- ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ
- ದೇಸೀಯ ಗೋವು ತಳಿಗಳನ್ನು ಸಂರಕ್ಷಣೆಗೆ ಚಿತ್ತ
NAMMUR EXPRESS NEWS
ಬೆಂಗಳೂರು: ದೀಪಾವಳಿಯ ಬಲಿ ಪಾಡ್ಯಮಿ ಹಬ್ಬದ ದಿನದಂದು ದೇವಸ್ಥಾನಗಳಲ್ಲಿ ಹೊಸ ಸಂಪ್ರದಾಯಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಲು ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ಮುಜರಾಯಿ, ಹಜ್ ಮತ್ತು ವಕ್ಸ್ ಸಚಿವೆ ಶಶಿಕಲಾ ಜೊಲ್ಲೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಹಿಂದಿನ ಕಾಲದಿಂದಲೂ ಹಿಂದೂ ಧರ್ಮದವರು ಗೋಮಾತೆಯನ್ನು ಕಾಲಕಾಲಕ್ಕೆ ಅನುಗುಣವಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ. ದೀಪಾವಳಿಯ ಬಲಿಪಾಡ್ಯಮಿಯಂದು ಗೋವುಗಳಿಗೆ ವಿಶೇಷ ಅಲಂಕಾರದ ಮೂಲಕ ಅಕ್ಕಿ, ಬೆಲ್ಲ, ಸಿಹಿ ತಿನಿಸುಗಳನ್ನು ನೀಡಿ ಪೂಜಿಸಲಾಗುತ್ತದೆ. ಅದರಂತೆ ಕರ್ನಾಟಕದಲ್ಲಿಯೂ ಸಹ ಗೋಪೂಜೆಯನ್ನು ಬಲಿಪಾಡ್ಯಮಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪಟ್ಟಣ ಮತ್ತು ಮಹಾನಗರಗಳಲ್ಲಿ ಈ ಪದ್ಧತಿ ಮರೆತು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಸನಾತನ ಧರ್ಮದ ಗೋಮಾತೆಯನ್ನು ದೇವತೆ ಎಂದು ತಿಳಿದು ಪೂಜಿಸುವ ಸಂಪ್ರದಾಯವನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಕಳೆದ ವರ್ಷದಿಂದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿನ ದೇವಸ್ಥಾನಗಳಲ್ಲಿ ಗೋಪೂಜೆಗೆ ಸೂಚನೆ ನೀಡಲಾಗಿತ್ತು. ಇದರಿಂದಾಗಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಗೋಪೂಜೆಗೆ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳ ಮಹತ್ವ, ಮತ್ತು ಸಂರಕ್ಷಣೆಯ ಬಗ್ಗೆ ಜನ ಜಾಗೃತಿ ಮೂಡಿಸಬೇಕಾಗಿರುವುದರಿಂದ ಕಳೆದ ವರ್ಷ ಆಚರಿಸಿರುವಂತೆ, ಪ್ರಸಕ್ತ ಸಾಲಿನಲ್ಲಿಯೂ 2022ನೇ ಅ. 26ರಂದು ದೀಪಾವಳಿ ಬಲಿಪಾಡ್ಯಮಿ ದಿನದಂದು ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಗೋಪೂಜೆ ನಡೆಸುವಂತೆ ಸೂಚನೆ ನೀಡಲಾಗಿದೆ. ಆ ದಿನ ಗೋವುಗಳಿಗೆ ಸ್ನಾನ ಮಾಡಿಸಿ ದೇವಾಲಯಕ್ಕೆ ಕರೆತಂದು ಅರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸಿ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು ಮುಂತಾದ ಗೋಗ್ರಾಸವನ್ನು ಹಸುವಿಗೆ ನೀಡಲಾಗುತ್ತದೆ. ಧೂಪ, ದೀಪಗಳಿಂದ ಪೂಜಿಸಿ ನಮಸ್ಕರಿಸುವ ವ್ಯವಸ್ಥೆಯನ್ನು ಮಾಡುವ ಮೂಲಕ ಅಂದು ಸಂಜೆ 5.30 ರಿಂದ 6.30 ರವರೆಗೆ ಗೋಧೂಳಿ ಲಗ್ನದಲ್ಲಿ ಗೋಪೂಜೆ ಕಾರ್ಯಕ್ರಮವನ್ನು ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ದೇಸೀಯ ಗೋವು ತಳಿಗಳನ್ನು ಸಂರಕ್ಷಣೆ ಮಾಡುವ ದೃಷ್ಟಿಯಿಂದ ಹಾಗೂ ಹಿಂದೂ ಪರಂಪರೆಯ ಸಂಪ್ರದಾಯವನ್ನು ಮುಂದಿನ ಪೀಳಿಗೆಗೂ ಪರಿಚಯ ಮಾಡಿಸುವ ಉದ್ದೇಶದಿಂದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿನ ದೇವಸ್ಥಾನಗಳಲ್ಲಿ ದೀಪಾವಳಿಯ ಬಲಿಪಾಡ್ಯಮಿಯಂದು ರಾಜ್ಯಾದ್ಯಂತ ವಿಶೇಷವಾಗಿ ಗೋಪೂಜೆಯನ್ನು ನಡೆಸಲಾಗುವುದು. ಈ ನಿಟ್ಟಿನಲ್ಲಿ ಪಶು ಸಂಗೋಪನಾ ಇಲಾಖೆಯ ಸಹಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.