ಕುಪ್ಪಳ್ಳಿಯ ಸಮೀಪ ಪುನೀತ್ ನೆನಪಿನೋತ್ಸವ..!
– ಮಾ.17ರಂದು ಸಾಧಕರಿಗೆ ಸನ್ಮಾನ, ಸಾಧಕ ವಿದ್ಯಾರ್ಥಿಗಳು, ಅಂಗವಿಕಲರಿಗೆ ಸಹಾಯ
– ರಾಜ್ಯದ ಸಿನಿಮಾ, ಸಂಗೀತ, ಕಾಮಿಡಿ, ನಾಟಕ ಕಲಾವಿದರಿಂದ ವಿಶೇಷ ಕಾರ್ಯಕ್ರಮ
– ಪುನೀತ್ ಮ್ಯೂಸಿಕ್ ನೈಟ್ಸ್ ರಂಗು
NAMMUR EXPRESS NEWS
ತೀರ್ಥಹಳ್ಳಿ: ವಿಶ್ವಮಾನವ ಕನ್ನಡ ವೇದಿಕೆ ಹಾಗೂ ಪುನೀತ್ ಬ್ರಿಗೇಡ್ ಸಂಸ್ಥೆ ಕಲ್ಲುಕೊಡಿಗೆ ಕುಪ್ಪಳ್ಳಿ ಇವರ ವತಿಯಿಂದ ಪುನೀತ್ ನೆನಪಿನೋತ್ಸವ ಕಾರ್ಯಕ್ರಮವನ್ನು ದಿನಾಂಕ: 17-03-2024 ರ ಭಾನುವಾರ ಕುಪ್ಪಳ್ಳಿಯ ಸಮೀಪ ಮುಸ್ಸಿನಕೊಪ್ಪ ಕಲ್ಲುಕೊಡಿಗೆ ಸಮುದಾಯ ಭವನದಲ್ಲಿ ನಡೆಯಲಿದೆ. ಸೇನೆ, ಶಿಕ್ಷಣ, ಕಲೆ ಸೇರಿ ಇತರೆ ಕ್ಷೇತ್ರದ ಸಾಧಕರಿಗೆ ಸನ್ಮಾನ, ಸಾಧಕ ವಿದ್ಯಾರ್ಥಿಗಳು, ಅಂಗವಿಕಲರಿಗೆ ಸಹಾಯ ಮಾಡಲಾಗುವುದು. ಕನ್ನಡ ನಟ ನಟಿಯರ ಸಮ್ಮುಖದಲ್ಲಿ ಪುನೀತ್ ಸಂಗೀತ ಸಂಜೆ, ನಾಟಕ, ಕಾಮಿಡಿ ಸೇರಿದಂತೆ ಪುನೀತ್ ಮ್ಯೂಸಿಕ್ ನೈಟ್ಸ್ ಕಾರ್ಯಕ್ರಮವನ್ನು ಗ್ರಾಮಸ್ಥರು, ದಾನಿಗಳು, ಪುನೀತ್ ಅಭಿಮಾನಿಗಳು ಹಾಗೂ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ನಡೆಸಲಾಗುವುದು. ರಾಜ್ಯದ ಸಿನಿಮಾ, ಸಂಗೀತ, ಕಾಮಿಡಿ, ನಾಟಕ ಕಲಾವಿದರ ವಿಶೇಷ ಕಾರ್ಯಕ್ರಮ ಹಾಗೂ ಸುದಿ ಮ್ಯೂಸಿಕಲ್ ಶಿವಮೊಗ್ಗ ಇವರಿಂದ ಲೈವ್ ಆರ್ಕೆಸ್ಟ್ರಾ, ರಾಜ್ಯದ ಟಾಪ್ ಕಾಮಿಡಿ ನಟ ಕಾಮಿಡಿ ಶೋ ಕಲಾವಿದ ಕಾರ್ತಿಕ್ ಮಜಾ ಭಾರತ ಅವರಿಂದ ಕಾಮಿಡಿ ಶೋ, ಬೆಂಗಳೂರಿನ ಕಾಜಾಣ ತಂಡದಿಂದ ಗೋಕುಲ ಸಹೃದಯ ಅಭಿನಯದ ದೇಶದಲ್ಲೇ ಗಮನ ಸೆಳೆದ ಚಿಟ್ಟೆ ನಾಟಕ ಹಾಗೂ ಸ್ಥಳೀಯ ಕಲಾವಿದರಿಂದ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ.
ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಸ್ಮರಣಾರ್ಥವಾಗಿ ರಕ್ತದಾನ, ನೇತ್ರದಾನ ನೋಂದಣಿ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಬೆಕ್ಕನೂರು ಗ್ರಾಮದ ಆಯ್ದ ಸ್ಥಳಗಳಲ್ಲಿ ಗೋವುಗಳು ಹಾಗೂ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣ ಕಾರ್ಯಕ್ರಮ ಮಾಡಲಾಗುವುದು. ರಕ್ತದಾನ, ನೇತ್ರದಾನ ನೋಂದಣಿ, ಉಚಿತ ಆರೋಗ್ಯ ತಪಾಸಣೆಯನ್ನು ಬೆಳಗ್ಗೆ 9:30ಕ್ಕೆ ಮುಸ್ಸಿನಕೊಪ್ಪ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ದೇವಂಗಿ ಪಿಡಿಓ ರೇಣುಕಾರಾದ್ಯ, ಕೆನರಾ ಬ್ಯಾಂಕ್ ಶಾಖ ವ್ಯವಸ್ಥಾಪಕರಾದ ಅರ್ಪಿತ, ದೇವಂಗಿ ವೈದ್ಯಾಧಿಕಾರಿಗಳಾದ ಡಾ. ನಾಗೇಂದ್ರ, ಹಿರೇಕೊಡಿಗೆ ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಗಣಪತಿಕಟ್ಟೆ ಹಾಗೂ ಧನ್ಯ ವಿಶ್ವ ರವರು ನೆರವೇರಿಸಲಿದ್ದಾರೆ.
ಸಂಜೆ 5 ಗಂಟೆಗೆ ಸೇನೆ, ಶಿಕ್ಷಣ, ಕಲೆ ಸೇರಿ ಇತರೆ ಕ್ಷೇತ್ರದ ಸಾಧಕರಿಗೆ ಸನ್ಮಾನ, ಸಾಧಕ ವಿದ್ಯಾರ್ಥಿಗಳಿಗೆ ಸಹಾಯ ಸಮಾರಂಭದ ಉದ್ಘಾಟನೆಯನ್ನು ತೀರ್ಥಹಳ್ಳಿ ಡಿ ವೈ ಎಸ್ ಪಿ ಗಜಾನನ ವಾಮನಸುತಾರ ರವರಿಂದ ಮುಸ್ಸಿನಕೊಪ್ಪದ ರಂಗಮಂದಿರದಲ್ಲಿ ನೆರವೇರಿಸಲಾಗುವುದು.
ಖ್ಯಾತ ಕಾಮಿಡಿ ನಟ ಕಾರ್ತಿಕ್ ಮಜಾ ಭಾರತ, ಖ್ಯಾತ ಕನ್ನಡ ನಟಿ ಆಶಿಕಾ ಸೋಮಶೇಖರ್, ಖ್ಯಾತ ಧಾರವಾಹಿ ನಟಿ ಕುಮಾರಿ ಅನುಪಲ್ಲವಿ, ಉದ್ಯಮಿ ಸುಬ್ರಹ್ಮಣ್ಯ ಕೆ ಡಿ ಕಲ್ಲು ಕೊಡಿಗೆ, ದೇವಂಗಿ ಗ್ರಾಮ ಪಂಚಾಯತ್ ಸದಸ್ಯರಾದ ನಾಗರಾಜ್ ತಟ್ಟಾಪುರ ಹಾಗೂ ಸರೋಜಾ ನಾಗಪ್ಪ ಗೌಡ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸೈನಿಕರ ರಮೇಶ್ ಕರ್ಕಿಬೈಲು, ನಿವೃತ್ತ ಶಿಕ್ಷಕ ಶಿವಶಂಕರ್, ಮಾಜಿ ಸೈನಿಕ ಕಾರ್ತಿಕ್ ಬಾಣಂಕಿ, ಪ್ರಸಿದ್ಧ ಅಡುಗೆ ಕಂಟ್ರಾಕ್ಟರ್ ನಾಗರಾಜ್ ಹಿಲಿಕೆರೆ, ಕೃಷಿ ಸಾಧಕ ಶಿವಕುಮಾರ್ ಜಿಗಳೇಬೈಲು, ನಿರೂಪಕಿ ಅಮೃತ ಮಂಜುನಾಥ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಚಿರಂತನ, ಆದಿತ್ಯ, ಅದಿತಿ ಸಾಧಕ ಮಕ್ಕಳಿಗೆ ಗೌರವ ಸಮರ್ಪಿಸಲಾಗುವುದು. ಸರ್ವರನ್ನು ಸ್ವಾಗತಿಸಲಾಗಿದೆ.