ಎಚ್.ಡಿ.ಕೆ ವಿರುದ್ಧ ಏಕವಚನ: ಜೆಡಿಎಸ್ ಹೋರಾಟ!
– ತೀರ್ಥಹಳ್ಳಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ, ತಹಶೀಲ್ದಾರರಿಗೆ ಮನವಿ ಪತ್ರ
– ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ತಹಶೀಲ್ದಾರ್ ಮುಖೇನ ಮನವಿ ಪತ್ರ
NAMMUR EXPRESS NEWS
ತೀರ್ಥಹಳ್ಳಿ: ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ ವಿರುದ್ಧ ಏಕವಚನ ಪ್ರಯೋಗ ಮಾಡಿದ ಅಧಿಕಾರಿ ವಿರುದ್ಧ ಜೆಡಿಎಸ್ ಹೋರಾಟ ಮಾಡಿದೆ.
ತೀರ್ಥಹಳ್ಳಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ಮಾಡಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.
ಜೆಡಿಎಸ್ ಪಕ್ಷದ ತೀರ್ಥಹಳ್ಳಿ ತಾಲೂಕಿನ ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್ ನೇತೃತ್ವದಲ್ಲಿ ತಹಶೀಲ್ದಾರರಿಗೆ ಮನವಿ ಪತ್ರ ನೀಡಲಾಯಿತು.
ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಅವರ ವಿರುದ್ಧ ಏಕವಚನದಿಂದ ಕೆಟ್ಟ ಪದಗಳನ್ನು ಬಳಸಿ ಪತ್ರ ಬರೆದು ಅಹಂಕಾರ, ದರ್ಪ ತೋರಿರುವ ಪೊಲೀಸ್ ಅಧಿಕಾರಿ ಎಂ. ಚಂದ್ರಶೇಖರ್ ನಡೆ ಖಂಡನೀಯ.
ಭೂ ವ್ಯವಹಾರವೊಂದರಲ್ಲಿ 20 ಕೋಟಿಗೆ ಬೇಡಿಕೆ ಇಟ್ಟಿದ್ದ ಚಂದ್ರಶೇಖರ್ ವಿರುದ್ಧ ಇನ್ಸ್ ಪೆಕ್ಟರ್ ಒಬ್ಬರು ದೂರು ನೀಡಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಪತ್ನಿ ಹೆಸರಿನಲ್ಲಿ ರಾಜಕಾಲುವೆ ಮೇಲೆ ಬಹುಮಹಡಿಯ ವಾಣಿಜ್ಯ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗುತ್ತಿದೆ ಮತ್ತು ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವ ಅಕ್ರಮಗಳ ಬಗ್ಗೆಯೂ ತನಿಖೆ ನಡೆಯಬೇಕಲ್ಲವೇ..? ಎಂದು ದಾಖಲೆಗಳ ಸಹಿತ ಮಾಧ್ಯಮ ಮುಂದೆ ಕೇಂದ್ರ ಸಚಿವರು ಪ್ರಶ್ನಿಸಿದರು.
ಅಧಿಕಾರಿ ಎಂ.ಚಂದ್ರಶೇಖರ್ ಅವರ ಅಕ್ರಮ, ಭ್ರಷ್ಟಾಚಾರಗಳನ್ನು ದಾಖಲೆಗಳ ಸಮೇತ ಮಾಧ್ಯಮಗಳ ಮುಂದೆ ಬಯಲು ಮಾಡಿದ್ದು, ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ತಮ್ಮ ಮೇಲಿನ ಆರೋಪಗಳು ನಿಜವಲ್ಲವಾದರೇ, ಕಾನೂನಿನಡಿಯಲ್ಲಿ ಉತ್ತರ ನೀಡಬಹುದಿತ್ತು. ಅದನ್ನು ಬಿಟ್ಟು ಇಂಥ ಕೀಳು ಮಟ್ಟದ ಬಹಿರಂಗ ಹೇಳಿಕೆ ನೀಡಿದ್ದಕ್ಕೆ ಆ ಅಧಿಕಾರಿಯ ಮೇಲೆರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಮುಖೇನ ರಾಜ್ಯಪಾಲರಿಗೆ ಮನವಿ ಪತ್ರವನ್ನು ನೀಡಲಾಯಿತು.
ಜೆಡಿಎಸ್ ತಾಲೂಕು ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್. ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಮೇದೊಳಗೆ ರಾಮಸ್ವಾಮಿ, ಯುವ ಜನತಾದಳದ ಅಧ್ಯಕ್ಷ ರಾಘವೇಂದ್ರ ಗೌಡ ತಲಬಿ,,ಶೈಲಾ, ವಿನಯ್ ಬಸವಾನಿ, ಆನಂದ್ ಹೆಸರುಗಟ್ಟ, , ರವಿ ಗೌಡ, ಸುರೇಂದ್ರ ನೆಂಪೆ, ಗುರುದತ್ ಹಾಗೂ ಜೆಡಿಎಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.