ಐತಿಹಾಸಿಕ ಆರಗದಲ್ಲಿ ಕ್ರೀಡಾ ಸಂಭ್ರಮಕ್ಕೆ ಸಜ್ಜು!
– ಸೆ.10, 11ರಂದು ತಾಲೂಕು ಮಟ್ಟದ ಬಾಲಕಿಯರ ಗುಂಪು ಆಟ
– ಗ್ರಾಮಸ್ಥರು, ಸಂಘ ಸಂಸ್ಥೆಗಳು, ದಾನಿಗಳ ಸಹಕಾರ
– ಶಾಲೆಯ ಪುನರುಜ್ಜೀವನಗೊಳಿಸಿದ ಹಳೆ ವಿದ್ಯಾರ್ಥಿಗಳು
NAMMUR EXPRESS NEWS
ತೀರ್ಥಹಳ್ಳಿ: ಪೌರಾಣಿಕ, ಐತಿಹಾಸಿಕ ಮಹತ್ವದ ಆರಗ ಈ ಬಾರಿ ತಾಲೂಕು ಮಟ್ಟದ ಪ್ರೌಢಶಾಲೆಗಳ 17 ವರ್ಷದೊಳಗಿನ ಬಾಲಕಿಯರ ಗುಂಪು ಆಟಗಳ ಕ್ರೀಡಾಕೂಟಕ್ಕೆ ಸಜ್ಜಾಗಿದೆ.
ಆತಿಥ್ಯ ವಹಿಸಿರುವ ಆರಗ ಪ್ರೌಢಶಾಲೆ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನಡೆಸಿಕೊಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಗ್ರಾಮಸ್ಥರು, ಸಂಘ ಸಂಸ್ಥೆಗಳು, ದಾನಿಗಳು ಕ್ರೀಡಾಕೂಟದ ಯಶಸ್ವಿಗೆ ಟೊಂಕಕಟ್ಟಿ ನಿಂತಿದ್ದಾರೆ.
ಸೆ.10 ಮತ್ತು 11 ರಂದು ತೀರ್ಥಹಳ್ಳಿ ತಾಲೂಕು ವಲಯ ಮತ್ತು ತಾಲೂಕು ಮಟ್ಟದ ಪ್ರೌಢಶಾಲೆಗಳ 17 ವರ್ಷದೊಳಗಿನ ಬಾಲಕಿಯರ ಗುಂಪು ಆಟಗಳು ನಡೆಯಲಿವೆ.
ರಾಜ್ಯಕ್ಕೆ ಆರಗದ ಹೆಗ್ಗಳಿಕೆ ಅಪಾರ
ಪಾಂಡವರು ವನವಾಸ ಕಾಲದಲ್ಲಿ ನೆಲೆನಿಂತಿದ್ದ ಅರಗಿನ ಮನೆಯೇ ಆರಗ ಎಂಬ ಪೌರಾಣಿಕ ಕೊಂಡಿಯೊಂದನ್ನು ಹೊಂದಿದ್ದು, ಐತಿಹಾಸಿಕವಾಗಿ ಹಲವು ಹಿನ್ನೆಲೆಗಳಿವೆ. ದೇವಸ್ಥಾನಗಳ ತವರೂರು ಆರಗ. ದಾಸಶ್ರೇಷ್ಠ, ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರ ಹುಟ್ಟೂರಿನಲ್ಲಿ ಸಾವಿರಾರು ಕ್ರೀಡಾಪಟುಗಳ ಕಲರವಕ್ಕೆ ವೇದಿಕೆ ಸಜ್ಜಾಗಿದೆ.
ಶಾಂತವೇರಿ ಗೋಪಾಲಗೌಡ, ಪಟಮಕ್ಕಿ ರತ್ನಾಕರ್, ಆರಗ ಜ್ಞಾನೇಂದ್ರ ಅವರಂತಹ ಮೂವರು ಪ್ರಭಾವಿ ಶಾಸಕರನ್ನು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ ಹೆಗ್ಗಳಿಕೆಯೂ ಆರಗದ್ದು. ಹೋರಾಟ, ಪ್ರಬುದ್ಧ ಚಿಂತನೆ, ಆತಿಥ್ಯ ಆರಗದ ಮಣ್ಣಿಗೆ ಕರಗತವೇ ಆಗಿದೆ.
ಕ್ರೀಡಾಕೂಟಕ್ಕೆ ಹಳೆ ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಲಾನಾಥೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಣಾಧಿಕಾರಿ, ಆರಗ ಸರ್ಕಾರಿ ಪ್ರೌಢಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು, ದಾನಿಗಳು ಸಹಕಾರ ನೀಡುತ್ತಿದ್ದು, ಉತ್ಸಾಹಿ ಮುಖ್ಯ ಶಿಕ್ಷಕ ದಾನೇಶ್
ನೇತೃತ್ವದಲ್ಲಿ ಕ್ರೀಡಾಕೂಟದಲ್ಲಿ ಯಾವುದೇ ಕೊರತೆಗಳು ಎದುರಾಗದಂತೆ ಎಚ್ಚರ ವಹಿಸಲಾಗಿದೆ.
ದಾನಿಗಳ ಸಹಕಾರ
ಕ್ರೀಡಾಕೂಟದಲ್ಲಿ ಗೆದ್ದ ತಂಡಗಳಿಗೆ ಹಳೆ ವಿದ್ಯಾರ್ಥಿಗಳು, ದಾನಿಗಳ ಸಹಕಾರದಲ್ಲಿ ಆಕರ್ಷಕ ಟ್ರೋಫಿಗಳನ್ನು ನೀಡಲು, ಆರಗದಲ್ಲಿರುವ ಎರಡು ವಿಶಾಲ ಕ್ರೀಡಾಂಗಣಗಳಲ್ಲಿ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಿಎಸ್ಎಸ್ಎನ್ ಶತಮಾನೋತ್ಸವ ಸಭಾ ಭವನದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕರೀಡಾಭಿಾನಿಗಳಿಗೆ ಶುಚಿ-ರುಚಿಯಾದ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ.
ಶಾಲೆಯ ಪುನರುಜ್ಜೀವನ
ಏಳೆಂಟು ವರ್ಷಗಳ ಹಿಂದೆ ಆರಗ ಪ್ರೌಢಶಾಲೆಯ 8ನೇ ತರಗತಿಗೆ ಕೇವಲ 6 ವಿದ್ಯಾರ್ಥಿಗಳು ದಾಖಲಾಗಿದ್ದರು. ಇನ್ನೇನು ಶಾಲೆ ಬಾಗಿಲು ಮುಚ್ಚುವ ಆತಂಕವೂ ಎದುರಾಗಿತ್ತು. ಶಾಲೆಯನ್ನು ಉಳಿಸಿಕೊಳ್ಳುವ ಸಂಕಲ್ಪದೊಂದಿಗೆ 150ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳ ಸಭೆ ನಡೆಸಿ ಪುನರುಜ್ಜೀವನ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.
ಹಿರಿಯ ಮುತ್ಸದ್ಧಿ, ಆರಗದ ಎಸ್.ಎನ್.ಮಂಜುನಾಥ್ ನೇತೃತ್ವದಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಆರಗ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಮನೆ ಮನೆಗೆ ತೆರಳಿ ಪೋಷಕರ ಮನವೊಲಿಸಿದ್ದು, ಆ ವರ್ಷ 65ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗುವಂತೆ ಶ್ರಮವಹಿಸಲಾಯಿತು.
ಒಂದೆಡೆ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಆರಗ ಪ್ರೌಢಶಾಲೆಯ ಶ್ರೇಯೋಭಿವೃದ್ಧಿಗೆ ಹಗಲಿರುಳೆನ್ನದೆ ಶ್ರಮಿಸುತ್ತಿದ್ದರೆ, ಇತ್ತ ಅದೇ ಶಾಲೆಯಲ್ಲಿ ಓದಿ ನಾನಾ ಊರುಗಳಲ್ಲಿ ಜೀವನ ಕಟ್ಟಿಕೊಂಡಿರುವ ಮತ್ತೊಂದಷ್ಟು ಮಂದಿ ಶಾಲೆಗೆ ತಮ್ಮ ಕೈಲಾದ ನೆರವು ನೀಡಿದರು.
