ಫಸಲ್ ಭೀಮಾ ಯೋಜನೆಗೆ ರೈತರಿಂದ ಕಡಿಮೆ ಪ್ರತಿಕ್ರಿಯೆ: ಆಗಸ್ಟ್ 16 ಕೊನೆಯ ದಿನ
– ಮಾಹಿತಿ ಹಾಗೂ ಜಾಗೃತಿ ಕೊರತೆಯಿಂದ ಈ ವರ್ಷ ನೋಂದಣಿ ಕುಂಠಿತ
– ಪ್ರಯೋಜನ ಇದ್ದರೂ ಆಸಕ್ತಿ ತುಂಬಾ ಕಡಿಮೆ
NAMMUR EXPRESS NEWS
ಬೆಂಗಳೂರು : ಕಳೆದ ಕೆಲವು ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯ ನಡುವಿನಲ್ಲಿ ಬೆಳೆ ನಷ್ಟವು ಸಾಮಾನ್ಯವಾಗಿ ಸಂಭವಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಗೆ ಬಂದಿದೆ. ಆದರೆ ಈ ವರ್ಷ ರೈತರು ಯೋಜನೆಗೆ ನೋಂದಾಯಿಸುವಲ್ಲಿ ನಿರಾಸಕ್ತಿಯನ್ನು ತೋರುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಕೇವಲ 836 ರೈತರು ಮಾತ್ರ ಈ ಯೋಜನೆಗೆ ನೊಂದಾಯಿಸಿದ್ದಾರೆ. ಕಳೆದ ವರ್ಷ ಇದೇ ಯೋಜನೆಗೆ 5710 ರೈತರು ಭಾಗಿಯಾಗಿದ್ದರು. ಈ ಹಿಂದಿನ ವರ್ಷದಲ್ಲಿ ಭಾಗವಹಿಸಿದ ರೈತರ ಪೈಕಿ 1770 ರೈತರಿಗೆ ಒಟ್ಟು 79 ಲಕ್ಷ ರೂಪಾಯಿಗಳ ವಿಮಾ ಪರಿಹಾರ ಲಭಿಸಿದೆ.
ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳಲ್ಲಿ ನೊಂದಾಯಿಸಿದ ರೈತರ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆ ಕಂಡುಬಂದಿದೆ. ವಿಶೇಷವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 365 ರೈತರು, ದೇವನಹಳ್ಳಿಯಲ್ಲಿ 209, ಹೊಸಕೋಟೆಯಲ್ಲಿ 191 ಮತ್ತು ನೆಲಮಂಗಲದಲ್ಲಿ ಕೇವಲ 71 ರೈತರು ಮಾತ್ರ ನೋಂದಣಿ ಮಾಡಿದ್ದಾರೆ. ಇದು ಜಿಲ್ಲೆಯಲ್ಲಿ ಈ ಯೋಜನೆಯ ಪ್ರಚಾರ ಮತ್ತು ಅರಿವಿನ ಕೊರತೆಯನ್ನು ಸ್ಪಷ್ಟಪಡಿಸುತ್ತದೆ.
ಜಿಲ್ಲೆಯಾದ್ಯಂತ ಈ ಮುಂಗಾರು ಹಂತದಲ್ಲಿ ರಾಗಿ, ತೊಗರಿ, ಅಲಸಂದಿ, ಹುರುಳಿ, ನೆಲಗಡಲೆ ಮತ್ತು ಮುಸುಕಿನ ಜೋಳ ಮುಂತಾದ ಬೆಳೆಗಳನ್ನು ಬಹುಪಾಲು ರೈತರು ಬೆಳೆಸುತ್ತಿದ್ದಾರೆ. ನೀರಾವರಿ ಪ್ರದೇಶಗಳಲ್ಲಿ ಹೆಚ್ಚಿನ ಬೆಳೆಯಾಗಿದೆ. ಈ ಯೋಜನೆಯಡಿ ಪ್ರತಿ ಎಕರೆ ರಾಗಿ ಬೆಳೆಗೆ ರೈತರು 340 ರೂ. ಪ್ರೀಮಿಯಂ ಪಾವತಿಸಿದರೆ 17,000 ರೂ. ವಿಮಾ ಮೊತ್ತ ಪಡೆಯಲು ಅರ್ಹರಾಗುತ್ತಾರೆ. ನೀರಾವರಿ ಕ್ಷೇತ್ರದಲ್ಲಿ ರಾಗಿ ಬೆಳೆಯುವ ರೈತರು 406 ರೂ. ಪಾವತಿಸಿದರೆ 20,300 ರೂ. ವಿಮೆ ಲಭ್ಯವಿದೆ. ಭತ್ತ ಬೆಳೆಗೆ ನೀರಾವರಿಯಲ್ಲಿ 746 ರೂ. ಪಾವತಿಸಿದರೆ 37,300 ರೂ. ವಿಮೆ ಸಿಗುತ್ತದೆ. ಮುಸುಕಿನ ಜೋಳಕ್ಕೆ 516 ರೂ. ಪಾವತಿಸಿದರೆ 25,800 ರೂ., ಹುರುಳಿಗೆ 164 ರೂ. ಪಾವತಿಸಿದರೆ 8,200 ರೂ., ನೆಲಗಡಲೆಗೆ 436 ರೂ. ಪಾವತಿಸಿದರೆ 21,800 ರೂ. ಮತ್ತು ತೊಗರಿಗೆ 384 ರೂ. ಪಾವತಿಸಿದರೆ 19,200 ರೂ. ವಿಮಾ ಮೊತ್ತ ಲಭ್ಯವಾಗುತ್ತದೆ. ಟೊಮೆಟೊ ಬೆಳೆಗೆ ರೈತರು ಪ್ರತಿ ಎಕರೆಗೆ 1132 ರೂ. ಪಾವತಿಸಿದರೆ 56,600 ರೂ. ವಿಮೆ ಪಡೆಯಬಹುದು.
ರೈತರು ಈ ಯೋಜನೆಗೆ ನೋಂದಾಯಿಸಬೇಕಾದ ಸ್ಥಳಗಳಲ್ಲಿ ಗ್ರಾಮ ಒನ್ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಸಿಎಚ್ಸಿ ನಾಗರಿಕ ಸೇವಾ ಕೇಂದ್ರಗಳು ಹಾಗೂ ಬ್ಯಾಂಕ್ಗಳಿವೆ. ನೋಂದಣಿಗಾಗಿ ಪಹಣಿ, ಮೊಬೈಲ್ ನಂಬರಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಪಾಸ್ಬುಕ್, ಆಧಾರ್ ಕಾರ್ಡ್ ಮತ್ತು ವಿಮಾ ಪ್ರಸ್ತಾವನೆಯಂತಹ ದಾಖಲೆಗಳು ಅಗತ್ಯವಾಗಿವೆ.
ಅತಿವೃಷ್ಟಿ ಅಥವಾ ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದ ಸಂದರ್ಭದಲ್ಲಿ ಈ ಯೋಜನೆಯ ಸಹಾಯದಿಂದ ರೈತರು ಭದ್ರತೆಯಿಂದ ಇರುತ್ತಾರೆ. ಹೀಗಾಗಿ ಎಲ್ಲ ರೈತರೂ ಆಗಸ್ಟ್ 16ರೊಳಗೆ ಯೋಜನೆಗೆ ನೋಂದಾಯಿಸಿ ತಮ್ಮ ಬೆಳೆಗಳಿಗೆ ವಿಮಾ ಕವರೇಜ್ ಪಡೆಯುವುದು ಅನಿವಾರ್ಯವಾಗಿದೆ. ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.







