ಕರಾವಳಿ: ಆತ್ಮಹತ್ಯೆ.. ಅನಾಹುತ.. ಅಪರಾಧ ಹೆಚ್ಚಾಯ್ತು!
– ಕೌಟುಂಬಿಕ ಕಲಹ, ಬ್ಲ್ಯಾಕ್ಮೇಲ್ , ಆರ್ಥಿಕ ಸಂಕಷ್ಟ, ಅನಾರೋಗ್ಯ
– ದಿನೇ ದಿನೇ ಹೆಚ್ಚುತ್ತಿರುವ ಸಾವು ನೋವು
– ಆನ್ಲೈನ್ ಮೋಸಕ್ಕೆ ಅತೀ ಹೆಚ್ಚು ಜನಕ್ಕೆ ಮೋಸ!
NAMMUR EXPRESS NEWS
ಮಂಗಳೂರು/ಉಡುಪಿ: ಮಗು, ಪತ್ನಿಯನ್ನುಕೊಂದು ಆತ್ಮಹತ್ಯೆ, ಹುಟ್ಟಿದ ವಾರದೊಳಗೆ ಮಗು ಮೃತಪಟ್ಟ ಬಳಿಕ ತಾಯಿ ಆತ್ಮಹತ್ಯೆ, ಯಾರೋ ಬ್ಲ್ಯಾಕ್ಮೇಲ್ ಮಾಡಿ ಕಿರುಕುಳ ನೀಡುತ್ತಿದ್ದಾರೆಂದು ಉದ್ಯಮಿ ಆತ್ಮಹತ್ಯೆ, ಮಗುವಿನೊಂದಿಗೆ ಕಾರ್ಮಿಕ ಆತ್ಮಹತ್ಯೆಗೆ ಯತ್ನ, ನದಿಗೆ ಹಾರಿ ಯುವಕ ಆತ್ಮಹತ್ಯೆ. ಅಪಘಾತಕ್ಕೆ ಅನೇಕರು ಬಲಿ. ಆನ್ಲೈನ್ ವಂಚನೆಗೆ ಲಕ್ಷ ಲಕ್ಷ ಹಣ ಕಳೆದುಕೊಂಡ ಜನ. ಹೌದು. ಬುದ್ಧಿವಂತರ ನಾಡು ಕರಾವಳಿ. ಇತ್ತೀಚಿಗೆ ಅತೀ ಹೆಚ್ಚು ದುರಂತಗಳು ಕರಾವಳಿಯಲ್ಲಿ ಸಂಭವಿಸುತ್ತಿವೆ. ತಿಂಗಳೊಳಗೆ ಎರಡು ಜಿಲ್ಲೆಗಳಲ್ಲಿ ಅನೇಕ ದುರಂತಗಳು ನಡೆದಿವೆ. ಉಡುಪಿ, ಮಂಗಳೂರು, ಕಾರ್ಕಳ, ಮೂಡುಬಿದಿರೆ, ಬಂಟವಾಳದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ.
ಆನ್ಲೈನ್ ಗೇಮ್ಸ್, ಆನ್ಲೈನ್ ಹೂಡಿಕೆ, ಆನ್ಲೈನ್ ಜಾಬ್ ಇತರೆ ಆನ್ಲೈನ್ ಮೋಸಗಳಿಗೆ ಹಲವು ಜೀವ ಬಲಿಯಾಗುತ್ತಿವೆ. ಜತೆಗೆ ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಿದ್ದಾರೆ.ಕೌಟುಂಬಿಕ ಕಲಹ, ಬ್ಲ್ಯಾಕ್ಮೇಲ್ , ಆರ್ಥಿಕ ಸಂಕಷ್ಟ, ಅನಾರೋಗ್ಯ…ಹೀಗೆ ಕಾರಣ ಗಳು ಹಲವು. ಆದರೆ ಇವೆಲ್ಲವೂ ಪರಿಹಾರವಿಲ್ಲದ ಸಮಸ್ಯೆಗಳೇನಲ್ಲ. ಸಮಾಜದಲ್ಲಿ ಆತಂಕದ ಛಾಯೆ ಮೂಡಿಸುತ್ತಿರುವ “ಆತ್ಮಹತ್ಯೆ’ಗೆ ಸಮಾಜವೇ ಕಡಿವಾಣ ಹಾಕಬೇಕಿದೆ. ಹೊಸ ಬದುಕಿನ, ಹೊಸ ಬೆಳಕಿನ ಭರವಸೆಯ ಮೇಲೆ ಹೊಸಜೀವನ ಕಟ್ಟುವಂತಾಗಬೇಕಿದೆ. ಇನ್ನು ಪೊಲೀಸ್ ಇಲಾಖೆ ಕೂಡ ವಂಚಕರ ಬಗ್ಗೆ ಕಣ್ಣಿಡಬೇಕಿದೆ. ಆನ್ಲೈನ್ ಮೋಸಕ್ಕೆ ಯಾವುದೇ ಶಿಕ್ಷೆ ಆಗದಿರುವುದು ಆನ್ಲೈನ್ ಮೋಸ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣವಾಗಿದೆ.