಪರದಾಡುವ ಸ್ಥಿತಿ ಎದುರಾಗಿದೆ. ಅದರಲ್ಲೂ ರಾಜಧಾನಿ ಢಾಕಾದಲ್ಲಿ ಅತಿಹೆಚ್ಚು ಜನರಿಗೆ ಸೋಂಕು ತಗುಲಿದ್ದು, ತೀವ್ರ ಜ್ವರ, ಕೀಲುಗಳಲ್ಲಿ ನೋವು, ವಾಂತಿಯಂತಹ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ನಾಡಬಾಂಬ್ ಇಟ್ಟು ಕಾಡು ಹಂದಿ ಹತ್ಯೆ: ಸೆರೆ
ಕಾರವಾರ ತಾಲೂಕಿನ ಚೆಂಡಿಯಾದಲ್ಲಿ ಕಾಡುಹಂದಿಯನ್ನು ನಾಡಬಾಂಬ್ ಇಟ್ಟು ಹತ್ಯೆ ಮಾಡಿದ್ದು, ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಸಿಫ್ರನ್ ಥಾಮಸ್ ಫರ್ನಾಂಡೀಸ್ ಹಂದಿ ಹತ್ಯೆ ಮಾಡಿದ ಆರೋಪಿ. ಕೆಲ ದಿನಗಳಿಂದ ಕಾಡುಹಂದಿಗಳ ಗುಂಪು ಗ್ರಾಮಗಳಿಗೆ ನುಗ್ಗುತ್ತಿತ್ತು. ಇದನ್ನು ಗಮನಿಸಿದ ಚೆಂಡಿಯಾ ಗ್ರಾಮಸ್ಥರು ಹಂದಿಗಳಿಗೆ ತರಕಾರಿಗಳನ್ನು ನೀಡುತ್ತಿದ್ದರು. ಇದರಿಂದಾಗಿ ಹಂದಿಗಳು ರಾತ್ರಿ ವೇಳೆ ಊರಿಗೆ ಬಂದು ಇಟ್ಟ ತರಕಾರಿಗಳನ್ನು ತಿಂದು ವಾಪಸ್ ಕಾಡಿಗೆ ತೆರಳುತ್ತಿದ್ದವು. ಆದರೆ ಶುಕ್ರವಾರ ಸ್ಥಳೀಯರಿಗೆ ನಾಡಬಾಂಬ್ ಸಿಡಿಸಿದ ಶಬ್ದ ಕೇಳಿಸಿದೆ. ಬಳಿಕ ಗ್ರಾಮದ ಸ್ಮಶಾನದಲ್ಲಿ ಹಂದಿಯು ನಾಡಬಾಂಬ್ ತಿಂದು ಮೃತಪಟ್ಟಿರುವುದು ತಿಳಿದುಬಂದಿದೆ. ನಾಡಬಾಂಬ್ಗೆ ಕೋಳಿ ಮಾಂಸವನ್ನು ಕಟ್ಟಿ ಇಟ್ಟಿರುವುದು ತಿಳಿದಿದೆ.
ಇದನ್ನೂ ಓದಿ : ರೈತರಿಗೆ ಖುಷ್: ಕಾಳು ಮೆಣಸು ದರ ಏರಿಕೆ!
HOW TO APPLY : NEET-UG COUNSELLING 2023