- ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಕರು ನಡೆದಲ್ಲೇ ನಡೆದ
- ಕಂಪನಿ ಕೆಲಸದ ಜತೆ ಹೈನುಗಾರಿಕೆ ಮಾಡಿ ಗೆದ್ದ
- ಕಳಸದ ಶ್ರೇಯಾಂಸ್ ಜೈನ್ ಎಂಬ ಯುವಕನ ಸಾಹಸಗಾಥೆ
NAMMUR EXPRESS NEWS
ಕಳಸ: ಮಲೆನಾಡಿನ ಯುವಕನೊಬ್ಬ ತನ್ನ ಬೆಲೆ ಬಾಳುವ ಹಸುವನ್ನು ಬೆಂಗಳೂರಿನಿಂದ ಕಾಲ್ನಡಿಗೆಯಲ್ಲೇ 360 ಕಿ.ಮೀ ಕ್ರಮಿಸಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಒಪ್ಪಿಸಿದ ಅಪರೂಪದ ಘಟನೆ ನಡೆದಿದೆ. ಅಲ್ಲದೆ ಈ ಯುವಕನ ಸಾಹಸ, ಸಾಧನೆ, ಛಲ ಕೂಡ ಎಲ್ಲರಿಗೂ ಪ್ರೇರಣೆ..!
ಕಳಸದ ಹಿರೇಬೈಲ್ ಗ್ರಾಮದ ಶ್ರೇಯಾಂಸ್ ಜೈನ್ ತಮ್ಮ ಮನೆಯಲ್ಲಿ ಸಾಕುತ್ತಿರುವ ಮೊದಲ ಗಿರ್ ಹಸುವನ್ನು ಶ್ರೀ ಧರ್ಮಸ್ಥಳ ದೇವಸ್ಥಾನಕ್ಕೆ ಅರ್ಪಿಸುವುದಾಗಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಈಗ ಮೊದಲ ಕರುವನ್ನು ಬರೋಬ್ಬರಿ ಎರಡು ವರ್ಷಗಳ ಬಳಿಕ 360 ಕಿ.ಮೀ. ಗಿರ್ ಎತ್ತು ಜೊತೆ ನಡೆದುಕೊಂಡು ಬಂದು ಧರ್ಮಸ್ಥಳಕ್ಕೆ ಅರ್ಪಿಸಿದ್ದಾರೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗಿರ್ ಹಸುವಿಗೆ ತಿನ್ನಲು ಫಲಹಾರ ನೀಡುವ ಮೂಲಕ ಬರಮಾಡಿಕೊಂಡರು. ಶ್ರೇಯಾಂಸ್ ಬೆಂಗಳೂರಿನ ಜಿಗಣಿಯವರು. ಲಾಕ್ಡೌನ್ ವೇಳೆ ಕಂಪನಿ ಕೆಲಸವನ್ನು ನಂಬದೆ ದನ ಸಾಕಿ ಹೈನುಗಾರಿಕೆಯಲ್ಲಿ ಕ್ರಾಂತಿ ಮಾಡಿದ್ದರು. ಜೈನ್ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.ಯುವಕ/ಯುವತಿಯರು ಕಾಲ್ನಡಿಗೆಯಲ್ಲೇ ದೇಶ ಸುತ್ತುವುದನ್ನು ನೋಡಿದ್ದೇವೆ. ಆದರೆ ದೇವರ ಕೆಲಸಕ್ಕಾಗಿ ಕಾಲ್ನಡಿಗೆಯಲ್ಲಿ ಇಂತಹದ್ದೊಂದು ಸಾಹಸ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಜೊತೆಗೆ ಹಲವರಿಗೆ ಪ್ರೇರಣೆ ಆಗಿದೆ.
ಧರ್ಮಸ್ಥಳದ ಪರಮ ಭಕ್ತ.!
ಜೈನ್ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮ ಭಕ್ತ. ಅಷ್ಟೇ ಅಲ್ಲ, ಧರ್ಮಸ್ಥಳದ ಸಿದ್ದವನದ ಹಳೆಯ ವಿದ್ಯಾರ್ಥಿ, ಹೀಗಾಗಿ ಮಂಜುನಾಥ ಸ್ವಾಮಿ ಮತ್ತು ಧರ್ಮಾಧಿಕಾರಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದ ಆ ಯುವಕ ಶ್ರೀಕ್ಷೇತ್ರಕ್ಕೆ ಗಿರ್ ತಳಿಯ ಕರುವನ್ನು ದಾನವಾಗಿ ಕೊಟ್ಟಿದ್ದಾನೆ. ಅಚ್ಚರಿ ಅಂದ್ರೆ ಬೆಂಗಳೂರಿನಿಂದ ಕರುವಿನ ಜೊತೆ ನಡೆದುಕೊಂಡೇ ಬಂದು ಕ್ಷೇತ್ರಕ್ಕೆ ಅರ್ಪಿಸಿದ್ದಾನೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗಿರ್ ಕರುವಿಗೆ ತಿನ್ನಲು ಫಲಹಾರ ನೀಡುವ ಮೂಲಕ ಬರಮಾಡಿಕೊಂಡರು.
ಕರು ನಡೆದಲ್ಲೇ ನಡೆದ: 1000 ರೂ ಮಾತ್ರ ಖರ್ಚು
ಬಾಡಿಗೆ ಮನೆಯಲ್ಲೇ ದನ ಸಾಕಿದ್ದ ಸಹಾಸಿ ಯುವಕ
ಬೆಂಗಳೂರಿನ ತನ್ನ ಬಾಡಿಗೆ ಮನೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ದನ ಸಾಕುವ ಯೋಚನೆಯನ್ನು ಮಾಡಿದ್ದರು. ಖಾಲಿ ಸೈಟ್ನಲ್ಲೇ ದನ ಸಾಕಲು ಮುಂದಾಗಿ ಹೈನುಗಾರಿಕೆಗೆ ಮುಂದಡಿಯಿಟ್ಟರು.
ಮಂಜುನಾಥ ಸ್ವಾಮಿಗೆ ಮೊದಲ ಕರು ಭೀಷ್ಮನನ್ನು ಅರ್ಪಿಸುವ ಸಂಕಲ್ಪ ಕೂಡ ಮಾಡಿದ್ದರು. ಕರು ನಡೆಸಿಕೊಂಡು ಬಂದೇ ಅರ್ಪಿಸಲು ಚಿಂತಿಸಿದ್ದರು. ಅದರಂತೆ ಬೆಂಗಳೂರಿನಲ್ಲಿ ಹೈನುಗಾರಿಕೆ ಆರಂಭಿಸಿದ ಶ್ರೇಯಾಂಸ್ ಜೈನ್ ತನ್ನ ಮನೆಯ ಮೊದಲ ಕರುವನ್ನು ಮಂಜುನಾಥ ಸ್ವಾಮಿಗೆ ಅರ್ಪಿಸಬೇಕೆಂದು ಮನದಲ್ಲಿ ಅಂದುಕೊಂಡರು. ತಾನು ಹೋಗುವಲ್ಲಿ ಕರು ನಡೆಯುವ ಬದಲು ಕರು ಹೋದಲ್ಲಿ ತಾನು ಹೋಗುವ ನಿರ್ಧಾರ ಮಾಡಿಕೊಂಡಿದ್ದರು. ಕರು ಹಳ್ಳಿರಸ್ತೆಗಳಲ್ಲಿ ನಡೆದು ಸಾಗಿದರೆ ಸುತ್ತಮುತ್ತಲು ಹುಲ್ಲು ಸಿಗುತ್ತದೆ. ಇದರಿಂದ ಭೀಷ್ಮನಿಗೂ ಆಹಾರದ ವ್ಯವಸ್ಥೆ ಆಗುತ್ತದೆ ಎಂದು ಯೋಜನೆ ರೂಪಿಸಿ ಗರಿಷ್ಠ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಹಾದು ಬಂದಿದ್ದಾರೆ. ಇದೀಗ ಸತತ 36 ದಿನಗಳ ಕಾಲ ಪ್ರಯಾಣಿಸಿ ಧರ್ಮಸ್ಥಳವನ್ನು ತಲುಪಿದ್ದಾರೆ. ಆದರೆ ಈ ವೇಳೆ ಒಂದು ದಿನವೂ ಕೂಡ ಕಚೇರಿಗೆ ಶ್ರೇಯಾಂಸ್ ರಜೆ ಹಾಕಿಲ್ಲ, ಮುಂಜಾನೆ ಹೊತ್ತಲ್ಲಿ ನಡೆದು ನಂತರ ವರ್ಕ್ ಪ್ರಂ ಹೋಮ್ ನಡಿ ಕೆಲಸ ನಿರ್ವಹಿಸುತ್ತಾ ಸಾಗಿದ್ದು ಅಚ್ಚರಿ. ಇನ್ನು 360 ಕಿಲೋಮೀಟರ್ ನಡಿಗೆಗೆ ಖರ್ಚಾಗಿದ್ದು 1000 ರೂ. ಏಕೆಂದರೆ ಕರುವಿನ ಜೊತೆ ಸಾಗುತ್ತಿದ್ದ ಶ್ರೇಯಾಂಸ್ಗೆ ಜನರು ಪ್ರೀತಿಯಿಂದ ಹಲವೆಡೆ ಊಟ ತಿಂಡಿ, ಅಕ್ಕಿ ಬೆಲ್ಲ ಫಲಹಾರವನ್ನು ನೀಡಿದ್ದಾರೆ.
ಪ್ರತಿ ಊರಿನಲ್ಲೂ ಕೂಡ ಕರುವಿನ ಆರೋಗ್ಯ ತಪಾಸಣೆ ಮಾಡಲಾಗುತ್ತಿತ್ತು. ಅಲ್ಲದೇ ಕೆಲವೆಡೆ ದೃಷ್ಟಿ ತೆಗೆಯುವ ಕೆಲಸವನ್ನು ಊರಿನವರು ಮಾಡಿ ಗೋ ಪ್ರೀತಿ ಮೆರೆದಿದ್ದಾರೆ.