ರೋಗದಿಂದ ನರಳುತ್ತಿದ್ದ ಹೆಬ್ಬಾವು: ರಕ್ಷಿಸಿದ ಲೇಡಿ ಡಾಕ್ಟರ್ಸ್!
– ಮಂಗಳೂರಲ್ಲಿ ಹೆಬ್ಬಾವಿಗೆ ಆಪರೇಷನ್
– ಏನಿದು ಸ್ಟೋರಿ…? ಆಪರೇಷನ್ ಹೇಗೆ..?
NAMMUR EXPRESS NEWS
ಮಂಗಳೂರು: ಹೆಬ್ಬಾವೊಂದಕ್ಕೆ ಮಲಬದ್ಧತೆ ಸಮಸ್ಯೆ ಎದುರಾಗಿ ಕೊನೆಗೆ ಅದಕ್ಕೆ ಆಪರೇಷನ್ ಮಾಡಿ ಸಮಸ್ಯೆ ಪರಿಹಾರ ಮಾಡಿದ ಈ ಘಟನೆ ಮಂಗಳೂರಿನಲ್ಲಿ ವರದಿ ಆಗಿದೆ. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದ ಹಾವಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಅದರ ಸಂಕಟ ನಿವಾರಣೆ ಮಾಡಿದ್ದು ಒಂದು ಲೇಡಿ ಡಾಕ್ಟರ್ಸ್ ಟೀಮ್. ಕೆಲವು ದಿನಗಳ ಹಿಂದೆ ಮಂಗಳೂರಿನ ಕದ್ರಿಯಲ್ಲಿ ಒಂದು ಹೆಬ್ಬಾವು ಪತ್ತೆಯಾಗಿತ್ತು. ಮನುಷ್ಯರು ಅತ್ತಿಂದಿತ್ತ ಹೋದರೂ ಸ್ವಲ್ಪವೂ ಚಲನೆ ಇಲ್ಲದೆ ಅದು ಬಿದ್ದುಕೊಂಡಿತ್ತು. ಅದನ್ನು ನೋಡಿದ ಯಾರೋ ಉರಗ ಪ್ರೇಮಿಗಳಿಗೆ ವಿಷಯ ತಿಳಿಸಿದ್ದರು. ಉರಗ ಪ್ರೇಮಿ ಧೀರಜ್ ಗಾಣಿಗ ಅವರು ಬಂದು ನೋಡಿದಾಗ ಹಾವು ಏನೋ ಸಮಸ್ಯೆಯಿಂದ ಬಳಲುತ್ತಿರುವುದು ಕಂಡಿತು.
ಮಂಗಳೂರಿನಲ್ಲಿ ಪ್ರಾಣಿಗಳಿಗೆ ಏನೇ ಆರೋಗ್ಯ ಸಮಸ್ಯೆ ಎದುರಾದರೂ ರಕ್ಷಣೆಗೆ ಬರುವ ಲೇಡಿ ಡಾಕ್ಟರ್ಸ್ ಟೀಮ್ ಕೂಡಲೇ ಈ ಹಾವನ್ನು ಡಾ.ಮೇಘನಾ ಪೆಮ್ಮಯ್ಯ, ಡಾ.ಯಶಸ್ವಿ ನಾರಾವಿ, ಡಾ.ಕೀರ್ತನಾ ಜೋಷಿ, ನಫೀಸಾ ಕೌಸರ್, ಸಮೀಕ್ಷಾ ರೆಡ್ಡಿ ಅವರ ತಂಡ ತನ್ನ ವಶಕ್ಕೆ ಪಡೆಯಿತು. ಹಾವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದ ಟೀಮ್ ಹಾವಿನ ಸ್ಕ್ಯಾನ್ ನಡೆಸಿತು. ಆಗ ಹಾವಿನ ಹೊಟ್ಟೆಯಲ್ಲಿ ಮಲ ತುಂಬಿಕೊಂಡಿರುವುದು ಪತ್ತೆಯಾಯಿತು. ವಿಪರೀತ ಮಲ ತುಂಬಿಕೊಂಡು ಅದನ್ನು ಹೊರಹಾಕಲಾಗದೆ ಹೊಟ್ಟೆ ಉಬ್ಬರಿಸಿ ಅದು ಸಂಕಟದಲ್ಲಿತ್ತು. ಇದನ್ನು ಗಮನಿಸಿದವರು ತಮ್ಮ ವೈದ್ಯಕೀಯ ಜಾಣ್ಮೆಯನ್ನು ಮೆರೆದರು. ಕೂಡಲೇ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಐವರೂ ವೈದ್ಯರು ಸೇರಿ ಅರಿವಳಿಕೆ ಕೊಟ್ಟು ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೆಬ್ಬಾವಿನ ಹೊಟ್ಟೆಯಲ್ಲಿ ತುಂಬಿಕೊಂಡಿದ್ದ ಮಲವನ್ನು ಹೊರತೆಗೆದರು ಮತ್ತು ಹಾಗೇ ಹೊಟ್ಟೆಗೆ ಹೊಲಿಗೆ ಹಾಕಿದರು.