- ಬೆಂಗಳೂರಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ
- ಮಾ.4ರ ಕೇಜ್ರಿವಾಲ್ ಭೇಟಿ ನಡುವೆ ಮಹತ್ವದ ನಡೆ
NAMMUR EXPRESS NEWS
ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಕ್ಷ ತೊರೆದು ಗುರುವಾರ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಈ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಬುಧವಾರ ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದಲ್ಲಿ ಪ್ರಬಲ ಹಾಗೂ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದ ಭಾಸ್ಕರ್ ರಾವ್ ಅವರು ಬಿಜೆಪಿ ವಿರುದ್ಧ ಹಲವು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಅವರ ಬಿಜೆಪಿ ಸೇರ್ಪಡೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಾರ್ಚ್ 4ಕ್ಕೆ ದಾವಣಗೆರೆಯಲ್ಲಿ ನಡೆಯುವ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ.
ಬಿಜೆಪಿ ಸೇರ್ಪಡೆಗೆ ಮುನ್ನ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಪದ್ಮನಾಭನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ನಂತರ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್ ಅವರು ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿ ಇರುವಾಗಲೇ ಕಳೆದ ವರ್ಷ ಸ್ವಯಂ ನಿವೃತ್ತಿ ಪಡೆದುಕೊಂಡರು. ಬಳಿಕ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಸೇರ್ಪಡೆ?
ನಳೀನ್ ಕುಮಾರ್ ಕಟೀಲ್ ಮಾತನಾಡಿ, ಭಾಸ್ಕರ್ ರಾವ್ ಅವರು ನಿವೃತ್ತಿ ನಂತರ ಆಪ್ ಸೇರಿ ರಾಜಕೀಯ ಅನುಭವ ಪಡೆದಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಸಾಧ್ಯ ಎಂದು ಪಕ್ಷಕ್ಕೆ ಬಂದಿದ್ದಾರೆ. ಇವತ್ತು ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಬೇರೆ ಬೇರೆ ನಾಯಕರು ಇನ್ನೂ ಬಿಜೆಪಿ ಸೇರಲು ರೆಡಿ ಆಗಿದ್ದಾರೆ. ಅವರ ಆಡಳಿತಾತ್ಮಕ ಅನುಭವ ಗಳನ್ನು ಪಾರ್ಟಿ ಸ್ವೀಕಾರ ಮಾಡುತ್ತದೆ. ಅವರು ಯಾವುದೇ ಆಸೆ ಆಕಾಂಕ್ಷೆಗಳನ್ನು ಇಟ್ಟಿಲ್ಲ. ಅವರಿಗೆ ಪಕ್ಷದಲ್ಲಿ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಬಸವನಗುಡಿಯೋ..? ಲೋಕ ಸಭೆಗೋ..?
ಭಾಸ್ಕರ್ ರಾವ್ ಅವರು ಬಸವನಗುಡಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಹಿಂದೆ ಎಎಪಿಯಲ್ಲಿ ಇದ್ದಾಗಲೂ ಇದೇ ಕ್ಷೇತ್ರದಿಂದ ಸ್ಪರ್ಧೆಗೆ ತೀರ್ಮಾನಿಸಿದ್ದರು. ಬೆಂಗಳೂರಿನ ಬಸವನಗುಡಿ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಕ್ಷೇತ್ರದಿಂದಲೇ ಭಾಸ್ಕರ್ ರಾವ್ ಸ್ಪರ್ಧಿಸಲು ಬಯಸಿದ್ದಾರೆ. ಆದರೆ ಬಸವನಗುಡಿಯಲ್ಲಿ ಈಗಾಗಲೇ ಬಿಜೆಪಿಯ ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಇರುವುದರಿಂದ ಕುತೂಹಲಕ್ಕೆ ಕಾರಣವಾಗಿದೆ. ಲೋಕಸಭೆಗೆ ಬೆಂಗಳೂರಿನಿಂದ ಕಣಕ್ಕೆ ಇಳಿಸುವ ಸಾಧ್ಯತೆ ಇದೆ.