- ಮಲೆನಾಡಿಗೆ ಆಗಮಿಸಿದ ತಂಡವನ್ನು ಸ್ವಾಗತಿಸಿದ ಆರಗ
- ಸಿಎಂ ಕೂಡ ತೋಟಕ್ಕೆ ಭೇಟಿ ನೀಡಲಿದ್ದಾರೆ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿಗೆ ಆಗಮಿಸಿದ ಕೇಂದ್ರದ ಎಲೆಚುಕ್ಕಿ ರೋಗ ಸಂಶೋಧನಾ ತಂಡಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಾಥ್ ನೀಡಿದ್ದಾರೆ.
ಮಲೆನಾಡಿನಲ್ಲಿ ತೀವ್ರವಾಗಿ ಹಬ್ಬುತ್ತಿರುವ ಎಲೆಚುಕ್ಕಿ ರೋಗಕ್ಕೆ ತಿಂಗಳ ಹಿಂದೆ ಯಡಿಯೂರಪ್ಪನವರ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಮಾತುಕತೆ ನಡೆಸಿದ್ದು
ಮಂಗಳವಾರ ಐದು ಜನ ಕೇಂದ್ರದಿಂದ ವಿಜ್ಞಾನಿಗಳು ಭೇಟಿ ನೀಡಿದ್ದಾರೆ. ರೈತರ ತೋಟಗಳಿಗೆ ಭೇಟಿ ನೀಡಿ, ರೈತರ ಜತೆ ಸಂವಾದ ಮಾಡಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಎಲೆ ಚುಕ್ಕೆ ರೋಗಕ್ಕೆ ದೀರ್ಘಕಾಲದ ಪರಿಹಾರ ಏನು ಮತ್ತು ತಕ್ಷಣದ ಪರಿಹಾರ ಯಾವ ರೀತಿಯಲ್ಲಿ ಮಾಡಬೇಕು, ಯಾವ ಔಷಧಿಯಿಂದ ಸಮಸ್ಯೆ ಬಗೆಹರಿಸಬಹುದು ಎಂದು ಚರ್ಚೆ ಮಾಡಿದ್ದೇವೆ. ಕೇಂದ್ರದ ಹಾಗೂ ರಾಜ್ಯದ ವಿಜ್ಞಾನಿಗಳು ಭೇಟಿ ನೀಡಿ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ತೋಟಗಳನ್ನು ವೀಕ್ಷಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಕೋವಿಡ್ ಸಮಯದಲ್ಲಿ ತಕ್ಷಣದಲ್ಲಿ ಹೇಗೆ ಔಷಧಿ ಕಂಡು ಹಿಡಿದರೋ ಹಾಗೆ ಈಗ ರೈತರ ಸಮಸ್ಯೆಯ ಎಲೆ ಚುಕ್ಕೆ ರೋಗಕ್ಕೂ ಔಷಧಿ ಕಂಡು ಹಿಡಿಯಬೇಕು ಎಂದು ತಿಳಿಸಿದ್ದೇವೆ. ಇವರನ್ನು ಹೊರತು ಪಡಿಸಿ ಖಾಸಗಿ ಲ್ಯಾಬ್ ನ ವಿಜ್ಞಾನಿಗಳು, ಹಾಗೂ ಪ್ರಖ್ಯಾತ ವಿಜ್ಞಾನಿಗಳನ್ನು ತೀರ್ಥಹಳ್ಳಿಗೆ ಕರೆಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಯಾವೊಬ್ಬ ರೈತರು ಆತಂಕ ಕ್ಕೆ ಒಳಗಾಗಬಾರದು ಎಂದು ತಿಳಿಸಿದರು.
ತೋಟಕ್ಕೆ ತೆರಳಲಿದ್ದಾರೆ ಸಿಎಂ!
ನವೆಂಬರ್ 27 ರಂದು ತೀರ್ಥಹಳ್ಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬರಲಿದ್ದು ಅವರನ್ನು ತೋಟಗಳಿಗೆ ಕರೆದುಕೊಂಡು ಹೋಗಿ ತೋರಿಸಲಿದ್ದೇವೆ. ಒಟ್ಟಾರೆಯಾಗಿ ರೈತರ ಜೊತೆ ಈ ಸರ್ಕಾರ ಇರಲಿದೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ.