– ಉದ್ಯೋಗಿಗೆ ಕಿರುಕುಳ ನೀಡುತ್ತಿದ ಮುಡಾ ಆಯುಕ್ತ!
– ಚಿಲ್ಲರೆ ಇಲ್ಲವೆಂದು ಬಸ್ ನಿಂದ ಇಳಿಸಿದ ಕಂಡಕ್ಟರ್!
– ಬ್ಯಾನರ್ ಹರಿದು ಹಾಕಿದ ಪ್ರಕರಣ; ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
NAMMUR EXPRESS NEWS
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಆಯುಕ್ತ ಮನ್ಸೂರ್ ಅಲಿ ಲೈಂಗಿಕ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆಂದು ಕಚೇರಿ ಸಿಬ್ಬಂದಿ ಉರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಡಾ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಬೆರಳಚ್ಚುಗಾರ್ತಿಯಾಗಿ ಕೆಲಸ ಮಾಡಿಕೊಂಡಿರುವ ಮಹಿಳೆಯೊಬ್ಬರು ಪೊಲೀಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ಮುಡಾ ಆಯುಕ್ತ ಮನ್ಸೂರು ಆಲಿ ತನಗೆ ಲೈಂಗಿಕ, ಮಾನಸಿಕ, ದೈಹಿಕ ಕಿರುಕುಳ ನೀಡಿರುತ್ತಾರೆ ಎಂಬುದಾಗಿ ಪ್ರಸ್ತುತ ತನಿಖಾ ಹಂತದಲ್ಲಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಚಿಲ್ಲರೆ ಇಲ್ಲವೆಂದು ಅರ್ಥ ದಾರಿಯಲ್ಲಿ ವ್ಯಕ್ತಿಯನ್ನು ಇಳಿಸಿದ ಕಂಡಕ್ಟರ್
ಕಡಬ : ಚಿಲ್ಲರೆ ನೀಡಿಲ್ಲವೆಂಬ ಕಾರಣಕ್ಕೆ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ವೃದ್ಧರೋರ್ವರನ್ನು ಅರ್ಧ ದಾರಿಯಲ್ಲೇ ಇಳಿಸಿಹೋದ ಘಟನೆ ಕಡಬದಲ್ಲಿ ನಡೆದಿದೆ. ಬೆಳಿಗ್ಗೆ 9.30 ಗಂಟೆಗೆ ಕಲ್ಲುಗುಡ್ಡೆಯಿಂದ ಇಚಿಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ತೆರಳುವ ಕೆಎಸ್ಆರ್ಟಿಸಿ ಬಸ್ಸಿಗೆ ಹತ್ತಿದ ಕಲ್ಲುಗುಡ್ಡೆ ನಿವಾಸಿ ವೃದ್ಧರೋರ್ವರು ಕಾಂಚನ ಎಂಬಲ್ಲಿ ಇಳಿಸುವಂತೆ 200 ರೂ. ನೀಡಿದ್ದರು. ಈ ವೇಳೆ ಕಂಡಕ್ಟರ್ ಚಿಲ್ಲರೆ ಕೇಳಿದ್ದು, ವೃದ್ಧರು ಚಿಲ್ಲರೆ ಇಲ್ಲವೆಂದಾಗ ಅರ್ಧ ದಾರಿಲ್ಲೇ ಇಳಿಸಿದ್ದಾನೆ ಎನ್ನಲಾಗಿದೆ. ಕಾಂಚನದಲ್ಲಿ ಇಳಿಯುವ ವೇಳೆ ಚಿಲ್ಲರೆ ನೀಡಿದರೆ ಸಾಕೆಂದು ವೃದ್ಧರು ಮನವಿ ಮಾಡಿಕೊಂಡರಾದರೂ, ಕ್ಯಾರೇ ಎನ್ನದ ಕಂಡಕ್ಟರ್ ಗೋಳಿಯಡ್ಕ ಎಂಬಲ್ಲಿ ಇಳಿಸಿ ಹೋಗಿರುವುದಾಗಿ ಎಂದು ತಿಳಿದು ಬಂದಿದೆ. ನಿರ್ವಾಹಕನ ಈ ಅಮಾನವೀಯ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಯ: ಬ್ಯಾನರ್ ಹರಿದು ಹಾಕಿದ ಪ್ರಕರಣ – ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಸುಳ್ಯ: ಅಯೋಧ್ಯೆ ಪ್ರತಿಷ್ಠೆ ಸಲುವಾಗಿ ಸುಳ್ಯ ನಗರದ ರಸ್ತೆ ಬದಿ ಹಾಕಿದ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳನ್ನು ಬಂಧಿಸಲು ವಿಫಲವಾದ ಪೊಲೀಸ್ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ಸುಳ್ಯ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಭಾನುವಾರ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ರಾಮ ಭಕ್ತರು ಹಾಕಿದ ಬ್ಯಾನರನ್ನು ಹರಿದು ಹಾಕಿ ರಾಮಂದಿರವನ್ನೇ ಕಟ್ ಮಾಡುವ ಉದ್ದೇಶ ಏನಿದೆ? ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು. ಶಾಂತಿ ಸುವ್ಯವಸ್ಥೆಗೆ ಕೈಜೋಡಿಸಬೇಕು. ಪೊಲೀಸ್ ಇಲಾಖೆ ಆರೋಪಿಗಳನ್ನು ಕೂಡಲೇ ಬಂಧಿಸಲಿ ಎಂದು ಆಗ್ರಹಿಸಿದರು.
ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, ಹಿಂದುತ್ವಕ್ಕೆ ಧಕ್ಕೆ ಆದಾಗ ಹೋರಾಟ ನಡೆಸಿದ ಊರು ಸುಳ್ಯ. ಇದೀಗ ಮತ್ತೆ ಮತ್ತೆ ಹಿಂದೂಗಳನ್ನು ಕೆದಕುವ ಕೆಲಸ ನಡೆಯುತ್ತಿದೆ. ತಪ್ಪು ಯಾರು ಮಾಡಿದ್ದರು ಅವರನ್ನು ಹಿಂದೂ ಸಮಾಜ ಖಂಡಿಸುತ್ತದೆ. ಬ್ಯಾನರ್ ಹಾಕಿದ್ದನ್ನು ಹರಿದ ವಿರುದ್ಧ ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸಲು ಪ್ರತಿಭಟನೆ ನಡೆಸಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಮುಂದೆ ಸುಳ್ಯ ತಾಲೂಕು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದರು.