ಕುಮಾರ್ ಮಾಸ್ಟರ್ ವಾಪಾಸ್ ಬಂದಿದ್ದು ಹೇಗೆ ಗೊತ್ತಾ?
– ಮಕ್ಕಳು, ಪೋಷಕರ ಪ್ರತಿಭಟನೆಗೆ ಮಣಿದ ಶಿಕ್ಷಣ ಇಲಾಖೆ
– ಆರಗ, ಕಿಮ್ಮನೆ, ಆರ್ ಎಂ ಕೂಡ ದನಿಗೂಡಿಸಿದ್ರು
– ಮಳೆಯಲ್ಲಿಯೇ ಅಂಗವಿಕಲ ಮಕ್ಕಳ ಪ್ರತಿಭಟನೆ ನಡೆಸಿದ್ರು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಸೊಪ್ಪು ಗುಡ್ಡೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ವಿಕಲಚೇತನ ) ಶಾಲೆಯ ಮುಖ್ಯೋಪಾಧ್ಯಾಯರಾದ ಕುಮಾರ್ ಅವರನ್ನು ಇತ್ತೀಚಿಗೆ ಶಿಕ್ಷಣ ಇಲಾಖೆ ವರ್ಗಾಯಿಸಿದ್ದು ತೀರ್ಥಹಳ್ಳಿಯಲ್ಲಿ ಭಾರೀ ಹೋರಾಟಕ್ಕೆ ಕಾರಣವಾಗಿದ್ದು ಸರ್ಕಾರ ಇದೀಗ ಅವರನ್ನು ಉಳಿಸಿಕೊಂಡಿದೆ.
ಮಕ್ಕಳಿಗೆ ಉತ್ತಮ ಆರೈಕೆ ಮಾಡುತ್ತಿದ್ದ ಶಿಕ್ಷಕರ ವರ್ಗಾವಣೆಯನ್ನು ಖಂಡಿಸಿ ಯುವ ನಾಯಕ, ಪಟ್ಟಣ ಪಂಚಾಯಿತಿ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ ಅವರ ನೇತೃತ್ವದಲ್ಲಿ ಪೋಷಕ ವರ್ಗ ಮಂಗಳವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಮಕ್ಕಳ ಜೊತೆ ಪ್ರತಿಭಟನೆ ನಡೆಸಿದ್ದರು. ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಗೌಡ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕುಮಾರ್ ಅವರನ್ನು ಇದೇ ಶಾಲೆಗೆ ವರ್ಗಾಯಿಸುವಂತೆ ಆಗ್ರಹಿಸಿದ್ದರು. ಶಿಕ್ಷಣ ಇಲಾಖೆ ನಿನ್ನೆ ಕುಮಾರ್ ಮಾಸ್ಟರ್ ಅವರನ್ನು ಪುನಃ ಇದೇ ಶಾಲೆಗೆ ವರ್ಗಾವಣೆ ಮಾಡಿ ಆದೇಶ ನೀಡಿದ್ದಾರೆ.
ಮಳೆಯಲ್ಲಿಯೇ ಅಂಗವಿಕಲ ಮಕ್ಕಳ ಪ್ರತಿಭಟನೆ
ತೀರ್ಥಹಳ್ಳಿಯ ತಾಲ್ಲೂಕು ಕಚೇರಿ ಮುಂಭಾಗ ಬುದ್ಧಿಮಾಂದ್ಯ ಮಕ್ಕಳು ಮತ್ತು ಪಾಲಕರು ಮಂಗಳವಾರ ಪ್ರತಿಭಟನೆ ನಡೆಸಿದರು. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕುಮಾರ್ ಎಚ್.ಸಿ. ವರ್ಗಾವಣೆ ರದ್ದುಪಡಿಸದ ಸರ್ಕಾರದ ಧೋರಣೆ ಖಂಡಿಸಿ ಮಂಗಳವಾರ ತಾಲ್ಲೂಕು ಕಚೇರಿ ಮುಂಭಾಗ ಅಂಗವಿಕಲ ಮಕ್ಕಳು, ಪೋಷಕರು, ಸಾರ್ವಜನಿಕರು ಸುರಿಯುತ್ತಿರುವ ಮಳೆಯ ನಡುವೆಯೇ ಪ್ರತಿಭಟನೆ ನಡೆಸಿದರು.ಶಿಕ್ಷಕ ಕುಮಾರ್ ಅವರು ಬುದ್ಧಿಮಾಂದ್ಯ ಮಕ್ಕಳಿಗೆ ಸೂಕ್ತ ತರಬೇತಿ ನೀಡುತ್ತಿದ್ದರು. ಅವರ ವರ್ಗಾವಣೆಯಿಂದ ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ವಿವಿಧ ಜಿಲ್ಲೆಗಳ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಮನೋಚೈತನ್ಯ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪಾಲಕರು ದೂರಿದರು.
‘ಶಿಕ್ಷಕ ಕುಮಾರ್ ಅವರನ್ನು ಮರು ನೇಮಿಸಿ ಸರ್ಕಾರ ಆದೇಶ ಪ್ರಕಟಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ. ಬುದ್ಧಿಮಾಂದ್ಯ ಮಕ್ಕಳಿಗೆ ತರಬೇತಿ ನೀಡುವ ಶಾಲೆಯ ಶಿಕ್ಷಕರನ್ನು ವರ್ಗಾವಣೆಯಿಂದ ದೂರ ಇಡಬೇಕು. ಆ ಸಂಬಂಧ ಸರ್ಕಾರ ಪ್ರತ್ಯೇಕ ನಿಯಮ ರೂಪಿಸಿ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಡಿಡಿಪಿಐ ಪರಮೇಶ್ವರಪ್ಪ ಭೇಟಿ ನೀಡಿ ಪ್ರತಿಭಟನಾನಿರತರ ಜೊತೆ ಚರ್ಚೆ ನಡೆಸಿದರು. ಶಾಲೆಯ ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಕ ಕುಮಾರ್ ಎಚ್.ಸಿ. ಅವರ ವರ್ಗಾವಣೆ ರದ್ದುಪಡಿಸಿ ಬುಧವಾರದಿಂದ ಶಾಲೆಯಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಕ್ರಮ ವಹಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಮಾತೃ ವಾತ್ಸಲ್ಯ ಟ್ರಸ್ಟ್ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಗೀತಾ ಶೆಟ್ಟಿ, ಕರವೇ ತಾಲ್ಲೂಕು ಅಧ್ಯಕ್ಷೆ ಜ್ಯೋತಿ ಮೋಹನ್, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಸಂಘಟನೆ ಅಧ್ಯಕ್ಷರಾದ ಜ್ಯೋತಿ ದಿಲೀಪ್, ಸೇರಿದಂತೆ ಅನೇಕ ಸಂಘಟನೆಗಳು, ಬೆಂಬಲ ಸೂಚಿಸಿದ್ದವು.
ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?
HOW TO APPLY : NEET-UG COUNSELLING 2023