ರಾಮಜ್ಯೋತಿ ಪಡೆದು ಕಾಶಿಗೆ ಹೊರಟ ಮುಸ್ಲಿಂ ಮಹಿಳೆಯರು!
– ಯಾರೀ ಮಹಿಳೆಯರು ಗೊತ್ತಾ..?
– ಸೌಹಾರ್ದಕ್ಕಾಗಿ ಹೀಗೊಂದು ನಡೆ!
NAMMUR EXPRESS NEWS
ನವದೆಹಲಿ: ರಾಷ್ಟ್ರಕ್ಕೆ ರಾಷ್ಟ್ರವೇ ಕಾತುರದಿಂದ ಕಾಯುತ್ತಿರುವ ಅಯೋಧ್ಯೆಯ ರಾಮನ ಪ್ರತಿಷ್ಠಾಪನೆಗೆ ತಮ್ಮಿಂದಾದ ಕಾಣಿಕೆಯನ್ನು ಸಮಸ್ತ ಜನರೂ ನೀಡುತ್ತಿರುವ ಸಂದರ್ಭದಲ್ಲಿ ಇಲ್ಲೊಂದು ಕಾಣಿಕೆ ಹೀಗಿದೆ. ಮತಗಳ ನಡುವಿನ ಸೌಹಾರ್ದದ ಕೊಂಡಿ ಬೆಸೆಯಲು ಮುಸ್ಲಿಂ ಮಹಿಳೆಯರಾದ ನಜೀನ್ ಅನ್ಸಾರಿ ಹಾಗೂ ನಜ್ಮಾ ಪರ್ವೀನ್ ರಾಮ ಜ್ಯೋತಿ ತರಲು ಕಾಶಿಯಿಂದ ಅಯೋಧ್ಯೆಗೆ ತೆರಳಿದ ಅಪರೂಪದ ವಿದ್ಯಮಾನವಿದು. ನಜೀನ್ ಅನ್ಸಾರಿ, ಮುಸ್ಲಿಂ ಮಹಿಳಾ ಪ್ರತಿಷ್ಠಾನದ ರಾಷ್ಟ್ರೀಯ ಅಧ್ಯಕ್ಷೆ. ರಾಮಪಂಥ್ ಆಯೋಜಿಸಿದ್ದ ರಾಮಜ್ಯೋತಿ ಯಾತ್ರೆಯ ನೇತೃತ್ವ ವಹಿಸಿದ್ದ ಆಕೆ, ತಂಡವನ್ನು ಕಾಶಿಯಿಂದ ಅಯೋಧ್ಯೆಗೆ ಮುನ್ನಡೆಸಿದರು.
ಅಲ್ಲಿ ಮಹಾಂತ ಶಂಭು ಪ್ರಭು ದೇವಾಚಾರ್ಯ ಅವರಿಂದ ರಾಮಜ್ಯೋತಿ ಪಡೆದ ಆಕೆ, ಈ ದೇಶ ರಾಮನದ್ದು ಎಂದು ಹೇಳಿದರು. ರಾಮನ ರಾಷ್ಟ್ರವಿದು, ಅವನಿಲ್ಲದೆ ಭಾರತದ ಶ್ರೇಷ್ಠ ಸಂಸ್ಕೃತಿಯನ್ನು ವಿವರಿಸಲು ಸಾಧ್ಯವಿಲ್ಲ. ಶಾಂತಿ ಮತ್ತು ಏಕತೆಗಾಗಿ ಪ್ರತಿ ಮನೆಯಲ್ಲೂ ರಾಮಜ್ಯೋತಿ ಬೆಳಗಿಸುವುದು ಅಗತ್ಯ. ನಾವು ರಾಮನ ಮಕ್ಕಳೇ. ಯಾವುದೇ ಕಾರಣಕ್ಕೂ ಅವನಿಂದ ಬೇರ್ಪಡುವುದು ಸಾಧ್ಯವಿಲ್ಲ. ಮುಸ್ಲಿಮರು ಈ ಸಂತೋಷದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು, ಎಂದು ಕರೆ ನೀಡಿದರು.
