ಯಡಿಯೂರಪ್ಪಗೆ ಝಡ್ ಪ್ಲಸ್ ಭದ್ರತೆ..!
– ಹೇಗಿರುತ್ತೆ ಭದ್ರತೆ… ಏಕೆ ಈ ಭದ್ರತೆ..?
– ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾಗ್ತಾರಾ?
– ಶೋಭಾ, ಯತ್ನಾಳ್ ನೇಮಕಕ್ಕೆ ಯಡಿಯೂರಪ್ಪ ವಿರೋಧ ಇಲ್ಲ
NAMMUR EXPRESS NEWS
ಬಿಜೆಪಿ ಹಿರಿಯ ನಾಯಕ, ರಾಜ್ಯ ರಾಜಕೀಯದ ರಾಜಾಹುಲಿ ಬಿ. ಎಸ್ . ಯಡಿಯೂರಪ್ಪನವರಿಗೆ ಕೇಂದ್ರ ಗೃಹ ಇಲಾಖೆ ಝಡ್ ಕೆಟಗರಿ ಭದ್ರತೆ ನೀಡಿದೆ. ಗುಪ್ತಚರ ವಿಭಾಗ (IB) ಬೆದರಿಕೆ ಮೌಲ್ಯಮಾಪನಕ್ಕೆ ಪ್ರತಿಕ್ರಿಯೆಯಾಗಿ ಅವರಿಗೆ ಗೃಹ ಸಚಿವಾಲಯ ಝಡ್ ಕೆಟಗರಿ ಭದ್ರತೆಯನ್ನು ನೀಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಯಡಿಯೂರಪ್ಪನವರ ಸುರಕ್ಷತೆಯ ಬಗೆಗೆ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯ ಕೈಗೊಂಡಿದೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂಲಭೂತ ಗುಂಪುಗಳಿಂದ ಸಂಭಾವ್ಯ ಬೆದರಿಕೆಗಳಿವೆ ಎಂದು ತಿಳಿದುಬಂದಿದೆ. ಎಂಎಚ್ ನಿರ್ದೇಶನದಂತೆ ಯಡಿಯೂರಪ್ಪ ಅವರಿಗೆ ಭದ್ರತೆ ಹೆಚ್ಚಿಸಲಾಗಿದ್ದು, ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಕಮಾಂಡೋಗಳು ಒದಗಿಸುತ್ತಾರೆ. ಯಡಿಯೂರಪ್ಪ ಅವರ ಭದ್ರತೆಗೆ ಒಟ್ಟು 33 ಝಡ್ ಕೆಟಗರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಹೆಚ್ಚುವರಿಯಾಗಿ, 10 ಶಸ್ತ್ರಸಜ್ಜಿತ ಸ್ಟ್ಯಾಟಿಕ್ ಗಾರ್ಡಗಳನ್ನು ಅವರ ನಿವಾಸದಲ್ಲಿ ಇರಿಸಲಾಗಿದ್ದು ಪೂರಕವಾಗಿ 6 ವೈಯಕ್ತಿಕ ಭದ್ರತಾ ಅಧಿಕಾರಿಗಳು (PSO) ಹಗಲು ರಾತ್ರಿ ದಿನದ 24 ಗಂಟೆ ಭದ್ರತೆ ಕೊಡಲಿದ್ದಾರೆ.
ಶೋಭಾ, ಯತ್ನಾಳ್ ನೇಮಕಕ್ಕೆ ಯಡಿಯೂರಪ್ಪ ವಿರೋಧ ಇಲ್ಲ
ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಸವನಗೌಡ ಪಾಟೀಲ ಯತ್ನಾಳ್ ಅವರ ನೇಮಕಕ್ಕೆ ಯಡಿಯೂರಪ್ಪನವರ ವಿರೋಧವಿದೆ ಎನ್ನುವುದು ಊಹಾಪೋಹ ಎಂದು ಬಿಜೆಪಿ ನಾಯಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಸಮಯದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಒಂದು ವೇಳೆ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದರೂ ಅದು ಯಡಿಯೂರಪ್ಪನವರ ಮಗ ವಿಜಯೇಂದ್ರ ಎಂಬ ಕಾರಣಕ್ಕೆ ಅಲ್ಲ.
ಯಾರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಯಡಿಯೂರಪ್ಪ ತಮ್ಮ ಮಗನ ಪರ ಲಾಭಿ ಮಾಡುತ್ತಿದ್ದಾರೆ ಎಂಬುದೆಲ್ಲಾ ಸುಳ್ಳು ವದಂತಿ. ಲಾಭಿ ಮಾಡಿ ಮಗನನ್ನು ರಾಜ್ಯ ಅಧ್ಯಕ್ಷ ಮಾಡುವಂತಹ ಯಾವುದೇ ಬೆಳವಣಿಗೆಯೂ ಯಡಿಯೂರಪ್ಪ ನವರಿಂದ ನಡೆದಿಲ್ಲ. ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಲಿ. ಯಾರನ್ನೇ ವಿಪಕ್ಷ ನಾಯಕ ಮಾಡಲಿ. ಅದನ್ನು ಎಲ್ಲರೂ ಒಪ್ಪಿಕೊಂಡೇ ಕೆಲಸ ಮಾಡುತ್ತಾರೆ. ನಾನು ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿರುವುದಕ್ಕೂ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು.