ಸಿ ಟಿ ರವಿಗೆ ಪರಿಷತ್ ಟಿಕೆಟ್: ನಾಮಪತ್ರ ಸಲ್ಲಿಕೆ!
– ಬಿಜೆಪಿ ಸಂಘಟನೆಗೆ ಒಲಿದ ಟಿಕೆಟ್: ಕಾಫಿ ನಾಡಲ್ಲಿ ಸಂಭ್ರಮ
– ಮತ್ತೆ ರಾಜ್ಯ ರಾಜಕಾರಣದಲ್ಲಿ ಸಿಟಿ ರವಿ ಹವಾ ಶುರು
NAMMUR EXPRESS NEWS
ಚಿಕ್ಕಮಗಳೂರು: ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಲೆನಾಡಿನ ಪ್ರಮುಖ ನಾಯಕ ಸಿ.ಟಿ ರವಿ ಅವರಿಗೆ ವಿಧಾನ ಪರಿಷತ್ ಟಿಕೆಟ್ ಸಿಕ್ಕಿದ್ದು ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಸಿಟಿ ರವಿ ಮತ್ತೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಲಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಮೇಲೆ ದೇಶದ ವಿವಿಧ ಭಾಗಗಳಲ್ಲಿ ಓಡಾಡಿ ಪಕ್ಷವನ್ನು ಸಂಘಟಿಸುವಲ್ಲಿ ಸಿಟಿ ರವಿ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ಕರ್ನಾಟಕದಲ್ಲಿ ಕೂಡ ವಿವಿಧ ಜಿಲ್ಲೆಗಳಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಟಿ ರವಿ ಕಳೆದ ಚುನಾವಣೆಯಲ್ಲಿ ಕೆಲವು ಕಾರಣಗಳಿಂದಾಗಿ ಸೋಲು ಕಂಡಿದ್ದರು. ಬಳಿಕ ಎಂಪಿ ಸಂಸದ ಸ್ಥಾನಕ್ಕೂ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರರೂ ಕೂಡ ಕೊನೆಯ ಗಳಿಗೆಯಲ್ಲಿ ಪಕ್ಷದ ಸಂಘಟನೆ ಹಾಗೂ ಪಕ್ಷದ ಹೈಕಮಾಂಡ್ ನಿರ್ಧಾರದಿಂದಾಗಿ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಟಿಕೆಟ್ ಲಭಿಸಿತ್ತು.
ಇದೀಗ ಸಿಟಿ ರವಿ ಅವರಿಗೆ ಪಕ್ಷ ಉತ್ತಮ ಸ್ಥಾನ ನೀಡಲು ನಿರ್ಧರಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಬಳಸಿಕೊಂಡು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಲಾಗಿದೆ. ಚುನಾವಣೆಯಲ್ಲಿ ಅವರಿಗೆ ಎಂಎಲ್ಎ ಶಾಸಕರಿಂದ ಆಯ್ಕೆಯಾಗುವ ವಿಧಾನ ಪರಿಷತ್ ಟಿಕೆಟ್ ಘೋಷಣೆಯಾಗಿದ್ದು, ಬಹುತೇಕ ಗೆಲುವು ಪಕ್ಕ ಎನ್ನಲಾಗಿದೆ. ಈ ಮೂಲಕ ಸಿಟಿ ರವಿ ಮತ್ತೆ ರಿ ಎಂಟ್ರಿ ಪಡೆದುಕೊಳ್ಳಲಿದ್ದಾರೆ. ಸಿಟಿ ರವಿ ಅವರು ಸಚಿವರಾಗಿ, ಶಾಸಕರಾಗಿ ಚಿಕ್ಕಮಗಳೂರು ಜಿಲ್ಲೆಗೆ ವಿಶೇಷ ಸೇವೆ ಹಾಗೂ ಕೊಡುಗೆಯನ್ನು ನೀಡಿದ್ದಾರೆ, ಅಲ್ಲದೆ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಬಿಜೆಪಿ ಫೈರ್ ಬ್ರಾಂಡ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿಟಿ ರವಿ ಅವರಿಗೆ ವಿಧಾನ ಪರಿಷತ್ ಟಿಕೆಟ್ ಸಿಕ್ಕಿರುವುದು, ಸಂಘಟಕರು, ಮುಖಂಡರು ಹಾಗೂ ಯುವ ಬಿಜೆಪಿ ನಾಯಕರುಗಳು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿದೆ.
ಭಾನುವಾರ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಯುವಕರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಟಿ ರವಿ ಅವರ ರೀ ಎಂಟ್ರಿ ಚಿಕ್ಕಮಗಳೂರು ಕಾಫಿ ನಾಡಿನಲ್ಲಿ ಮತ್ತಷ್ಟು ಪಕ್ಷ ಬಲವರ್ಧನೆಗೆ ಕಾರಣವಾಗಲಿದೆ.
ನಾಮಪತ್ರ ಸಲ್ಲಿಕೆ: ನಾಯಕರ ಹಾಜರ್
ಮಾಜಿ ಸಚಿವರಾದ ಸಿ ಟಿ ರವಿಯವರು ಸೋಮವಾರ ವಿಧಾನ ಪರಿಷತ್ತಿನ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್, ಸಂಸದರಾದ ಸದಾನಂದ ಗೌಡ, ಉಡುಪಿ ಚಿಕ್ಕಮಗಳೂರುಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಉಪಸ್ಥಿತರಿದ್ದರು,.