ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಯದುವೀರ್ ಒಡೆಯರ್ ಬಿಜೆಪಿ ಅಭ್ಯರ್ಥಿ?
– ಅಭ್ಯರ್ಥಿಗಳನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ!
– ಮೋದಿಯನ್ನು ಭೇಟಿಯಾಗಿದ್ದ ಯದುವೀರ್ ಒಡೆಯರ್!
NAMMUR EXPRESS NEWS
ಬೆಂಗಳೂರು: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿಗಳು ನಡೆಯುತ್ತಿದೆ. ಈ ವೇಳೆ ಎಲ್ಲ ರಾಜಕೀಯ ಪಕ್ಷಗಳೂ ತಂತ್ರ- ರಣತಂತ್ರಗಳನ್ನು ಹೆಣೆಯುತ್ತಿವೆ. ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸುವ ಮೂಲಕ ಪಕ್ಷಕ್ಕೆ ಭಾರಿ ಮುನ್ನಡೆಯನ್ನು ಸಾಧಿಸಬೇಕು ಎಂಬ ನಿಟ್ಟಿನಲ್ಲಿ ಹಲವು ಆಯಾಮಗಳಲ್ಲಿ ಚಿಂತನೆ ನಡೆಸುತ್ತಿವೆ. ಇನ್ನು ಬಿಜೆಪಿ ಸಹ ಈ ವಿಚಾರದಲ್ಲಿ ಬಹಳ ಮುಂದಿದೆ. ಈಗಾಗಲೇ ಲೋಕಸಭಾ ಚುನಾವಣೆ ಸಂಬಂಧ ಅಖಾಡಕ್ಕೆ ಇಳಿದಿರುವ ಬಿಜೆಪಿ, ಜನರನ್ನು ತನ್ನತ್ತ ಸೆಳೆಯಲು ಸಾಕಷ್ಟು ತಯಾರಿ ನಡೆಸಿದೆ. ಅಲ್ಲದೆ, ಹೊಸ ಮುಖಗಳನ್ನು ಈ ಬಾರಿಯೂ ಪರಿಚಯಿಸುವ ತನ್ನ ಪರಿಪಾಠವನ್ನು ಮುಂದುವರಿಸಿರುವ ಕಮಲಪಡೆ ಈಗ ಮೈಸೂರು-ಕೊಡಗು ಕ್ಷೇತ್ರಕ್ಕೆ ಬಿಜೆಪಿಯಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಟಿಕೆಟ್ ನೀಡಲು ಚಿಂತಿಸಿದೆ ಎನ್ನಲಾಗಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಎರಡು ಬಾರಿ ಸತತವಾಗಿ ಆಯ್ಕೆ ಆಗುತ್ತಾ ಬಂದಿದ್ದಾರೆ. ಈ ಭಾಗದಲ್ಲಿ ಸಾಕಷ್ಟು ಕೆಲಸಗಳನ್ನೂ ಮಾಡಿದ್ದಾರೆ. ಈ ಮಧ್ಯೆ ರಾಜವಂಶಸ್ಥರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನವನ್ನು ಬಿಜೆಪಿ ಬಹಳ ಹಿಂದಿನಿಂದಲೂ ಮಾಡುತ್ತಲೇ ಬಂದಿದೆ. ಆದರೆ, ರಾಜಕೀಯದ ಬಗ್ಗೆ ಯಧುವೀರ ಒಡೆಯರ್ ಅವರು ಅಷ್ಟಾಗಿ ಆಸಕ್ತಿ ತೋರಿಸುತ್ತಿರಲಿಲ್ಲ. ತಮಗೆ ಸಮಾಜ ಸೇವೆ ಮಾಡಲು ರಾಜಕೀಯ ಬೇಕೆಂದೇನೂ ಇಲ್ಲ ಎಂದು ಹೇಳಿದ್ದರು. ಇಷ್ಟಾದರೂ ಬಿಜೆಪಿ ಪ್ರಯತ್ನ ಮಾತ್ರ ನಿಂತಿರಲಿಲ್ಲ. ಈಗ ಆ ನಿಟ್ಟಿನಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.
ಹೊಸಬರಿಗೆ ಅವಕಾಶ
ಲೋಕಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಈಗಾಗಲೇ ಒಂದು ಹಂತದ ಪಟ್ಟಿಯನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಅಲ್ಲದೆ, ಎಲ್ಲೆಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡಬೇಕು ಎಂಬ ನಿಟ್ಟಿನಲ್ಲಿಯೂ ಚಿಂತನೆ ನಡೆಸಿದೆ ಎನ್ನಲಾಗಿದೆ. ಜತೆಗೆ ಬೇರೆ ಬೇರೆ ಕ್ಷೇತ್ರದಿಂದ ರಾಜಕೀಯಕ್ಕೆ ಕರೆತರುವ ಮೂಲಕ ಜನರಿಗೆ ಹೊಸ ಮುಖವನ್ನು, ಹೊಸ ಆಲೋಚನೆಗಳನ್ನು ಪರಿಚಯಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಇನ್ನು ಮೈಸೂರು-ಕೊಡಗು ಕ್ಷೇತ್ರವು ಸದ್ಯಕ್ಕೆ ಬಿಜೆಪಿ ಭದ್ರಕೋಟೆಯಾಗಿದೆ. ಹೀಗಾಗಿ ಇದನ್ನು ಹಾಗೇ ಉಳಿಸಿಕೊಳ್ಳಬೇಕು. ಅದರ ಜತೆಗೆ ರಾಜವಂಶಸ್ಥರ ಮೇಲೆ ಜನರಿಗೆ ಇರುವ ಒಳ್ಳೇ ಭಾವನೆಯನ್ನು ಎನ್ಕ್ಯಾಶ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಹೆಜ್ಜೆಯನ್ನಿಟ್ಟಿದೆ.
ಮೋದಿಯನ್ನು ಭೇಟಿಯಾಗಿದ್ದ ಒಡೆಯರ್
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯದುವೀರ್ ಒಡೆಯರ್ ಭೇಟಿಯಾಗಿದ್ದರು. ಆಗ ರಾಜಕೀಯ ಪ್ರವೇಶದ ಬಗ್ಗೆ ಒಂದಷ್ಟು ಮಾಹಿತಿ ವಿನಿಮಯ ಆಗಿದೆ ಎನ್ನಲಾಗಿದೆ. ಅಲ್ಲದೆ, ಜನರ ಮನದಲ್ಲಿ ಉತ್ತಮ ಸ್ಥಾನವನ್ನು ರಾಜವಂಶಸ್ಥರು ಪಡೆದಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಧನಾತ್ಮಕತೆಯನ್ನು ಹುಟ್ಟುಹಾಕಲಿದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ ಎನ್ನಲಾಗಿದೆ.