- ಮುಂದಿನ ವಾರ ಕರ್ನಾಟಕಕ್ಕೆ ಆಗಮನ
- ಅಡಿಕೆ ರೋಗ ಅಧ್ಯಯನಕ್ಕೆ ಕೇಂದ್ರದ ಸಮಿತಿ
- ಆಡಿಕೆಗೆ ರೋಗ, ಸರ್ಕಾರ ನಿಮ್ಮ ಜೊತೆಯಿದೆ: ಸಿಎಂ
NAMMUR EXPRESS NEWS
ಶಿವಮೊಗ್ಗ/ ಬೆಂಗಳೂರು: ರಾಜ್ಯದಲ್ಲಿ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆಚುಕ್ಕೆ ರೋಗ ರಾಜ್ಯದ ರೈತರ ಕಂಗೆಡಿಸಿರುವ ನಡುವೆ ಈ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳಲು ಇದೀಗ ಸಮಿತಿ ಮುಂದಿನ ವಾರ ಕರುನಾಡಿಗೆ ಆಗಮಿಸಲಿದೆ.
ಕೇಂದ್ರ ಸರಕಾರದ ಏಳು ಮಂದಿ ತಜ್ಞರನ್ನು ಒಳಗೊಂಡ ತಜ್ನರ ಸಮಿತಿ, ಮುಂದಿನ ವಾರ ರಾಜ್ಯಕ್ಕೆ ಆಗಮಿಸಲಿದೆ ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.
ಮಲೆನಾಡು ಹಾಗೂ ಕರಾವಳಿ ಭಾಗದ ರೈತರು ಎದುರಿಸುತ್ತಿರುವ ಸಂಕಷ್ಟಕ್ಕೆ, ಕೇಂದ್ರ ಸರಕಾರ, ತಕ್ಷಣ ಸ್ಪಂದಿಸಿದ್ದು, ಅಡಿಕೆ ಬೆಳೆಗೆ ಎದುರಾಗಿರುವ ರೋಗ ನಿವಾರಣೆಗೆ, ತಜ್ನರ ಸಮಿತಿ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿ ಎಂದು ಹಾರೈಸಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯ ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾದ, ಎಲೆ ಚುಕ್ಕೆ ರೋಗಕ್ಕೆ ಪರಿಹಾರ ಬಯಸಿ, ನಿಕಟಪೂರ್ವ ಮುಖ್ಯಮಂತ್ರಿಗಳೂ ಹಾಗೂ ಹಿರಿಯ ಬಿಜೆಪಿ ನಾಯಕರಾದ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ, ಕೇಂದ್ರ ಕೃಷಿ ಸಚಿವ ನರೆಂದ್ರ ಸಿಂಗ್ ತೋಮರ್ ಅವರನ್ನು ನವದೆಹಲಿಯಲ್ಲಿ ನಿಯೋಗ, ಭೇಟಿಯಾಗಿ ಮನವಿ ಸಲ್ಲಿಸಿದ್ದು, ಕೇಂದ್ರ ಸರಕಾರ, ಸಮಸ್ಯೆಯ ಪರಿಹಾರಕ್ಕೆ ಪೂರಕವಾಗಿ ಸ್ಪಂದಿಸಿ ಸಮಿತಿ ರಚಿಸಿದೆ ಎಂದರು.
20 ಸಾವಿರ ಹೆಕ್ಟೇರ್ ತೋಟ ರೋಗಕ್ಕೆ ಬಲಿ!
ರಾಜ್ಯದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದ ಅಡಿಕೆ ತೋಟಗಳು ಎಲೆ ಚುಕ್ಕೆ ರೋಗಕ್ಕೆ ಬಲಿಯಾಗಿದ್ದು ಕಾಡ್ಗಿಚ್ಚಿನಂತೆ, ಇತರೆಡೆ ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಆರಗ ನ.22ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿಗೆ ಆಗಮಿಸುವ, ಸಂಶೋಧನಾ ತಜ್ಞರನ್ನು ಭೇಟಿಯಾಗಿ ಪರಿಸ್ಥಿತಿಯ ಮನವರಿಕೆ ಮಾಡಿಕೊಡುವೆ ಎಂದು ತಿಳಿಸಿದ್ದಾರೆ.
