- ದೇಶದಲ್ಲಿ H3N2 ವೈರಸ್ ಸೋಂಕು ಹೆಚ್ಚಳ ಹಿನ್ನೆಲೆ
- ರಾಜ್ಯದಲ್ಲೂ ಹೈ ಅಲರ್ಟ್ : ಸರ್ಕಾರದ ಹೊಸ ನಿಯಮ ಏನು?
NAMMUR EXPRESS NEWS
ಬೆಂಗಳೂರು: ದೇಶದಲ್ಲಿ H3N2 ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ತಜ್ಞರೊಂದಿಗಿನ ಸಭೆ ನಡೆಸಲಾಯಿತು.
ರಾಜ್ಯದಲ್ಲಿ H3N2 ವೈರಸ್ ಸೋಂಕು ಹರಡುವಿಕೆ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲಾಗಿದ್ದು ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು.ಇಂದಿನಿಂದ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, H3N2 ಸೋಂಕು ಹರಡುವಿಕೆಯ ಬಗ್ಗೆ ನಿಗಾ ವಹಿಸಲಾಗಿದೆ.
ಮಕ್ಕಳು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರು H3N2 ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಜನಸಂದಣಿಯಿಂದ ದೂರವಿರಬೇಕು ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳಬೇಕಾಗಿ ಅರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಆರೋಗ್ಯ ಸಚಿವ ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, H3N2 ನಿಂದ ದೇಶದಲ್ಲಿ ಸೋಂಕು ಹೆಚ್ಚಳವಾಗಿದೆ. ಅನೇಕರು ಗಾಬರಿಯಾಗಿದ್ದಾರೆ. ಹೀಗಾಗಿ ಉನ್ನತ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಿದೆವು. ಗಾಬರಿಯಾಗುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಹಾಗಂತ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದರು.
ಮಾಸ್ಕ್ ಧರಿಸೋದು ಇತ್ತೀಚೆಗೆ ಕಡಿಮೆಯಾಗಿದೆ. ಆಸ್ಪತ್ರೆಯ ಸಿಬ್ಬಂದಿ ಕೂಡ ಧರಿಸುತ್ತಿಲ್ಲ. ಎಲ್ಲಾ ಆರೋಗ್ಯ ಸಿಬ್ಬಂದಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಅಲ್ಲದೆ ಇನ್ ಪ್ಯೂಯೆಂಜಾಗೆ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಆರೋಗ್ಯ ಸಿಬ್ಬಂದಿಗೆ ಸಚಿವರು ಸೂಚಿಸಿದರು.
ಐಸಿಯುನಲ್ಲಿ ಕೆಲಸ ಮಾಡೋರಿಗೆ ಸರ್ಕಾರದಿಂದಲೇ ವ್ಯಾಕ್ಸಿನ್ ನೀಡಲಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲಿ ಐಸಿಯುನಲ್ಲಿ ಕೆಲಸ ಮಾಡುವ ಸಿಬ್ಬಂದಿ ಇನ್ ಪ್ಯೂಯೆಂಜಾ ಸರ್ಕಾರದ ವತಿಯಿಂದ ವ್ಯಾಕ್ಸಿನ್ ನೀಡಲಾಗುತ್ತದೆ. 25 ಟೆಸ್ಟ್ಗಳನ್ನು ವಾಣಿವಿಲಾಸ ಮತ್ತು ವಿಕ್ಟೋರಿಯಾದಲ್ಲಿ ಟೆಸ್ಟಿಂಗ್ ಮಾಡಲಾಗುತ್ತದೆ. 15 ವರ್ಷ ಕೆಳಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಸುಲಭವಾಗಿ ಸೋಂಕು ಬರುತ್ತೆ. ಗರ್ಭಿಣಿಯರಿಗೆ ಸೋಂಕು ಬರುವ ಸಾಧ್ಯತೆ ಇದೆ. ಹೀಗಾಗಿ ಇವರೆಲ್ಲ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಏನು ಮಾಡಬಾರದು…ಏನು ಮಾಡಬೇಕು?
ಶುಚಿತ್ವದ ಬಗ್ಗೆ ಗಮನ ಕೊಡಬೇಕು. ಕೆಮ್ಮುವಾಗ, ಸೀನುವಾಗ ಮುಖ ಕವರ್ ಮಾಡಿಕೊಳ್ಳಬೇಕು. ಕೈಯನ್ನು ಆಗಾಗ ಸೋಪಿನಿಂದ ತೊಳೆದುಕೊಳ್ಳಬೇಕು.
ಹೆಚ್1 ಎನ್ 1- 20 ಕೇಸ್, ಹೆಚ್ 3 ಎನ್ 2 – 26 ಕೇಸ್ ಇದೆ. ಆಂಟಿಬಯೋಟಿಕ್ ತೆಗೆದುಕೊಳ್ಳಬೇಡಿ.
ಹವಾಮಾನ ವೈಫರತ್ಯ ಕಾರಣ?
ಫೆಬ್ರವರಿಯಲ್ಲಿಯೇ ತಾಪಮಾನ ಹೆಚ್ಚಾಗಿದೆ. ಹವಾಮಾನ ವೈಪರೀತ್ಯವೂ ಕಾರಣವಾಗಿದೆ. ಹೀಟ್ ವೇವ್ ನಿಂದ ಜನ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. 11 ರಿಂದ 3 ಗಂಟೆ ಅನಗತ್ಯವಾಗಿ ಬಿಸಿಲಿಗೆ ನೇರವಾಗಿ ಹೋಗಬೇಡಿ. ಹೀಟ್ ವೇವ್ ನಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹೆಚ್ಚು ನೀರು ಕುಡಿಯಿರಿ. ಮಜ್ಜಿಗೆ ಎಳನೀರು ಸೇವಿಸಿ ಎಂದು ಸಚಿವರು ಸಲಹೆ ನೀಡಿದರು.
ಹೆಚ್ 3 ಎನ್ 2 ನಿಂದ ಡೆತ್ ಕೇಸ್ ಇಲ್ಲ. ಕೋವಿಡ್ ಬಂದವರಿಗೆ ಈ ವೈರಸ್ ಬಂದಾಗ ದೀರ್ಘಕಾಲಿಕ ಕೆಮ್ಮು ಬರುತ್ತೆ. ಪ್ರತ್ಯೇಕ ಮಾರ್ಗಸೂಚಿ ಇರುತ್ತೆ. ಕೋವಿಡ್ ಟೆಸ್ಟ್ ಮಾದರಿಯಲ್ಲಿ ಟೆಸ್ಟಿಂಗ್ ಇರುತ್ತದೆ ಎಂದು ಅರೋಗ್ಯ ಸಚಿವರು ತಿಳಿಸಿದರು.