- ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದವರೆಗೆ ಸಾಲ!
- ಏಪ್ರಿಲ್ 1ಕ್ಕೆ ಯೋಜನೆ ಜಾರಿ: ಸಹಕಾರ ಸಚಿವ ಸೋಮಶೇಖರ್
- ಏನೇನು ದಾಖಲೆ ಬೇಕು? ಎಲ್ಲಿ ಸಿಗುತ್ತೆ ಸಾಲ?
ಇಲ್ಲಿದೆ ಸಂಪೂರ್ಣ ಮಾಹಿತಿ
NAMMUR EXPRESS NEWS
ಬೆಂಗಳೂರು: ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ನೂತನ ಯೋಜನೆ ಘೋಷಿಸಿದ್ದು ಏಪ್ರಿಲ್ 1ರಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದ ವರೆಗೆ ಸಾಲ ನೀಡುವ ಯೋಜನೆ ಆರಂಭವಾಗಲಿದೆ.
ಸಹಕಾರ ಸಚಿವ ಎಸ್ ಟಿ ಸೋಮಶೇಖರ್
ವಿಧಾನಸೌಧದಲ್ಲಿ ಮಾತನಾಡಿ, 5 ಲಕ್ಷದ ವರೆಗೆ ಶೂನ್ಯ ಬಡ್ಡಿದರದ ಬೆಳೆ ಸಾಲ ನೀಡುವ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. ಸದ್ಯ ರಾಜ್ಯಪಾಲರ ಅನುಮತಿ ದೊರೆಯಲಿದ್ದು,ಏಪ್ರಿಲ್ 1ರಿಂದ ಅನ್ವಯವಾಗುವಂತೆ ಯೋಜನೆ ಜಾರಿ ಆಗಲಿದೆ.ಈಗಾಗಲೇ ರೈತರಿಗೆ ಡಿಸಿಸಿ ಬ್ಯಾಂಕಿನಿಂದ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂಪಾಯಿವರೆಗೆ ಸಾಲ ನೀಡುತ್ತಿದ್ದು, ಈ ಮಿತಿಯನ್ನು 2023-2024 ನೇ ಸಾಲಿನ ಬಜೆಟ್ ನಲ್ಲಿ 5 ಲಕ್ಷ ರೂಪಾಯಿ ಹೆಚ್ಚಿಸಲಾಗಿದೆ ಎಂದರು.
ರಾಜ್ಯದ ರೈತರಿಗೆ ಸರ್ಕಾರವು ಶೇಕಡ 3ರಷ್ಟು ಬಡ್ಡಿದರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಅಲ್ಪಾವಧಿ,ಮಧ್ಯಮಾವಧಿ ಮತ್ತು ದೀರ್ಘವಾದಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ವಿತರಿಸುವ ಯೋಜನೆಗಳನ್ನು 2004ರಲ್ಲಿ ಅನುಷ್ಠಾನಗೊಳಿಸಿದೆ. ಈ ಯೋಜನೆಯಿಂದ ರಾಜ್ಯ 33ಲಕ್ಷ ರೈತರಿಗೆ ಅನುಕೂಲವಾಗಲಿದೆ. 2012-2013 ನೇ ಸಾಲಿನಲ್ಲಿ 1 ಲಕ್ಷ ರೂಪಾಯಿ ವರೆಗೆ ಅಲ್ಪಾವಧಿ ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿತ್ತು. ಈಗ ಈ ಮಿತಿಯನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಿ ಇದೇ ಏಪ್ರಿಲ್ 1ರಿಂದ ಹೊಸ ಮಿತಿಯ ಶೂನ್ಯ ಬಡ್ಡಿ ಸಾಲ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾಲ ಯಾವ ಬ್ಯಾಂಕುಗಳಿಂದ ಸಿಗಲಿದೆ ?
1) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
2)ಪಿಕಾರ್ಡ್ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಬ್ಯಾಂಕ್ ಗಳಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುವುದು.
ಸಾಲ ಸೌಲಭ್ಯಕ್ಕೆ ಯಾರೆಲ್ಲ ಅರ್ಹರು?
ಕೃಷಿ ಪತ್ತಿನ ಸಹಕಾರ ಸಂಘದಿಂದ ಎಲ್ಲ ರೈತರಿಗೆ ಸಾಲ ಸಿಗುವುದಿಲ್ಲ. ಸಹಕಾರ ಕೇಂದ್ರ ಬ್ಯಾಂಕ್ ಗಳಲ್ಲಿ ಸದಸ್ಯತ್ವ ಹೊಂದಿದ್ದರೆ ಮಾತ್ರ ಅವರಿಗೆ ಬ್ಯಾಂಕುಗಳಿಂದ ಸಾಲ ಸೌಲಭ್ಯ ಸಿಗಲಿದೆ. ಡಿಸಿಸಿ ಬ್ಯಾಂಕ್ ನಿಂದ ಸಾಲ ಪಡೆಯಬೇಕಾದರೆ,ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಪಿಕಾರ್ಡ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗಳಲ್ಲಿ ಸದಸ್ಯತ್ವ ಹೊಂದಿರಬೇಕು.
ದಾಖಲೆ ಏನೇನು ಬೇಕು?
ಸಾಲ ಪಡೆಯಲು ದಾಖಲೆಗಳು ಪಹಣಿ,ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.