ರಾಮನ ಆದರ್ಶಗಳು ಮತ್ತು ಚಾರಿತ್ರ್ಯ ಇಂದು ಇಡೀ ಜಗತ್ತಿನ ಅಗತ್ಯವಾಗಿದೆ. ರಾಮನ ಹೆಸರು ಜಗತ್ತನ್ನು ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಮುಕ್ತಗೊಳಿಸಲು ಸಮರ್ಥವಾಗಿದೆ. ರಾಮಜ್ಯೋತಿಯು ಮನೆಗಳನ್ನು ಮಾತ್ರವಲ್ಲದೆ ಜನರ ಆತ್ಮವನ್ನೂ ಬೆಳಗಿಸುತ್ತದೆ ಎಂದರು. ಇನ್ನು ನಜ್ಮಾ ಮಾತನಾಡಿ, ‘ಜನರು ಧರ್ಮವನ್ನು ಬದಲಾಯಿಸಬಹುದು ಆದರೆ ಪೂರ್ವಜರು, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು. ಈ ಯಾತ್ರೆ ಸಂದರ್ಭದಲ್ಲಿ ಕಾಶಿಯಿಂದ ಅಯೋಧ್ಯೆವರೆಗೆ ದಾರಿಯುದ್ದಕ್ಕೂ ಅನೇಕ ಸ್ಥಳಗಳಲ್ಲಿ ಮುಸ್ಲಿಂ ಸಮುದಾಯದ ಜನರು ಯಾತ್ರೆಯಲ್ಲಿ ಭಾಗವಹಿಸಿದ ಸದಸ್ಯರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ರಾಮಜ್ಯೋತಿ ಪಡೆದು ಇಬ್ಬರೂ ಭಾನುವಾರ ಕಾಶಿಗೆ ಮರಳಿದ್ದಾರೆ.
ಯಾರೀ ಮಹಿಳೆಯರು?:
ಕಾಶಿ ನಿವಾಸಿಗಳಾದ ನಜೀನ್ ಅನ್ಸಾರಿ ಮತ್ತು ಡಾ. ನಜ್ಮಾ ಪರ್ವೀನ್ ಕಳೆದ 17 ವರ್ಷಗಳಿಂದ ರಾಮನ ಭಕ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. 2006ರಲ್ಲಿ ಭಯೋತ್ಪಾದಕರು ಕಾಶಿಯ ಸಂಕಟ್ ಮೋಚನ್ ದೇಗುಲದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದಾಗ ನಜೀನ್ ಮತ್ತು ಡಾ.ನಜ್ಮಾ ಅವರು 70 ಮುಸ್ಲಿಂ ಮಹಿಳೆಯರೊಂದಿಗೆ ಸಂಕಟ್ ಮೋಚನ್ ದೇವಸ್ಥಾನಕ್ಕೆ ತೆರಳಿ ಹನುಮಾನ್ ಚಾಲೀಸಾ ಪಠಿಸಿದರು. ಈ ಮೂಲಕ ಹಿಂದೂ-ಮುಸ್ಲಿಂ ನಡುವೆ ಹುಟ್ಟಿಕೊಂಡಿದ್ದ ದ್ವೇಷವನ್ನು ಕೊನೆಗಾಣಿಸುವ ಪ್ರಯತ್ನ ಮಾಡಿದರು. ಪ್ರತಿ ವರ್ಷ ರಾಮನವಮಿ ಮತ್ತು ದೀಪಾವಳಿಯಂದು ಅವರು ನೂರಾರು ಮುಸ್ಲಿಂ ಮಹಿಳೆಯರೊಂದಿಗೆ ಭಗವಾನ್ ಶ್ರೀರಾಮನ ಮಹಾ ಆರತಿಯನ್ನು ಮಾಡುತ್ತಾರೆ. ನಜೀನ್ ಅವರು ಹನುಮಾನ್ ಚಾಲೀಸಾವನ್ನು ಉರ್ದುವಿನಲ್ಲಿ ಬರೆದಿದ್ದಾರೆ. ಡಾ. ನಜ್ಮಾ ಅವರು ಬಿಎಚ್ಯುನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪಿಎಚ್ಡಿ ಮಾಡಿದ್ದಾರೆ.
ಪೂರ್ವಜರನ್ನು ಸೇರಿಸುವ ಕಾರ್ಯಕ್ರಮ:
ಜನವರಿ 7 ರಂದು ಕಾಶಿಯ ಸುಭಾಷ್ ಭವನದಲ್ಲಿ ವಿಶಾಲ ಭಾರತ ಸಂಸ್ಥಾನ ಮತ್ತು ರಾಮಪಂಥ್ ವತಿಯಿಂದ ‘ನಿಮ್ಮ ಪೂರ್ವಜರನ್ನು ಸೇರಿಕೊಳ್ಳಿ, ರಾಮನನ್ನು ಸೇರಿಕೊಳ್ಳಿ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪೂರ್ವ ಉತ್ತರ ಪ್ರದೇಶದ ನೂರಾರು ಮುಸ್ಲಿಂ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿದ್ದಾರೆ.