ಗಾಯನ ಲೋಕದಲ್ಲಿ ಬೆಳೆಯುತ್ತಿರುವ ಪ್ರತಿಭೆ ವರ್ಷಿಣಿ ಪಿ ಭಟ್
– ವಾಯ್ಸ್ ಆಫ್ ಕರ್ನಾಟಕ ಸಿಂಗಿಂಗ್ ರನ್ನರ್, ಹತ್ತು ಹಲವು ಪ್ರಶಸ್ತಿ
– ತಮ್ಮ ಕಂಠದ ಮೂಲಕವೇ ಜನರ ಮನ ಗೆದ್ದ ಗಾಯಕಿ!
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಹೆಮ್ಮೆಯ ಯುವ ಗಾಯಕಿ, ತೀರ್ಥಹಳ್ಳಿ ತಾಲ್ಲೂಕು ಪಟ್ಲಮನೆಯ ವರ್ಷಿಣಿ ಪಿ ಭಟ್ ಈಗ ಎರಡು ಸ್ಪರ್ಧೆಗಳಲ್ಲಿ ಗೆಲ್ಲುವ ಮೂಲಕ ಗಾಯನ ಲೋಕದಲ್ಲಿ ಮಲೆನಾಡ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ.
ವರ್ಷಿಣಿ ಪಿ ಭಟ್ ಪ್ರಕಾಶ್ ಭಟ್ ಹಾಗೂ ಲಲಿತಾ ದಂಪತಿಯ ಪುತ್ರಿ.
ಈಗಾಗಲೇ ಅನೇಕ ಪ್ರಶಸ್ತಿಗಳ ಜತೆ ಮಲೆನಾಡಿನ ಬೆಸ್ಟ್ ಹಾಡುಗಾರರಲ್ಲಿ ಒಬ್ಬರಾದ ವರ್ಷಿಣಿ ಸೆಪ್ಟೆಂಬರ್ 21ರಂದು ಶಿವಮೊಗ್ಗದಲ್ಲಿ ನಡೆದ ವಿಜಯ ವಾಯ್ಸ್ ಕನ್ನಡ ನ್ಯೂಸ್ ಮೀಡಿಯಾ ನೆಟ್ವರ್ಕ್ ಅರ್ಪಿಸುವ ವಿಜಯ ವಾಯ್ಸ್ ಆಫ್ ಕರ್ನಾಟಕ ಸಿಂಗಿಂಗ್ ಕಾಂಪಿಟೇಶನ್ ನಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಗೆದ್ದಿದ್ದಾರೆ ಹಾಗೂ ಆಗಸ್ಟ್ 30ರಂದು ಭದ್ರಾವತಿಯಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಮಟ್ಟದ ಕನ್ನಡ ಚಲನಚಿತ್ರ ಗೀತೆಗಳು ಕರೋಕೆ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಅಲ್ಲೂ ಕೂಡ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ವರ್ಷಿಣಿ ಪಿ ಭಟ್ ಇವರು ಶಿವಮೊಗ್ಗದ ವಿಕಾಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರು ಪ್ರಸ್ತುತ ವಿದ್ವಾನ್ ಅರುಣ್ ಕುಮಾರ್ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ಅಭ್ಯಾಸ ಮಾಡುತ್ತಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಪ್ರತಿಭೆಯಾದ ಇವರು ತಾಲೂಕಿನ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನತೆಯ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇವರು ಇನ್ನು ಮಹತ್ತರ ಹೆಜ್ಜೆಯನ್ನು ಇಟ್ಟು ಯಶಸ್ಸಿನ ಉತ್ತುಂಗವನ್ನು ತಲುಪಲಿ ಎಂಬುದು ಮಲೆನಾಡಿಗರ ಹಾರೈಕೆ.