ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿ ಅಂತ್ಯ: ಆದ್ರೂ ಬಿಡುಗಡೆ ಇಲ್ಲ!
– ದೂರು ನೀಡಿಲ್ಲ.. ವಿಡಿಯೋದಲ್ಲಿ ಮುಖ ಇಲ್ಲ… ಏನಾಗುತ್ತೆ ಕೇಸ್?
– ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಿದ ಕೋರ್ಟ್
NAMMUR EXPRESS NEWS
ಬೆಂಗಳೂರು: ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅದರ ವಿರುದ್ಧದ ಒಂದು ಅತ್ಯಾಚಾರ ಮುಕ್ತಾಯವಾಗುತ್ತಿದ್ದು, ಕೋರ್ಟ್ಗೆ ಹಾಜರುಪಡಿಸಲಾಗುತ್ತಿದೆ. ಮತ್ತೊಂದು ಪ್ರಕರಣದಲ್ಲಿ ಅವರನ್ನು ಕಸ್ಟಡಿಗೆ ಪಡೆಯಲು ಎಸ್ಐಟಿ ಸಿದ್ಧತೆ ಮಾಡಿಕೊಂಡಿದೆ.
ಈಗಾಗಲೇ ಎರಡೆರಡು ಬಾರಿ ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ಮಾಡಿದ್ದಾರೆ. ಕೋರ್ಟ್ಗೆ ಮನವರಿಕೆ ಮಾಡಿ, ಪ್ರಜ್ವಲ್ ವಿರುದ್ಧದ ಎರಡು ಪ್ರಕರಣಗಳ ತನಿಖೆಯನ್ನು ಎಸ್ಐಟಿ ಮುಗಿಸಿದೆ. ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಹಾಗೂ ಸಿಐಡಿಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದ ತನಿಖೆ ಬಹುತೇಕ ಪೂರ್ಣವಾಗಿದೆ.
ಪ್ರತಿಯೊಂದು ಪ್ರಕರಣದಲ್ಲಿಯೂ ಕಸ್ಟಡಿಗೆ ಪಡೆದು ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ. ಒಟ್ಟು ಮೂರು ಪ್ರಕರಣಗಳಿದ್ದು, ಒಂದು ಪ್ರಕರಣ ಮುಗಿದ ಬೆನ್ನಲ್ಲೆ ಮತ್ತೊಂದು ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಬಲ ಸಾಕ್ಷ್ಯಗಳ ಸಂಗ್ರಹಕ್ಕೆ ಎಸ್ಐಟಿ ಹರಸಾಹಸ ಪಡುತ್ತಿದೆಯಾದರೂ, ಅದು ಸಾಧ್ಯವಾಗಿಲ್ಲ. ಎಸ್ಐಟಿ ವಶದಲ್ಲಿರುವ ಅಶ್ಲೀಲ ವಿಡಿಯೋಗಳಲ್ಲಿ ಪ್ರಜ್ವಲ್ ಮುಖ ಕಾಣಿಸುತ್ತಿಲ್ಲ. ಹಲವಾರು ಮಹಿಳೆಯರ ಜೊತೆಗಿನ ಲೈಂಗಿಕ ಕ್ರಿಯೆಗಳು ದಾಖಲಾಗಿವೆಯಾದರೂ, ಅವರಲ್ಲಿ ಯಾರೂ ದೂರು ನೀಡಿಲ್ಲ. ಪ್ರಜ್ವಲ್ ಮನೆಯಲ್ಲಿ ನಡೆದ ಮಹಜರು ವೇಲೆ ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ ಸಂಸದರ ವಿರುದ್ಧ ನಿಲ್ಲಬಹುದಾದ ಮಹತ್ವದ ಸಾಕ್ಷಿಗಳು ದೊರೆತಿಲ್ಲ.
10 ದಿನ ಎಸ್ಐಟಿ ಕಸ್ಟಡಿಯಲ್ಲಿದ್ದ ಪ್ರಜ್ವಲ್ ರೇವಣ್ಣನನ್ನು ಜೂನ್ 10ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಜೂನ್ 24ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲು ಸೂಚಿಸಲಾಗಿತ್ತು. ಇನ್ನೂ ವಿಚಾರಣೆ ಬಾಕಿ ಇರುವುದರಿಂದ ಕಸ್ಟಡಿಗೆ ನೀಡುವಂತೆ ಎಸ್ಐಟಿ ಮನವಿ ಮಾಡಿದ್ದರಿಂದ, ಮತ್ತೆ 6 ದಿನಗಳ ಕಾಲ ಪ್ರಜ್ವಲ್ ರೇವಣ್ಣನನ್ನು ಎಸ್ಐಟಿ ಕಸ್ಟಡಿಗೆ ನೀಡಲು ಕೋರ್ಟ್ ಸಮ್ಮತಿಸಿದೆ. ನ್ಯಾಯಾಂಗ ಬಂಧನದಲ್ಲಿದ್ದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆದಿದ್ದಾರೆ. ಜೈಲಿನ ಕ್ವಾರಂಟೈನ್ ಬ್ಯಾರಕ್ನಲ್ಲಿ ಸಾಮಾನ್ಯ ಕೈದಿಯಂತೆ ಪ್ರಜ್ವಲ್ ಇದ್ದರು.
