ಜಾತಿಗಣತಿ ಖಂಡಿಸಿ ರಾಜ್ಯಪಾಲರಿಗೆ ದೂರು
* ಹಿಂದೂ ಉಪಜಾತಿಗಳ ಜೊತೆ ಕ್ರಿಶ್ಚಿಯನ್ ಪದ ಕೂಡಲೇ ಕೈಬಿಡಿ
* ಹಿಂದೂಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ನಿಲ್ಲಲಿ,ತಪ್ಪಿದರೆ ಉಗ್ರ ಹೋರಾಟದ ಎಚ್ಚರಿಕೆ
NAMMMUR EXPRESS NEWS
ಚಿಕ್ಕಮಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22 ರಿಂದ ಅ.7ರವರೆಗೆ ರಾಜ್ಯಸರ್ಕಾರ ನಡೆಸಲು ಉದ್ದೇಶಿಸಿರುವ ಜಾತಿ ಗಣತಿಯನ್ನು ಖಂಡಿಸಿ ಮತ್ತು ಹಿಂದೂ ಧರ್ಮದ 47 ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಪದ ಸೇರಿಸಿರುವ ಕ್ರಮವನ್ನು ವಿರೋಧಿಸಿ, ಗುರುವಾರ ವಿಶ್ವ ಹಿಂದೂ ಪರಿಷತ್ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಹಿಂದೂ ಉಪಜಾತಿಗಳಲ್ಲಿ ಸೇರಿಸಿರುವ ಕ್ರಿಶ್ಚಿಯನ್ ಪದ ಕೂಡಲೇ ಹಿಂಪಡೆಯಬೇಕು, ತಕ್ಷಣ ಸರ್ಕಾರ ಆಯೋಗಕ್ಕೆ ಸೂಚನೆ ನೀಡಿ 47 ಉಪಜಾತಿಗಳ ಪಟ್ಟಿಯನ್ನು ಕೈ ಬಿಡಬೇಕೆಂಬ ಮನವಿ ಸೇರಿದಂತೆ ವಿವಿಧ 5 ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಈ ವೇಳೆ ಹಾಜರಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ರಾಜ್ಯದ ಜನರಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಜನಗಣತಿ ಎಂದು ಸುಳ್ಳು ಹೇಳಿ ಈಗ ಸರ್ಕಾರ ಜಾತಿಗಣತಿ ಮಾಡುತ್ತಿದೆ. ಜೊತೆಗೆ ಜಾತಿ ಎಂಬ ಹೊಸ ಕಾಲಂ ಅನ್ನು ಪ್ರಾರಂಭಿಸಿದೆ ಎಂದು ಆರೋಪಿಸಿದರು.
ಹಿಂದೂ ಜಾತಿ ಜನಾಂಗಗಳ ಜೊತೆಗೆ ಕ್ರಿಶ್ಚಿಯನ್ ಸಮುದಾಯ ಸೇರಿಸುವ ಮೂಲಕ ಹಿಂದೂಗಳ ಮಧ್ಯೆ ವಿಷ ಬೀಜ ಬಿತ್ತುವ ಕಾರ್ಯ ಹಾಗೂ ಸಂವಿಧಾನದಲ್ಲಿಲ್ಲದ ಪದ ಸೇರ್ಪಡಿಸಿರುವುದನ್ನು ಖಂಡಿಸಿ ಒಕ್ಕ ಲಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಗಾಣಿಗ ಕ್ರಿಶ್ಚಿಯನ್ ಈ ರೀತಿ 47 ವಿವಿಧ ಜಾತಿಗಳಿಗೆ ಕ್ರಿಶ್ಚಿಯನ್ ಎಂದು ಸೇರಿಸುವ ಮೂಲಕ ಮತಾಂತರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು 40 ವಿವಿಧ ಜಾತಿಯ ಮುಖಂಡರು, ಅಧ್ಯಕ್ಷರು ಸೇರಿ ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕೂಡಲೇ ರಾಜ್ಯಸರ್ಕಾರ ಪಟ್ಟಿಯಲ್ಲಿಇರುವ ಕ್ರಿಶ್ಚಿಯನ್ ಪದವನ್ನು ತೆಗೆಯಬೇಕು, ಇಲ್ಲದಿದ್ದರೆ ಸಮಸ್ತ ಹಿಂದೂಗಳು ಸಂಘಟಿತರಾಗಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಬಿ.ಹೆಚ್.ಶ್ರೀಕಾಂತ್ ಪೈ, ಬಂಜಾರ ಸಂಘದ ಲಕ್ಷ್ಮಣ್ ನಾಯ್ಕ್,ಕುರುಬ ಸಮಾಜದ ಹೆಚ್. ಎಸ್.ಪುಟ್ಟೇಗೌಡ, ಎಂ.ಬಿ.ಅಶೋಕ್, ಶ್ಯಾಮ್ ವಿ. ಗೌಡ, ಕೋಟೆ ಈಶಣ್ಣ, ಶ್ರೀಧರ್, ರಾಮಚಂದ್ರ, ರವಿಕುಮಾರ್, ಮಂಜುನಾಥ್ ಜೋಷಿ, ನಾಗೇಶ್ ಚಂದ್ರಭಟ್, ಗುಣಶೇಖರ್, ರಾಜು ಇತರರು ಹಾಜರಿದ್ದರು.