ದೆಹಲಿಯಿಂದ ಆಗಮಿಸುವ ತಜ್ಞರು, ವಿವಿದೆಡೆ ರೋಗ ಬಾಧಿತ ಅಡಿಕೆ ಬೆಳೆಯನ್ನು, ವೀಕ್ಷಣೆ ಮಾಡುವುದಲ್ಲದೆ, ರೈತರ ಜತೆ ಸಂವಾದವನ್ನೂ ನಡೆಸಲಿದ್ದಾರೆ.
ಸರಿಸುಮಾರು ಐವತ್ತು ಲಕ್ಷ ಜನರಿಗೆ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಜೀವನೋಪಾಯ ಕಲ್ಪಿಸಿಕೊಟ್ಟಿ ರುವ ಅಡಿಕೆ ಬೆಳೆ, ನಮ್ಮ ಭಾಗದ ರೈತರ ಆರ್ಥಿಕ ಜೀವನಾಡಿಯಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿ ಭಾಗದಲ್ಲಿ, ರೈತ ಸಮುದಾಯದ ಜೀವನಾಡಿಯಾದ, ಅಡಿಕೆ ಬೆಳೆ, ಎಲೆ ಚುಕ್ಕೆ ರೋಗದಿಂದ, ನಲುಗಿದ್ದು, ನಿಯಂತ್ರಣ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ನೇತೃತ್ವದ ನಿಯೋಗದಲ್ಲಿ ಶಿವಮೊಗ್ಗ ಸಂಸದ ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಕೃಷ್ಣ ಭಟ್ ಸೇರಿದಂತೆ ಇತರ ಗಣ್ಯರೂ ಕೇಂದ್ರಕ್ಕೆ ಮನವರಿಕೆ ಮಾಡಿ ಕೊಟ್ಟಿದ್ದರು.
ಅಡಿಕೆ ಎಲೆಚುಕ್ಕಿ ರೋಗಕ್ಕೆ ಸರ್ಕಾರದ ಮದ್ದು
ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ ಹಾಗೂ ಪ್ರಮುಖ ಆದಾಯ ಮೂಲವಾದ ಅಡಿಕೆ ಬೆಳೆಗೆ ತಗಲಿರುವ ಎಲೆಚುಕ್ಕಿ ರೋಗವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯಸರ್ಕಾರದಿಂದ ರೂ. 10 ಕೋಟಿಯನ್ನು ರೋಗ ತಡೆಗಟ್ಟಲು ಔಷಧಿ ಸಿಂಪಡಣೆಗೆ ಬಿಡುಗಡೆ ಮಾಡಲಾಗಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಜಿಲ್ಲೆಯ ಕಡೂರು ಹಾಗೂ ತರೀಕೆರೆ ತಾಲ್ಲೂಕುಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿಗಳು ಕಡೂರಿನ ಪಿಟಿಎಸ್ ತರಬೇತಿ ಕೇಂದ್ರದ ಹೆಲಿಪ್ಯಾಡ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಎಲೆಚುಕ್ಕಿ ರೋಗವು ದೊಡ್ಡಪ್ರಮಾಣದಲ್ಲಿ ಹರಡುತ್ತಿದ್ದು, ಈ ರೋಗದಿಂದ ಇಳುವರಿ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತಿದೆ ಎಂದ ಅವರು ಈ ರೋಗ ನಿವಾರಣೆಗೆ ವಿಶ್ವವಿದ್ಯಾಲಯಗಳ ತಂಡ, ಕೃಷಿ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅವರು ವರದಿ ನೀಡಿದ ನಂತರ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.