ವ್ಯವಸಾಯ ಸೇವಾ ಸಹಕಾರ ಸಂಘ ಆರಗ ಹಾಗೂ ಉದ್ಯಮಿ ಮಹೇಂದ್ರಗೌಡ, ನೆಪ್ಚೂನ್ ಕಿಶೋರ್, ಶ್ರೀಧರ ಕೋಟಿಗದ್ದೆ, ನಲ್ಲಿಗದ್ದೆ ಚಂದ್ರಶೇಖರ್, ಕುಣಿಗದ್ದೆ ಗಿರೀಶ್, ಪ್ರವೀಶ್, ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ಆರಗ ರವಿ, ಅಬ್ದುಲ್ ರಶೀದ್ ಮತ್ತಿತರರು ನೋಟ್ಬುಕ್, ಮಕ್ಕಳ ಶಾಲಾ ಶುಲ್ಕ, ಕ್ರೀಡಾಪರಿಕರ, ಗ್ರೀನ್ ಬೋರ್ಡ್, ಸ್ಮಾರ್ಟ್ ಕ್ಲಾಸ್ ಸೇರಿದಂತೆ ಹಲವು ಅಗತ್ಯಗಳನ್ನು ಪೂರೈಸಿದರು. 2021ರಲ್ಲಿ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ವಿದ್ಯಾರ್ಥಿಗಳಿಗೆ ಸುಮಾರು 40 ಸಾವಿರ ನೋಟ್ಬುಕ್ಗಳನ್ನು ಆರಗ ರವಿ ಮಾರ್ಗದರ್ಶನದಲ್ಲಿ ವಿತರಿಸಲಾಯಿತು.
ಆರಗ ಪ್ರೌಢಶಾಲೆಯನ್ನು ಮೇಲ್ದರ್ಜೆಗೇರಿಸಲು ಪ್ರತ್ಗಳು ನಿರಂತರವಾಗಿ ನಡೆಯುತ್ತಿವೆ. ಜತೆಗೆ ಆರಗ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾವಂತ, ಉತ್ಸಾಹಿ ಶಿಕ್ಷಕರ ತಂಡವಿದ್ದು, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಉತ್ತಮ ಶಿಕ್ಷಣ ನೀಡುತ್ತಿದೆ. ಆರಗ ಸರ್ಕಾರಿ ಪ್ರೌಢಶಾಲೆಗೆ ಆಂಗ್ಲ ಮಾಧ್ಯಮ, ಆರಗ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಮಂಜೂರು ಮಾಡಲು ಹಳೆ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ಧಿ ಸಮಿತಿಗಳು ಪ್ರಮುಖ ಪಾತ್ರ ವಹಿಸುತ್ತಿವೆ.
ವಿಶೇಷವೆಂದರೆ ಆರಗದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಭಿವೃದ್ಧಿಗೆ ಗ್ರಾಮಸ್ಥರು ಪಕ್ಷಾತೀತವಾಗಿ, ಜಾತ್ಯತೀತವಾಗಿ ಕೈಜೋಡಿಸಿರುವುದು. ಐತಿಹಾಸಿಕ ಮಹತ್ವದ ಆರಗದ ಶಾಲೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಕೂಡ ಸಕಾರಾತ್ಮಕ ಸ್ಪಂದನೆ ನೀಡುತ್ತಿದ್ದು, 20 ವರ್ಷಗಳ ನಂತರ ತಾಲೂಕು ಮಟ್ಟದ ಕ್ರೀಡಾಕೂಟದ ಆತಿಥ್ಯ ವಹಿಸುವ ಸದವಕಾಶ ಆತಿಥ್ಯಕ್ಕೆ ಹೆಸರಾದ ಆರಗಕ್ಕೆ ಒಲಿದುಬಂದಿದೆ. ಈ ಕ್ರೀಡಾಕೂಟಕ್ಕೆ ಎಲ್ಲ ಕ್ರೀಡಾಭಿಮಾನಿಗಳನ್ನು ಆರಗದ ಸಹೃದಯಿ ಗ್ರಾಮಸ್ಥರು ಸ್ವಾಗತಿಸುತ್ತಿದ್ದೇವೆ.
ಬಿ.ಟಿ.ಭೋಜರಾಜ್
ಪ್ರಧಾನ ಕಾರ್ಯದರ್ಶಿ, ಹಳೆ ವಿದ್ಯಾರ್ಥಿ ಸಂಘ
ಖಜಾಂಚಿ, ಕ್ರೀಡಾಕೂಟ ಸಮಿತಿ 2024
9480113232