ಕರಾವಳಿ ಕೃಷಿಕರಿಗೆ ಮಿಶ್ರಫಲ..!
– ರೋಬಸ್ಟಾ ಕಾಫಿ, ಕೊಕ್ಕೊ ದರ ಏರುಗತಿ
– ಗೇರು ಧಾರಣೆ ಕುಸಿತ, ಅಡಕೆ ರೇಟ್ ಚೇತರಿಕೆ!
NAMMUR EXPRESS NEWS
ಮಂಗಳೂರು: ಸಾಮಾನ್ಯವಾಗಿ ಕರಾವಳಿಯ ಕೃಷಿಕರು ವಾಣಿಜ್ಯ ಬೆಳೆಯಾದ ಅಡಕೆಗೆ ಪ್ರಥಮ ಪ್ರಾಶಸ್ತ್ರ ನೀಡಿ, ಉಳಿದ ಜಾಗದಲ್ಲಿ ಇತರ ಬೆಳೆ ಬೆಳೆಯುತ್ತಾರೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಮಿಶ್ರಬೆಳೆಗೂ ಆದ್ಯತೆ ನೀಡುತ್ತಿರುವ ಪರಿಣಾಮ, ಅಂಥ ಕೃಷಿಕರ ಮೊಗದಲ್ಲೀಗ ಮಂದಹಾಸ. ಕಾರಣ, ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪ್ರತಿ ಕೆ.ಜಿ.ಗೆ 200 ರೂ. ದಾಟಿದೆ. ಇದರ ಜತೆಗೆ ಒಣ ಕೊಕ್ಕೊ ಧಾರಣೆಯೂ ಏರಿದ್ದು, ಕ್ಯಾಂಸ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಕೆ.ಜಿ.ಗೆ 205ಕ್ಕೆ ಖರೀದಿಯಾಗಿದೆ. ಒಣ ಕೊಕ್ಕೊಗೆ ಎರಡು ದಿನಗಳ ಹಿಂದೆ ಇದ್ದ ಧಾರಣೆಯನ್ನು ಗಮನಿಸಿದರೆ ಕೆ.ಜಿ.ಯೊಂದಕ್ಕೆ 75 ರೂ.ಗಳಷ್ಟು ಏರಿಕೆ ಕಂಡಿದೆ. ಅಲ್ಲದೆ ಇನ್ನಷ್ಟು ಹೆಚ್ಚಳವಾಗುವ ಮುನ್ಸೂಚನೆಯನ್ನೂ ಮಾರುಕಟ್ಟೆ ನೀಡಿದೆ. ಕೊಕ್ಕೊ ಉತ್ತಮ ಮಿಶ್ರಬೆಳೆ. ಆದರೆ ಹಲವು ವರ್ಷಗಳಿಂದ ಅಡಕೆ ಜೊತೆಯಾಗಿ ಕೊಕ್ಕೊ ಬೆಳೆಯುತ್ತಿದ್ದರೂ ಅಡಕೆಗೆ ಧರ ಏರಿದಾಗಲೂ ಕೊಕ್ಕೊ 60ರೂ ಆಸುಪಾಸಿನಲ್ಲೇ ಇತ್ತು. ಇದರಿಂದ ನಿಧಾನವಾಗಿ ಕೃಷಿಕರು ಕೊಕ್ಕೊವನ್ನು ಬದಿಗೆ ಸರಿಸಿ, ಅಡಕೆಯತ್ತ ಮನ ಮಾಡಿದರು. ಪರಿಣಾಮ, ಕಂಡಕಂಡಲ್ಲೆಲ್ಲಾ ಅಡಕೆ ಸಸಿಗಳು ಕಾಣಿಸುತ್ತಿದ್ದರೆ, ಉಳಿದೆಲ್ಲಾ ಗಿಡಗಳು ಗೌಣವಾಗುತ್ತಿವೆ. ಇಂಥ ಹೊತ್ತಿನಲ್ಲೇ ಕೊಕ್ಕೊ ಧಾರಣೆ ಏರುಹಾದಿ ಕಾಣಿಸುತ್ತಿದೆ.
ಹೊಸ ಅಡಕೆ ಧಾರಣೆ ಹೆಚ್ಚಳ:
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ. ಏರಿದೆ. ಸಿಂಗಲ್ಚೋಲ್, ಡಬ್ಬಲ್ ಚೋಲ್ ಧಾರಣೆ ಸ್ಥಿರವಾಗಿದೆ. ಕ್ಯಾಂಸ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 345-365 ರೂ. ದಾಖಲಾಗಿದೆ. ಹೊರ ಮಾರುಕಟ್ಟೆಯಲ್ಲಿ 370 ರೂ. ತನಕವೂ ಇತ್ತು.
ಇಳಿಹಾದಿಯಲ್ಲಿ ಗೇರು ಬೀಜದ ದರ:
ಒಂದು ಕಾಲದಲ್ಲಿ ಸೀಸನ್ ನಲ್ಲಿ ಕೆ.ಜಿ.ಗೆ 120 ರೂವರೆಗೆ ಇದ್ದ ಗೇರು ಈಗ 95 ರೂಗೆ ಇಳಿದಿದೆ. ಹವಾಮಾನ ವೈಪರೀತ್ಯದಿಂದ ಗೇರು ಹೂವಿನ ಮೊಗ್ಗು ಕರಗುವುದರಿಂದ ಉತ್ಪಾದನೆಯೂ ಕಡಿಮೆಯಾಗಿದೆ. ಈ ವರ್ಷಾರಂಭದಲ್ಲಿ ಕೆ.ಜಿ.ಗೆ 100 ರೂ ಇದ್ದ ಗೇರುದರ, ಇದೀಗ 90 ರೂಗೆ ಇಳಿಕೆಯಾಗಿದೆ. ಕಳೆದ ವರ್ಷ ಕೇರಳದಲ್ಲಿ ಬೆಂಬಲ ಬೆಲೆಯೊಂದಿಗೆ ಬೀಜ ಖರೀದಿಯಾಗಿತ್ತು. ಈ ವರ್ಷವೂ ಡಿಸೆಂಬರ್, ಜನವರಿ ತಿಂಗಳಲ್ಲಿ ಅಕಾಲಿಕ ಮೋಡ ಕವಿದು ಮಳೆಯಾಗಿತ್ತು.