ಮಳೆಯಿಂದ ಅಡಕೆಗೆ ಕೊಳೆರೋಗದ ಭೀತಿ..!!
– ಈ ಭಾರೀ ಫಸಲಿದ್ದರೂ ಔಷಧ ಸಿಂಪಡಣೆಗೆ ಅವಕಾಶ ನೀಡದ ಮಳೆ
– ಅಡಕೆ ಬೆಲೆ ಏರಿಳಿತದಿಂದ ಕೃಷಿಕರ ಜೀವನದಲ್ಲೂ ಏರುಪೇರು
NAMMUR EXPRESS NEWS
ಎರಡು ತಿಂಗಳಿನಿಂದ ಕರಾವಳಿ ಹಾಗೂ ಮಲೆನಾಡ ಹೆಚ್ಚಿನ ಭಾಗಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆ ಅಡಕೆ ಬೆಳೆಗೆ ಕೊಳೆರೋಗ ಹರಡುವ ಭೀತಿ. ರಾಜ್ಯದ ಸುಮಾರು 11 ಜಿಲ್ಲೆಗಳಲ್ಲಿ ಅಡಕೆ ಬೆಳೆ ಕೃಷಿಕರ ಅವಿಭಾಜ್ಯ ಅಂಗವಾಗಿದೆ. ಅಡಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಕಾಣುವುದರಿಂದ ಅಡಕೆ ಕೃಷಿಕರ ಜೀವನದಲ್ಲೂ ಏರುಪೇರು ಸಂಭವಿಸುವುದು ಸರ್ವೇ ಸಾಮಾನ್ಯ. ಕಳೆದ ವರ್ಷ ಭಾರಿ ಮಳೆಯಿಂದ ವಿಪರೀತ ಕೊಳೆ ರೋಗ ಭಾದೆ ಕಂಡು ಬಂದಿದ್ದು, ಹೆಚ್ಚಿನ ತೋಟಗಳಲ್ಲಿ ಅರ್ಧದಷ್ಟೂ ಫಸಲು ಸಿಕ್ಕಿಲ್ಲ. ಶಿವಮೊಗ್ಗ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಂತೂ ಈಗಾಗಲೇ ಅಡಕೆ ಕೊಳೆರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಎರಡು ಬಾರಿ ನಿಯಂತ್ರಣದ ಬೋರ್ಡೋ ಮಿಶ್ರಣ ಔಷಧ ಸಿಂಪಡಣೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ನಿರಂತರ ಮಳೆಯಿಂದಾಗಿ ಅಡಕೆ ತೋಟದಲ್ಲಿ ಶೀತ ವಾತಾವರಣ ಸೃಷ್ಟಿಯಾಗಿದ್ದು, ಅಡಕೆ ಗೊನೆಯಲ್ಲಿ ಕೊಳೆ ಉತ್ಪತ್ತಿಗೊಂಡಿದೆ. ಅಡಕೆ ಮಳೆ, ಹಸಿರು ಕಾಯಿ ಕೊಳೆತು ಉದುರಿ ಬೀಳುತ್ತಿದ್ದು ಬೆಳೆ ನಷ್ಟಕ್ಕೆ ಕಾರಣವಾಗುತ್ತಿದೆ. ಪ್ರಸ್ತುತ ಅಡಕೆಗೆ ಕೆ.ಜಿಗೆ 480 ರೂ. ಆಸುಪಾಸಿನಲ್ಲಿ ಉತ್ತಮ ದರವಿದೆ. ಆದರೆ ಕೊಳೆರೋಗ ಭೀತಿಯಿಂದ ಬೆಳೆಗಾರರು ಈ ವರ್ಷವೂ ಆರ್ಥಿಕ ನಷ್ಟಕ್ಕೆ ಒಳಗಾಗುವ ಭೀತಿ ಎದುರಾಗಿದೆ.
ಕೊಳೆರೋಗ ತಡೆಯುವ ಬೋರ್ಡೋ ಮಿಶ್ರಣ ಔಷಧ ಬಗ್ಗೆ ರೈತರಿಗೆ ಹೆಚ್ಚು ವಿಶ್ವಾಸ. ಆದರೆ ಔಷಧ ಸಿಂಪಡಿಸಲು ಕುಶಲ ಕಾರ್ಮಿಕರು ಸಿಗುತ್ತಿಲ್ಲ. ಇನ್ನೊಂದೆಡೆ ಔಷಧ ಸಿಂಪಡಣೆ ಯಂತ್ರ ಅವಲಂಬನೆ ಹೆಚ್ಚಾಗಿದೆ. ಕೊಳೆರೋಗ ತಡೆ ಔಷಧ ಸಾಮಗ್ರಿ ಬೆಲೆ ಹೆಚ್ಚಾಗಿದ್ದು ಸಿಂಪಡಣೆಗೆ ದುಬಾರಿ ವೆಚ್ಚ ತಗಲುತ್ತಿದೆ. ಬೋರ್ಡೋ ಮಿಶ್ರಣ ಔಷಧಕ್ಕೆ ಮೈಲುತುತ್ತ, ರಾಳ(ಅಂಟು), ಸುಣ್ಣ ಬಳಸಲಾಗುತ್ತದೆ. ಒಂದು ಬಾರಿ 1 ಎಕರೆ ಅಡಕೆ ತೋಟದ ಔಷಧ ಸಿಂಪಡಣೆಗೆ ಕುಶಲ ಕಾರ್ಮಿಕ ವೇತನ, ಔಷಧ ಸಾಮಗ್ರಿಗೆ ಸುಮಾರು 15 ಸಾವಿರ ರೂ. ಹೆಚ್ಚು ವೆಚ್ಚ ತಗಲುತ್ತದೆ. ಈ ವರ್ಷದ ಮಳೆ ಆರ್ಭಟದ ಪರಿಣಾಮ ಕೊಳೆರೋಗ ನಿಯಂತ್ರಣಕ್ಕೆ ನಾಲೈದು ಬಾರಿ ಔಷಧ ಸಿಂಪರಣೆ ಅನಿವಾರವಾಗಿದೆ.
ಹೊಸ ಔಷಧವೂ ಇಲ್ಲ!
2008ರಲ್ಲಿ ತೀರ್ಥಹಳ್ಳಿ ಸೀಬಿನಕೆರೆ ಬಳಿ ಆರಂಭಗೊಂಡ ಅಡಕೆ ಸಂಶೋಧನಾ ಕೇಂದ್ರ ಈ ವರೆಗೂ ಕೊಳೆರೋಗ ನಿಯಂತ್ರಣದ ಹೊಸ ಔಷಧ ಸಂಶೋಧನೆ ಮಾಡಿಲ್ಲ. ಸುಮಾರು 130 ವರ್ಷದ ಹಿಂದೆ ಕೊಳೆರೋಗ ನಿಯಂತ್ರಣಕ್ಕೆ ಬ್ರಿಟಿಷ್ ವಿಜ್ಞಾನಿ ಕೋಲ್ಮನ್ ಸಂಶೋಸಿದ ಬೋರ್ಡೋ ಮಿಶ್ರಣ ಔಷಧ ಕ್ರಮ ರೈತರಿಗೆ ವರವಾಗಿದೆ.







