ಮಂಗಳ ವಾರ ಪತ್ರಿಕೆ ಮುದ್ರಣಕ್ಕೆ ವಿದಾಯ!
– ಪ್ರಿಂಟ್ ಮುದ್ರಣ ನಿಲ್ಲಿಸಿದ ಮಂಗಳ ಪತ್ರಿಕೆ
– ನಾಲ್ಕು ದಶಕಗಳ ಸುದೀರ್ಘ ಪ್ರಯಾಣ ಅಂತ್ಯ
– ಸಾವಿರಾರು ಜನರ ಮೆಚ್ಚಿನ ಪತ್ರಿಕೆ, ಸಾವಿರಾರು ಜನರನ್ನು ಬೆಳೆಸಿದ ಹೆಮ್ಮೆ
NAMMUR EXPRESS NEWS
ಬೆಂಗಳೂರು/ಮಂಗಳೂರು: ಮಂಗಳ… ಇದು ಕನ್ನಡದ ಖ್ಯಾತ ವಾರ ಪತ್ರಿಕೆ. ಸಾವಿರಾರು ಜನರ ಮನೆಯ ಮೆಚ್ಚಿನ ಪತ್ರಿಕೆ, ಮಕ್ಕಳ ಇಷ್ಟದ ಪತ್ರಿಕೆ. ಸಾವಿರಾರು ಜನರ ಸಾಹಿತ್ಯ, ಪ್ರತಿಭೆ ಬೆಳೆಸಿದ್ದ ಪತ್ರಿಕೆ ತನ್ನ ಕೊನೆ ಮುದ್ರಣದಲ್ಲಿ ವಿದಾಯ ಹೇಳಿ ತನ್ನ ಪ್ರಯಾಣ ನಿಲ್ಲಿಸಿದೆ.ನಾಲ್ಕು ದಶಕಗಳಿಂದ ಹಲವಾರು ಓದುಗರ ಮನಗೆದ್ದ ವಾರಪತ್ರಿಕೆ ‘ಮಂಗಳ’ ತನ್ನ ಮುದ್ರಣವನ್ನು ಸ್ಥಗಿತಗೊಳಿಸಿದೆ. ಈ ಕುರಿತು ವಾರ ಪತ್ರಿಕೆ ಮಂಗಳದ ಸಂಪಾದಕರು ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದುಈ ವಾರ ಕೊನೆಯ ಸಂಚಿಕೆ ಮುದ್ರಣಗೊಂಡಿದೆ ಎಂದು ತಿಳಿಸಿದ್ದಾರೆ.
ಜನ ಮನ ಗೆದ್ದಿದ್ದ ವಾರ ಪತ್ರಿಕೆ
40 ವರ್ಷಗಳಿಂದ ಹಲವಾರು ಜನಪ್ರಿಯ ಧಾರಾವಾಹಿಗಳನ್ನು ತನ್ನ ಪತ್ರಿಕೆಯಲ್ಲಿ ಪ್ರಕಟ ಮಾಡುವ ಮೂಲಕ ಜನರ ಮನಸ್ಸನ್ನು ಗೆದ್ದು ಕನ್ನಡಿಗರ ಮನೆ ಮಾತಾಗಿದ್ದ ಮಂಗಳ ಪತ್ರಿಕೆ ತನ್ನ ಪ್ರಯಾಣವನ್ನು ನಿಲ್ಲಿಸಿರುವುದು, ಅನೇಕ ಓದುಗರ ನಿರಾಸೆಗೊಂಡಿದ್ದಾರೆ. ಕೊರೋನಾ ನಂತರ ಪತ್ರಿಕೋದ್ಯಮಕ್ಕೆ ಸಾಕಷ್ಟು ಸಂಕಟಗಳು ಎದುರಾಯಿತು. ಡಿಜಿಟಲ್ ಮಾಧ್ಯಮಗಳು ವೇಗ ಪಡೆದುಕೊಂಡವು. ಇದು ಮಂಗಳ ವಾರಪತ್ರಿಕೆಗೆ ಕೂಡ ಪರಿಣಾಮವನ್ನು ಉಂಟು ಮಾಡಿತು. ಹಾಗಿದ್ದೂ ಕಳೆದ ಮೂರು ವರ್ಷಗಳ ಕಾಲ ಮಂಗಳವನ್ನು ಮುನ್ನಡೆಸಿದರು. ಇದೀಗ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಅನಿವಾರ್ಯವಾಗಿ ಪತ್ರಿಕೆ ಮುದ್ರಣ ಸ್ಥಗಿತಗೊಂಡಿದೆ.
ಟಿವಿ, ಮೊಬೈಲ್ ಇಲ್ಲದ ಕಾಲದ ಓದುಗರ ಸಂಗಾತಿ
ಗ್ರಾಮೀಣ ಭಾಗದಲ್ಲಿ ಟಿವಿ, ಮೊಬೈಲ್ ಇಲ್ಲದೇ ಇರುವ ಸಂದರ್ಭದಲ್ಲಿ ಧಾರಾವಾಹಿ, ಕತೆ, ಕವನ ಸೇರಿದಂತೆ ಸಮಗ್ರ ಓದಿಗೆ ಮಂಗಳ ಪತ್ರಿಕೆ ಬಹುತೇಕ ಮನೆಗಳಿಗೆ ಬರುತ್ತಿತ್ತು. ಈ ಕತೆಗಳು ಕಾರ್ಯಕ್ರಮಗಳ ಸಂದರ್ಭ ಚರ್ಚೆಯೂ ಆಗುತ್ತಿತ್ತು. ಗ್ರಾಮೀಣ ಭಾಗದ ಓದುಗರಿಗೆ ಅಂದು ಮಂಗಳ ವಾರದ ಖಾಯಂ ಪುಸ್ತಕ, ಅನೇಕ ಓದುಗರನ್ನು ಮಂಗಳ ಸೃಷ್ಟಿ ಮಾಡಿತ್ತು.
ಕರಾವಳಿಯಲ್ಲಿ ಅತ್ಯಧಿಕ ಓದುಗರು!
ಮಕ್ಕಳ ಸಂಚಿಕೆ ‘ಬಾಲಮಂಗಳ’ ಕಣ್ಮುಚ್ಚಿ ವರ್ಷಗಳೇ ಆದವು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದಕ್ಕೆ ಅತ್ಯಧಿಕ ಪ್ರಸರಣ ಇತ್ತು. ದಕ್ಷಿಣ ಕನ್ನಡವಷ್ಟೇ ಅಲ್ಲ, ರಾಜ್ಯದಾದ್ಯಂತ ಹಲವು ಕವಿಗಳು, ಲೇಖಕರು, ಕತೆಗಾರರನ್ನು ಬೆಳಕಿಗೆ ತಂದ ಕೀರ್ತಿ ಈ ವಾರಪತ್ರಿಕೆಗೆ ಸಲ್ಲುತ್ತದೆ.