- ವಿನಯ್ ಗುರೂಜಿ ಭಕ್ತವೃಂದದಿಂದ ಆಯೋಜನೆ
- ತಪ್ಪಿತಸ್ಥರ ವಿರುದ್ಧ ತನಿಖೆಗೆ ಪಟ್ಟು
NAMMUR EXPRESS NEWS
ಕೊಪ್ಪ: ಅವಧೂತ ವಿನಯ್ ಗುರೂಜಿ ಅವರ ಬಗ್ಗೆ ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದು ಮತ್ತು ಮಠದ, ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿರುವುದರಿಂದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಪ್ಪ ಪಟ್ಟಣದಲ್ಲಿ ಶ್ರೀ ವಿನಯ್ ಗುರೂಜಿ ಭಕ್ತವೃಂದ ಬೃಹತ್ ಪ್ರತಿಭಟನೆ ನಡೆಸಿತು.
ಕೊಪ್ಪ ಪಟ್ಟಣದಲ್ಲಿ ಮೌನ ಪ್ರತಿಭಟನೆ ನಡೆಸಿರುವ ವಿನಯ್ ಗುರೂಜಿ ಭಕ್ತವೃಂದದವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ಸುದ್ದಿ ಪ್ರಕಟ ಮಾಡಲಾಗುತ್ತಿದೆ. ಇದರಿಂದಾಗಿ ವಿನಯ್ ಗುರೂಜಿ ಅವರ ಲಕ್ಷಾಂತರ ಭಕ್ತರ ಮನಸಿಗೆ ನೋವು ಉಂಟು ಮಾಡಿದೆ. ಅಲ್ಲದೆ ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ ವಿರುದ್ಧ ತಕ್ಷಣ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಪ್ಪ ತಹಶೀಲ್ದಾರ್ ಅವರಿಗೆ ಮನವಿ ನೀಡಲಾಯಿತು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕೊಪ್ಪ ಠಾಣೆ ಪೊಲೀಸರು ಮಾಡಿದ್ದರು.
ಕೊಪ್ಪ ಮುಖ್ಯ ಬಸ್ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಯುವ ಮುಖಂಡ ಪುಣ್ಯಪಾಲ್ ಅವರು ಮನವಿಯನ್ನು ಓದಿ ತಹಶೀಲ್ದಾರ್ ಅವರಿಗೆ ಹಸ್ತಾಂತರಿಸಿದರು.
ಇದೀಗ ಮಲೆನಾಡು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ವಿನಯ್ ಗುರೂಜಿ ಪರ ಪ್ರತಿಭಟನೆ ನಡೆಯುತ್ತಿದೆ. ವಿನಯ್ ಗುರೂಜಿ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಕಾಣದ ಕೈಗಳ ಕೈವಾಡಗಳನ್ನು ತನಿಖೆ ಮಾಡಬೇಕೆಂದು ವಿನಯ್ ಗುರೂಜಿ ಭಕ್ತವೃಂದ ಸರ್ಕಾರಕ್ಕೆ ಆಗ್ರಹಿಸಿದೆ.
ನೂರಾರು ಮಹಿಳೆಯರು ಹಾಜರ್
ಬಿರು ಬಿಸಿಲಿನಲ್ಲೂ ಕೂಡ ನೂರಾರು ಮಹಿಳೆಯರು, ಕೂಲಿ ಕಾರ್ಮಿಕರು, ಧರ್ಮದ ಗುರುಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಮೌನ ಪ್ರತಿಭಟನೆಯಲ್ಲಿ ಭಾಗಿಯಾದರು. ಕೊಪ್ಪದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಗುರೂಜಿ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಹಾಗೂ ಕಾಣದ ಕೈಗಳು ಗುರೂಜಿಯವರ ಹೆಸರಿಗೆ ಅವಮಾನ ಮಾಡಲು ಪಿತ್ತೂರಿ ಮಾಡುತ್ತಿರುವುದರ ಬಗ್ಗೆ ತನಿಖೆ ನಡೆಸಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.