– ಪರಿಷತ್ ಚುನಾವಣೆ ಟಿಕೆಟ್ ಫೈಟ್ ಶುರು!
– ಶೆಟ್ಟರ್, ಬೋಸರಾಜು, ಡಾ.ಆರ್ ಎಂ ಮಂಜುನಾಥಗೌಡ ರೇಸ್ ಅಲ್ಲಿ ಮುಂದು
NAMMUR EXPRESS NEWS
ಬೆಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಮೂವರು ಸದಸ್ಯರು ಅವಧಿಗೆ ಮುನ್ನ ರಾಜೀನಾಮೆ ನೀಡಿದ ಪರಿಣಾಮ ತೆರವಾಗಿರುವ ಮೂರು ಸ್ಥಾನ ಹಾಗೂ ಖಾಲಿ ಇರುವ ಮೂರು ನಾಮ ನಿರ್ದೇಶಿತ ಸ್ಥಾನಗಳಿಗೆ ಜೂನ್ 30ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯಾಗಿದೆ.
ವಿಧಾನಪರಿಷತ್ ಸ್ಥಾನಕ್ಕೆ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷದಲ್ಲಿ ಹಲವು ನಾಯಕರ ನಡುವೆ ಭಾರೀ ಪೈಪೋಟಿ ಕಂಡು ಬಂದಿದೆ. ವಿಧಾನಸಭೆಯಿಂದ ಪರಿಷತ್ ಗೆ ನಡೆಯುವ ಉಪ ಚುನಾವಣೆ ಸಂಬಂಧ ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚರ್ಚೆ ನಡೆಸಲಿದ್ದಾರೆ. ಈ ನಾಯಕರು ಈಗ ಎಲ್ಲ ಆರು ಸ್ಥಾನಗಳಿಗೆ ಮುಂಬರುವ ಲೋಕಸಭೆ ಚುನಾವಣೆ, ಜಾತಿ ಸೇರಿದಂತೆ ವಿವಿಧ ಮಾನದಂಡಗಳನ್ನು ಆಧರಿಸಿ ಆಯ್ಕೆ ಮಾಡುವ ಸಾಧ್ಯತೆಗಳಿವೆ. 25-30ಕ್ಕೂ ಹೆಚ್ಚು ಆಕಾಂಕ್ಷಿಗಳು ತಮ್ಮನ್ನು ಆಯ್ಕೆ ಮಾಡುವಂತೆ ಹಿರಿಯ ನಾಯಕರ ದುಂಬಾಲು ಬಿದ್ದಿದ್ದಾರೆ.
ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡರೂ ಅವರ ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್ಗೆ ಲಾಭವಾಗಿದೆ. ಹೀಗಾಗಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಿದೆ. ಅವರಿಗೆ ಅವಕಾಶ ಸಿಗಲಿದೆ.
ಸಚಿವರಾಗಿರುವ ಎನ್.ಎಸ್. ಬೋಸರಾಜು ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವುದು ಅನಿವಾರ್ಯ. ಶಿಕ್ಷಣ ಕ್ಷೇತ್ರದಿಂದ ಮನ್ಸೂರ್ ಅಲಿಖಾನ್ (ಹಿರಿಯ ನಾಯಕ ರೆಹಮಾನ್ ಖಾನ್ ಅವರ ಪುತ್ರ) ಅವರ ಹೆಸರು ಕೇಳಿ ಬಂದಿದೆ. ಅವರಲ್ಲದೆ, ಹಿರಿಯರಾದ ಬಿ.ಎಲ್. ಶಂಕರ್, ಮಾಜಿ ಮೇಯರ್ ರಾಮಚಂದ್ರಪ್ಪ, ಎಂ.ಆರ್. ಸೀತಾರಾಂ, ಎಸ್.ಆರ್. ಪಾಟೀಲ್, ಬಿ.ಆರ್. ನಾಯ್ಡು, ಡಾ.ಆರ್.ಎಂ. ಮಂಜುನಾಥ ಗೌಡ ಸೇರಿದಂತೆ ಹಲವಾರು ನಾಯಕರು ಪೈಪೋಟಿ ನಡೆಸಿದ್ದಾರೆ.
ಡಾ. ಆರ್. ಎಂ. ಮಂಜುನಾಥ ಗೌಡ ಅವರಿಗೆ ಸ್ಥಾನ?
ಶಿವಮೊಗ್ಗ ಜಿಲ್ಲೆ ಸಹಕಾರಿ ಕ್ಷೇತ್ರದ ನಾಯಕ, ಡಿಕೆಶಿ ಆಪ್ತ ಡಾ. ಆರ್. ಎಂ. ಮಂಜುನಾಥ ಗೌಡ ಅವರಿಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲ ಹೆಚ್ಚಿಸಲು ಮಂಜುನಾಥ ಗೌಡರಿಗೆ ಅವಕಾಶ ಸಿಗಲಿದೆ. ಈ ಹಿಂದೆ ತೀರ್ಥಹಳ್ಳಿ ಕ್ಷೇತ್ರದಿಂದ ಕಿಮ್ಮನೆಗೆ ಸೀಟು ಬಿಟ್ಟು ಕೊಟ್ಟಿದ್ದು ಮತ್ತು ಡಿಕೆಶಿ ಅವರೇ ಘೋಷಣೆ ಮಾಡಿದ್ದರು. ಒಂದು ವೇಳೆ ಪಕ್ಷ ನಿಷ್ಠೆ ಬಂದಾಗ ಡಿಕೆಶಿ ಅವರ ಮಾತಿಗೆ ಒಪ್ಪಿ ಅವರು ಕಣದಿಂದ ಹಿಂದೆ ಸರಿಯಬಹುದು ಕೂಡ.