ಹುಲಿಕಲ್ ಘಾಟಿ ರಸ್ತೆ ಹಾಳಾಗಿದೆ ಸ್ವಾಮಿ..!
– ಪ್ರತಿನಿತ್ಯ ಸಾವಿರಾರು ಪ್ರಯಾಣಿಕರ ಪರದಾಟ
– ಕರಾವಳಿ ಮತ್ತು ಮಲೆನಾಡು ಸಂಪರ್ಕಿಸುವ ರಸ್ತೆ ಅವ್ಯವಸ್ಥೆ
– ಮಾಸ್ತಿಕಟ್ಟೆಯಿಂದ ಕೈಮರದವರೆಗೆ ಭಾರೀ ಹೊಂಡ ಗುಂಡಿ
NAMMUR EXPRESS NEWS
ತೀರ್ಥಹಳ್ಳಿ/ಹೊಸನಗರ: ಕರಾವಳಿ ಮತ್ತು ಮಲೆನಾಡು ಸಂಪರ್ಕಿಸುವ ಹುಲಿಕಲ್ ಘಾಟಿಯಲ್ಲಿ ಪ್ರತೀ ದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಪ್ರವಾಸಿಗರು ಕೂಡ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಈ ರಸ್ತೆ ಇದೀಗ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.
ಮಂಗಳೂರು, ಉಡುಪಿ, ಕುಂದಾಪುರ,ಸಿದ್ದಾಪುರ,ಮಾಸ್ತಿಕಟ್ಟೆ ಯಡೂರು, ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗ,ಬೆಂಗಳೂರು ದಾವಣಗೆರೆ,ಮಂತ್ರಾಲಯ, ರಾಯಚೂರು, ಕೂಡ್ಲಗಿ ಮುಂತಾದ ಊರುಗಳಿಗೆ ಸುಗಮ ಸಂಚಾರ ಮಾರ್ಗವಾಗಿರುವ ಹುಲಿಕಲ್ ಘಾಟಿ ರಸ್ತೆ ಅವ್ಯವಸ್ಥೆ ಇದೀಗ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರಿ ಬಸ್ ಓಡಾಡೋದು ಇಲ್ಲೇ…!
ಈ ರಸ್ತೆಯಲ್ಲಿ ಪ್ರತಿದಿನ ಐವತ್ತಕ್ಕೂ ಹೆಚ್ಚು ಕೆಎಸ್ಆರ್ಟಿಸಿ ಬಸ್ ಗಳು 30ಕ್ಕೂ ಹೆಚ್ಚು ಖಾಸಗಿ ಬಸ್ ಗಳು ಹಾಗೂ ಸರಕು ಸಾಗಾಣಿಕೆ ವಾಹನಗಳು, ಪ್ರವಾಸಿ ವಾಹನ ಹೆಚ್ಚಾಗಿ ಸಂಚರಿಸುತ್ತವೆ. ಈ ಮಾರ್ಗವು ಆಗುಂಬೆ,, ಕೊಲ್ಲೂರು, ಶಿರಾಡಿ, ಶೃಂಗೇರಿ ಘಾಟಿ ಕುಸಿದಾಗ ಜಿಲ್ಲಾಧಿಕಾರಿಗಳ ಆದೇಶದಂತೆ ಈ ರಸ್ತೆ ಎಲ್ಲಾ ಚಾಲಕರಿಗೆ ವರದಾನವಾಗಿದೆ. ಯಾವುದೇ ಅವಘಡಗಳು ಸಂಭವಿಸದೆ ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.
ದುರಸ್ತಿ ಕಾಣದ ರಸ್ತೆ: ಜಿಲ್ಲಾಡಳಿತ ಏನ್ ಮಾಡ್ತಿದೆ?
ಮಾಸ್ತಿಕಟ್ಟೆಯಿಂದ ಕೈಮರದವರೆಗೆ ವಾರಾಹಿ ಮುಳುಗಡೆ ನಂತರ ಸಂಪರ್ಕವನ್ನೇ ಕಳೆದುಕೊಂಡ ಈ ರಸ್ತೆ ನಂತರ ಬದಲಿ ಪಿಡಬ್ಲ್ಯೂಡಿ ರಸ್ತೆಯಾಗಿತ್ತು. ಕಳೆದ 15 ವರ್ಷಗಳ ಹಿಂದೆ ಶಾಸಕರಾದ ಕಿಮ್ಮನೆ ರತ್ನಾಕರವರ ಅವಧಿಯಲ್ಲಿ ವೈ ಎ ಪ್ರಭಾಕರ್ ಜೋಯಿಸ್ ಅವರ ಪ್ರಯತ್ನದ ಫಲವಾಗಿ ಸುಸಜ್ಜಿತವಾದ ರಸ್ತೆ ಮಾಡಿ ಮಾಡಿ ಉನ್ನತ ದರ್ಜೆಗೆ ಏರಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಈ ರಸ್ತೆಗೆ ಯಾವುದೇ ಅನುದಾನ ಇಲ್ಲದೆ ಮಳೆಗಾಲದಲ್ಲಿ ಚರಂಡಿಯ ನೀರು ರಸ್ತೆ ಮೇಲೆ ಹರಿದು ರಸ್ತೆ ಸಂಪೂರ್ಣ ಹಳ್ಳಗಳಾಗಿವೆ.ಪ್ರತಿನಿತ್ಯ ವಾಹನ ಸವಾರರು ಹಿಡಿ ಶಾಪ ಹೊಡೆಯುತ್ತ ಓಡಾಡುವ ಪರಿಸ್ಥಿತಿ ಬಂದಿದೆ. ಮಳೆಗಾಲ ಕಳೆದು ಎರಡು ತಿಂಗಳಾದರೂ ಸಹ ಈ ರಸ್ತೆ ದುರಸ್ತಿಯಾಗಿಲ್ಲ. ಸ್ಥಳೀಯ ಶಾಸಕರು, ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ರಸ್ತೆ ದುರಸ್ತಿ ಕಾರ್ಯ ನಡೆಸುವತ್ತ ಗಮನಿಸಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.