ಧರ್ಮಸ್ಥಳ ಲಕ್ಷದೀಪೋತ್ಸವ!
– ಉಜಿರೆಯಿಂದ ಧರ್ಮಸ್ಥಳಕ್ಕೆ ಭಕ್ತರು ಹಾಗೂ ಅಭಿಮಾನಿಗಳ ಯಶಸ್ವಿ ಪಾದಯಾತ್ರೆ
– 25 ಸಾವಿರಕ್ಕೂ ಮಿಕ್ಕಿದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಹೆಗ್ಗಡೆಯವರು
NAMMUR EXPRESS NEWS
ಉಜಿರೆ: ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಮಾರ್ಗದಲ್ಲಿ ನಡೆದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹೃದಯ ವೈಶಾಲ್ಯದಿಂದ ಕಾಯಕದ ಮೂಲಕ ತಾನು ಸಂತೋಷದಿಂದ ನಿತ್ಯವೂ, ನಿರಂತರವೂ ಶ್ರೀ ಮಂಜುನಾಥ ಸ್ವಾಮಿಯ ಸೇವೆ ಮಾಡುತ್ತಿರುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದಲ್ಲಿ ಹೇಳಿದರು.
ಲಕ್ಷದೀಪೋತ್ಸವ ಸಂದರ್ಭದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಶ್ರದ್ಧಾ ಭಕ್ತಿಯಿಂದ ಬಂದ 25 ಸಾವಿರಕ್ಕೂ ಮಿಕ್ಕಿದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಲಕ್ಷಾಂತರ ಮಂದಿ ಭಕ್ತರ ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ ಮತ್ತು ಗೌರವವೇ ತಮಗೆ ಶ್ರೀರಕ್ಷೆಯಾಗಿದೆ ಎಂದರು.
2025 ರ ಜನವರಿ 7 ಮತ್ತು 8ರಂದು ಮಾನ್ಯ ಉಪರಾಷ್ಟ್ರಪತಿಗಳನ್ನು ಧರ್ಮಸ್ಥಳಕ್ಕೆ ಆಹ್ವಾನಿಸಿದ್ದು, ನೂತನ ಸರತಿ ಸಾಲಿನ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಅಂದು 60 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುವುದು.ಉಡುಪಿಯಲ್ಲಿ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಉದ್ಘಾಟಿಸಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು. ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳಕ್ಕೆ ಬೇಕಾದಷ್ಟು ಅಕ್ಕಿ, ತರಕಾರಿಗಳನ್ನು ಭಕ್ತರೇ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲಕ್ಷದೀಪೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು ಲಕ್ಷದೀಪೋತ್ಸವವು ಎಲ್ಲರ ಮನೆಗಳಿಗೂ, ಮನಗಳಿಗೂ ಬೆಳಕನ್ನು ನೀಡಲಿ. ಎಲ್ಲೆಲ್ಲೂ ಸುಖ-ಶಾಂತಿ ಹಾಗೂ ನೆಮ್ಮದಿ ನೆಲೆಸಲಿ ಎಂದು ಹೆಗ್ಗಡೆಯವರು ಹಾರೈಸಿದರು.
ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಶಾಸಕ ಹರೀಶ್ ಪೂಂಜ, ಹೇಮಾವತಿ ವೀ. ಹೆಗ್ಗಡೆ, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರ ಕುಮಾರ್, ಉಜಿರೆಯ ಶರತ್ಕೃಷ್ಣ ಪಡ್ವೆಟ್ನಾಯ, ಸೋನಿಯಾ ಯಶೋವರ್ಮ, ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಪೂರನ್ವರ್ಮ ಉಪಸ್ಥಿತರಿದ್ದರು.