- ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
- ಸರ್ಕಾರದ ಆದೇಶದಲ್ಲಿ ಏನೇನು..ಶಿವಮೊಗ್ಗ ಜಿಲ್ಲೆ ಸೇರಿಸಿಲ್ಲ ಏಕೆ?
NAMMUR EXPRESS NEWS
ರಾಜ್ಯದ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಜನರನ್ನು ತೀವ್ರವಾಗಿ ಕಾಡುತ್ತಿರುವ, ಅನೇಕರನ್ನು ಬಲಿ ಪಡೆದುಕೊಂಡಿರುವ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ ಟಾಸ್ಕ್ ಫೋರ್ಸ್ ರಚನೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಹಾಸನ, ಚಿಕ್ಕಮಗಳೂರು, ಮೈಸೂರು, ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ದಿನೇ ದಿನೇ ಹೆಚ್ಚಳವಾಗುತ್ತಿರುವುದರಿಂದ, ಇದನ್ನು ತಡೆಗಟ್ಟುವ ಸಲುವಾಗಿ ಪ್ರತಿ ಜಿಲ್ಲೆಗೆ ಒಂದರಂತೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಕಾಡಾನೆ ಹಾವಳಿ ತಡೆಗಟ್ಟುವ ಕುರಿತು ಹಿರಿಯ ಅರಣ್ಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ಬೆನ್ನಲ್ಲೇ ಆನೆಯ ದಾಳಿ ಹೆಚ್ಚಾಗಿರುವ ನಾಲ್ಕು ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್ ಗಳನ್ನು ರಚಿಸುವ ಕುರಿತು ಆದೇಶ ಹೊರಡಿಸಲಾಗಿದೆ. ಜೊತೆಗೆ ಈ ಕಾರ್ಯಪಡೆಗಳು ಆಯಾ ಅರಣ್ಯವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ತಕ್ಷಣದಿಂದಲೇ ನಿರ್ವಹಿಸುವಂತೆಯೂ ಆದೇಶ ಹೊರಡಿಸಲಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಕುಂದೂರಿನ ಶೋಭಾ ಎಂಬ ಮಹಿಳೆಯನ್ನು ಆನೆ ಬಲಿ ತೆಗೆದುಕೊಂಡಿತ್ತು. ಈ ಭಾಗದ ಅನೇಕರ ತೋಟ, ಗದ್ದೆಗಳ ಬೆಳೆಯನ್ನು ಆನೆಗಳು ನಾಶ ಮಾಡುತ್ತಿದ್ದು ಗ್ರಾಮಸ್ಥರು ತೀವ್ರ ಆಕ್ರೋಶವನ್ನು ಸರ್ಕಾರದ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ವ್ಯಕ್ತಪಡಿಸಿದ್ದರು. ಆನೆಗಳ ಉಪಟಳವನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಟಾಸ್ಕ್ ಫೋರ್ಸ್ ರಚನೆಮಾಡಿದೆ.
ಇನ್ನು ಶಿವಮೊಗ್ಗ ಜಿಲ್ಲೆಯ ಆಗುಂಬೆ ಸೇರಿದಂತೆ ಹಲವೆಡೆ ಆನೆ ಕಾಟ ಇದೆ. ಆದ್ರೆ ಶಿವಮೊಗ್ಗ ಜಿಲ್ಲೆ ಈ ವ್ಯಾಪ್ತಿಗೆ ಸೇರಿಸಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಟಾಸ್ಕ್ ಫೋರ್ಸ್ ಸಮಿತಿಯ ಕಾರ್ಯಗಳು ಏನೇನು?
- ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುವುದು, ಜನವಸತಿ, ಕೃಷಿ ಪ್ರದೇಶ ಹಾಗೂ ಕಾಫಿ ಎಸ್ಟೇಟ್ ಗಳಲ್ಲಿ ಆನೆಗಳ ಚಲನವಲನ ಗುರುತಿಸಿ ಅರಣ್ಯಕ್ಕೆ ಆನೆಗಳನ್ನು ಹಿಮ್ಮೆಟ್ಟಿಸುವುದು.
- ಕಾಡಾನೆ ಹಾವಳಿ ಕಂಡುಬರುವ ಸ್ಥಳಗಳಲ್ಲಿ ಆನೆಗಳ ಚಲನವಲನ ಗಳ ಬಗ್ಗೆ ಮಾಹಿತಿ ನೀಡುವುದು.
- ಅರಣ್ಯ ಪ್ರದೇಶದೊಳಗೆ ಸಂಚರಿಸದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು.
- ಪ್ರತಿ ಟಾಸ್ಕ್ ಫೋರ್ಸ್ ಕೇಂದ್ರಸ್ಥಾನದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿ ದೂರವಾಣಿ ಸಂಖ್ಯೆಯನ್ನು ಜನರಿಗೆ ಪ್ರಚರಪಡಿಸುವುದು.
- ಆನೆಗಳನ್ನು ಹಿಮ್ಮೆಟ್ಟಿಸಲು ಅಗತ್ಯವಿರುವ ವಾಕಿಟಾಕಿ, ಬಂದೂಕು, ಪಟಾಕಿ ಇನ್ನಿತರೆ ಅವಶ್ಯಕ ಸಲಕರಣೆಗಳನ್ನು ಅರಣ್ಯ ಪಡೆ ಮುಖ್ಯಸ್ಥರು ಒದಗಿಸುವುದು.
- ಅರಣ್ಯ ಪಡೆ ಮುಖ್ಯಸ್ಥರು ಕೂಡಲೇ ಜಿಲ್ಲಾ ಟಾಸ್ಕ್ ಫೋರ್ಸ್ ಗೆ ವಲಯ ಮತ್ತು ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ರಕ್ಷಕರನ್ನು ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಬೇಕು.
- ಆನೆ ಹಾವಳಿ ಪ್ರದೇಶಗಳಿಗೆ ತಲುಪಲು ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಟಾಸ್ಕ್ ಫೋರ್ಸ್ ಗೆ ಮೂರು ಬೊಲೆರೋ ಜೀಪ್ ಒದಗಿಸುವುದು.
- ಕ್ಯಾಂಟರ್ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನಿಯೋಜಿಸುವುದು.
- ಆನೆಗಳನ್ನು ಹಿಮ್ಮೆಟ್ಟಿಸುವ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ ಸಹಾಯ ಪಡೆಯುವುದು.
- ಕಾರ್ಯಪಡೆಗಳು ತಮ್ಮ ಪ್ರತಿಯೊಂದು ಕಾರ್ಯಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ಕೈಗೊಳ್ಳಬೇಕು.