ತೀರ್ಥಹಳ್ಳಿಯ ಆಗುಂಬೆ ಬಳಿ 50 ಅಡಿ ಗುಡ್ಡ ಕುಸಿತ!
– ನಾಲೂರು ಗ್ರಾಪಂ ವ್ಯಾಪ್ತಿಯ ಕಾರ್ ಬೈಲು ಗುಡ್ಡದಲ್ಲಿ ಬಿರುಕು
– ಒಂದು ವಾರದಿಂದ ಜಿಟಿ ಜಿಟಿ ಮಳೆ: ಕೊಳೆ ರೋಗದ ಭೀತಿ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಲ್ಲಿ ಮತ್ತೆ ಗುಡ್ಡ ಕುಸಿತ ಪ್ರಕರಣ ಭಾರೀ ಸದ್ದು ಮಾಡುತ್ತಿರುವ ನಡುವೆ ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೊಂದು ಗುಡ್ಡ ಕುಸಿದಿದೆ.
ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ ಬೈಲು ಗುಡ್ಡ ಮಂಗಳವಾರ ಬೆಳಿಗ್ಗೆ ಕುಸಿದಿದೆ. ಸೋಮವಾರ ರಾತ್ರಿ ಭಾರೀ ಶಬ್ದದಿಂದ ಗುಡ್ಡ ಕುಸಿದ ಬಗ್ಗೆ ಸ್ಥಳೀಯರು ಹೇಳಿದ್ದಾರೆ. ಸುತ್ತಮುತ್ತಲೂ ಗದ್ದೆ, ತೋಟ, ವಾಸದ ಮನೆ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ದಟ್ಟ ಕಾಡುಗಳಿಂದ ಆವರಿಸಿರುವ ಗುಡ್ಡ ಪ್ರದೇಶದಲ್ಲಿ ಜನರ ಓಡಾಟ ಇಲ್ಲ. ತೀರ್ಥಹಳ್ಳಿ- ಆಗುಂಬೆ ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆ ಇರುವ ಬಿಳಚಿಕಟ್ಟೆಯಿಂದ ಗುಡ್ಡ ಜರಿತವನ್ನು ವೀಕ್ಷಿಸಬಹುದು. ಕಲ್ಲು ಬಂಡೆಯ ಮೇಲೆ ಇದ್ದ ಮಣ್ಣು, ಗಿಡ ಮರಗಳು ಅಂದಾಜು 50 ಅಡಿ ಕುಸಿದಿವೆ. ಸುತ್ತಮುತ್ತ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಅತಿಯಾದ ಮಳೆಯಿಂದ ಗುಡ್ಡ ಕುಸಿದಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಒಂದು ವಾರದಿಂದ ಬಿಡದೆ ಮಳೆ
ತೀರ್ಥಹಳ್ಳಿ ತಾಲೂಕಿನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಕಳೆದೊಂದು ವಾರದಿಂದ ಜಿಟಿ ಜಿಟಿ ಮಳೆ ಬೀಳುತ್ತಿದ್ದು ಅಡಿಕೆಗೆ ಕೊಳೆ ರೋಗ ಬಂದಿದೆ.