- ಕನ್ನಡದಿಂದ ತೆಲುಗಿಗೆ ಜಿಗಿದ ರಚಿತಾ ರಾಮ್
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಕೈಯಲ್ಲಿ ಈಗ 10ಕ್ಕೂ ಹೆಚ್ಚು ಚಿತ್ರಗಳಿವೆ. ಬಹುತೇಕ ಸ್ಟಾರ್ ನಟಿಯಾಗಿರುವ ಡಿಂಪಿ ಈಗ ಪಕ್ಕದ ತೆಲುಗಿಗೂ ಜಿಗಿದಿದ್ದಾರೆ. ಇತ್ತ ಕನ್ನಡದಲ್ಲಿ ಕೂಡ ಬ್ಯುಸಿಯಿದ್ದಾರೆ. ಈ ನಡುವೆ ಮತ್ತೊಂದು ಹೊಸ ಸಿನಿಮಾ ಪಂಕಜ ಕಸ್ತೂರಿಗೆ ಸಹಿ ಮಾಡಿದ್ದಾರೆ.
ನಿರ್ದೇಶಕ ಮಯೂರ ರಾಘವೇಂದ್ರ ಮತ್ತು ರಚಿತಾ ರಾಮ್ ಈ ಮೊದಲು ರಿಷಭಪ್ರಿಯ ಎನ್ನುವ ಕಿರುಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇನ್ನು ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ “100” ಎಂಬ ಚಿತ್ರದಲ್ಲಿ ರಚಿತಾ ರಾಮ್ ನಟಿಸಿದ್ದಾರೆ. ಈಗಾಗಲೇ ಸೆನ್ಸಾರ್ ಸಹ ಮುಗಿಸಿರುವ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 15ರ ಬಳಿಕ ಸಿನಿಮಾ ತೆರೆಕಾಣಬಹುದು.
ತೆಲುಗಿನಲ್ಲೂ ಕಲ್ಯಾಣ್ ದೇವ್ ನಟನೆಯ ‘ಸೂಪರ್ ಮಚ್ಚಿ’ ಚಿತ್ರದಲ್ಲಿ ರಚ್ಚು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪುಲಿ ವಾಸು ಈ ಚಿತ್ರ ನಿರ್ದೇಶಿಸಿದ್ದು, ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ವಿಜಯ್ ಎಸ್ ಗೌಡ ನಿರ್ದೇಶನ ಮಾಡುತ್ತಿರುವ ಸೈನ್ಸ್ ಫಿಕ್ಷನ್ ಸಿನಿಮಾ ‘ಲಿಲ್ಲಿ’ ಚಿತ್ರದಲ್ಲೂ ರಚಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಪ್ರಜ್ವಲ್ ದೇವರಾಜ್, ಡಾಲಿ ದನುಂಜಯ್ ಜೊತೆ ಹೊಸ ಚಿತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ.