ಇನ್ನು ಮುಂದೆ ರಕ್ತ ಮಾರಾಟ ಮಾಡುವಂತಿಲ್ಲ!
– ಸಂಸ್ಕರಣಾ ಶುಲ್ಕ ಹೊರತುಪಡಿಸಿ ಉಳಿದೆಲ್ಲಾ ಶುಲ್ಕ ಮನ್ನಾ!
– ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮಾರ್ಗಸೂಚಿ!
NAMMUR EXPRESS NEWS
ನವದೆಹಲಿ: ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು, ಇನ್ನು ಮುಂದೆ ಆಸ್ಪತ್ರೆಗಳು ಅಥವಾ ಖಾಸಗಿ ರಕ್ತ ಬ್ಯಾಂಕುಗಳು ರಕ್ತವನ್ನು ಮಾರಾಟ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ. ಸಂಸ್ಕರಣಾ ಶುಲ್ಕ ಒಂದನ್ನು ಬಿಟ್ಟು ಉಳಿದೆಲ್ಲಾ ಶುಲ್ಕಗಳನ್ನು ರದ್ದು ಮಾಡಿರುವುದಾಗಿ ತಿಳಿಸಿದೆ. ಈಗ ಆಸ್ಪತ್ರೆಗಳು ಮತ್ತು ಖಾಸಗಿ ರಕ್ತ ಬ್ಯಾಂಕುಗಳಲ್ಲಿ ರಕ್ತಕ್ಕಾಗಿ ಹೆಚ್ಚು ಶುಲ್ಕ ವಿಧಿಸಲಾಗುತ್ತಿದೆ ಎಂಬುದನ್ನು ಗಮನಿಸಿ ಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಡೆದ ಡ್ರಗ್ಸ್ ಕನ್ಸಲೇಟಿವ್ ಕಮಿಟಿಯ 62ನೇ ಸಭೆಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.
ದೇಶದ ಆಸ್ಪತ್ರೆಗಳು ಮತ್ತು ಖಾಸಗಿ ರಕ್ತ ಬ್ಯಾಂಕುಗಳು ಪ್ರತಿ ಯೂನಿಟ್ ರಕ್ತಕ್ಕೆ ಹೆಚ್ಚುವರಿ ಶುಲ್ಕ ವಿಧಿಸುತ್ತವೆ ಎಂದು ತಿಳಿದುಬಂದಿದೆ. ಹೀಗೆ ವಿಧಿಸಲಾಗುವ ಮೊತ್ತವು ಪ್ರತಿ ಯೂನಿಟ್ಗೆ ₹ 2,000 ರಿಂದ 10,000ರ ನಡುವೆ ಇರುತ್ತದೆ. ಅಪರೂಪದ ರಕ್ತದ ಪ್ರಕಾರಗಳ ವಿಚಾರದಲ್ಲಿ ಶುಲ್ಕ ಹೆಚ್ಚಾಗುತ್ತದೆ. ಹೀಗಾಗಿ, ಹಣ ಹೆಚ್ಚಿದ್ದರೂ, ರೋಗಿಯು ಶುಲ್ಕ ಪಾವತಿಸಿ ಖರೀದಿ ಮಾಡುತ್ತಾನೆ.
ಸಂಸ್ಕರಣಾ ಶುಲ್ಕ ಎಷ್ಟು?
ಇನ್ನು ಮುಂದೆ ₹250ರಿಂದ 1,550ರ ವರೆಗೆ ಸಂಸ್ಕರಣಾ ಶುಲ್ಕ ವಿಧಿಸಬಹುದು. ಸಂಪೂರ್ಣ ರಕ್ತದ ಪ್ಯಾಕೆಟ್ ಮತ್ತು ಪ್ಯಾಕ್ ಮಾಡಿದ ಕೆಂಪು ರಕ್ತ ಕಣಗಳನ್ನು ವಿತರಿಸುವಾಗ 1,550 ಪಡೆಯಬಹುದು. ತಾಜಾ ಹೆಪ್ಪುಗಟ್ಟಿದ ಪ್ಲಾಸ್ಮಾ ಮತ್ತು ಪ್ಲೇಟೈಟ್ ವಿಚಾರದಲ್ಲಿ 400 ರು. ಶುಲ್ಕ ವಿಧಿಸಬಹುದು. ಸರಕಾರಿ ಆಸ್ಪತ್ರೆಗಳಲ್ಲಿ ಈ ಸಂಸ್ಕರಣಾ ಶುಲ್ಕಗಳು ಕಡಿಮೆ ಇರುತ್ತದೆ. ಬಿಳಿ ರಕ್ತ ಕಣಗಳು, ಕೆಂಪು ರಕ್ತ ಕಣಗಳು, ಹೆಪ್ಪುಗಟ್ಟಿದ ಪ್ಲಾಸ್ಮಾ ಮತ್ತು ಪ್ಲೇಟೈಟ್ಗಳಂತಹ ಘಟಕಗಳಲ್ಲಿ 200ರಿಂದ 1,100 ರು. ಪಡೆಯಬಹುದಾಗಿದೆ. ವಿವಿಧ ರಾಜ್ಯಗಳಿಗೆ ಈ ಸಂಬಂಧ ಪತ್ರ ಬರೆಯಲಾಗಿದ್ದು, 2022ರ ಪರಿಷ್ಕೃತ ಮಾರ್ಗಸೂಚಿ ಅನು ಸರಿಸುವಂತೆ ಸೂಚಿಸಲಾಗಿದೆ.