ಇನ್ನೊಂದೆಡೆ ವಿಡಿಯೋ ಮಾಡಿಕೊಂಡ ಮದರ್ ಡಿವೈಸ್ಗಾಗಿ ಎಸ್ಐಟಿ ಹುಡುಕಾಟ ನಡೆಸಿದೆ. ಈ ಮೂಲ ಮೊಬೈಲ್ ಕಳೆದುಹೋಗಿದೆ. ಒಂದು ವರ್ಷದ ಹಿಂದೆಯೇ ಈ ಬಗ್ಗೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಪ್ರಜ್ವಲ್ ಹೇಳಿದ್ದಾರೆ.
ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಿದ ಕೋರ್ಟ್
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಭವಾನಿ ರೇವಣ್ಣ ಅವರು ಮೈಸೂರು, ಹಾಸನ ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಪೊಲೀಸರ 85 ಪ್ರಶ್ನೆಗಳಿಗೆ ಭವಾನಿ ರೇವಣ್ಣ ಅವರು ಉತ್ತರಿಸಿದ್ದಾರೆ. ಹೀಗಾಗಿ ತನಿಖೆಗೆ ಸಹಕರಿಸಿಲ್ಲ ಎಂಬ ವಾದ ಒಪ್ಪಲಾಗುವುದಿಲ್ಲ. ಪೊಲೀಸರಿಗೆ ಬೇಕಾದಂತಹ ಉತ್ತರ ಕೊಡಬೇಕೆಂದಿಲ್ಲ. ಸಂತ್ರಸ್ತೆಗೆ ಊಟ ಬಟ್ಟೆ ಕೊಟ್ಟಿಲ್ಲವೆಂಬ ವಾದವನ್ನು ಒಪ್ಪಲಾಗುವುದಿಲ್ಲ. ಅಕ್ಕ (ಭವಾನಿ ರೇವಣ್ಣ) ಬಟ್ಟೆ ಊಟ ಕಳುಹಿಸಿದ್ದರೆಂದು ಸಂತ್ರಸ್ತೆ ಹೇಳಿಕೆಯಿದೆ ಎಂದು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಹೇಳಿತು.
ಏನಿದು ಪ್ರಕರಣ?
ಪ್ರಜ್ವಲ್ ರೇವಣ್ಣ ಅವರದ್ದು ಅಂತ ಬಿಡುಗಡೆಯಾಗಿರುವ ಅಶ್ಲೀಲ ವಿಡಿಯೋದಲ್ಲಿ ನನ್ನ ತಾಯಿಯ ಚಿತ್ರವೂ ಇದ್ದು, ಇದೀಗ ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ಸಂತ್ರಸ್ತೆ ಪುತ್ರ ದೂರು ನೀಡಿದ್ದರು. ಹೆಚ್ಡಿ ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಈಗಾಗಲೆ ಆರೋಪಿ ಬಾಬು ಅನ್ನು ಬಂಧಿಸಿದ್ದಾರೆ. ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸಿದ್ದರು. ಹೆಚ್ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಸದ್ಯ ಹೆಚ್ಡಿ ರೇವಣ್ಣ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.
ಇದೇ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರೂ ಕೂಡ ಎಸ್ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಬೇಕು. ಈ ಸಂಬಂಧ ಎಸ್ಐಟಿ ಭವಾನಿ ರೇವಣ್ಣ ಅವರಿಗೆ ಎರಡೆರಡು ನೋಟಿಸ್ ಕೊಟ್ಟಿತ್ತು. ನೋಟಿಸ್ ನೀಡುತ್ತಿದ್ದಂತೆ ಭವಾನಿ ರೇವಣ್ಣ ಅವರು ವಿಚಾರಣಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ನೀರಿಕ್ಷಣಾ ಜಾಮೀನು ಅರ್ಜಿ ತಿರಸ್ಕತಿಸಿತ್ತು. ಹೀಗಾಗಿ ಭವಾನಿ ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ನ ಏಕ ಸದಸ್ಯ ಪೀಠ ಈ ಹಿಂದೆ ಭವಾನಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ಆದೇಶ ಕಾಯ್ದಿರಿಸಿತ್ತು. ಇದೀಗ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಭವಾನಿ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ.