ಚಿಕ್ಕಮಗಳೂರು ಜಿಲ್ಲೆಯಲ್ಲಿ ಏನೇನ್ ಆಯ್ತು..!!?
– ವೈದ್ಯರ ನಿರ್ಲಕ್ಷ್ಯಕ್ಕೆ ಒಂದೂವರೆ ವರ್ಷದ ಮಗು ಬಲಿ
– ಕಾಫಿನಾಡಲ್ಲಿ ಹೆಚ್ಚಾಯ್ತು ಕಾಡಾನೆಗಳ ಉಪಟಳ
– ಕೊಪ್ಪ ಸಮೀಪ ಕಾಡಾನೆಗಳ ಓಡಾಟ ಜನರಲ್ಲಿ ಆತಂಕ
– ಕರ್ತವ್ಯಲೋಪ ಆರೋಪ ಇನ್ಸ್ಪೆಕ್ಟರ್ ಅಮಾನತು
NAMMUR EXPRESS NEWS
ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿ..!!
ತರೀಕೆರೆ: ತಾಲೂಕಿನ ಹೊರವಲಯದ ದೋರನಾಳು ಗ್ರಾಮದ ಒಂದೂವರೆ ವರ್ಷದ ಮಗುವೊಂದು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಗ್ರಾಮದ ನವೀನ್ ಹಾಗೂ ಮೀನಾ ದಂಪತಿಯ ಪುತ್ರ ಮನ್ವಿತ್ ಮೃತ ಮಗು. ಮನ್ವಿತ್ಗೆ ಮಂಗಳವಾರ ಮಧ್ಯಾಹ್ನದ ವೇಳೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಪೋಷಕರು ಮನ್ವಿತ್ನನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಒಂದೂವರೆ ವರ್ಷದ ಮಗು ಮನ್ವಿತ್ ಸಾವನ್ನಪ್ಪಿದೆ. ವೈದ್ಯರ ನಿರ್ಲಕ್ಷ್ಯ ಖಂಡಿಸಿ ಮೃತ ಮಗುವಿನೊಂದಿಗೆ ತಂದೆ, ತಾಯಿ ಸೇರಿದಂತೆ ಸಂಬಂಧಿಕರು ಮಂಗಳವಾರ ಸಂಜೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ವೈದ್ಯರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕಾಫಿನಾಡಲ್ಲಿ ನಿಲ್ಲದ ಕಾಡಾನೆಗಳ ಕಾಟ..!!
ಚಿಕ್ಕಮಗಳೂರು: ಕಳೆದ ಕೆಲದಿನಗಳಿಂದ ಕಾಫಿನಾಡಲ್ಲಿ ಬೀಟಮ್ಮ ಗ್ಯಾಂಗ್ನಿಂದ ಉಪಟಳ ಹೆಚ್ಚಾಗಿದ್ದು ಈಗ ಈ ಗ್ಯಾಂಗ್ನಿಂದ ಒಂಟಿಸಲಗವೊಂದು ಬೇರ್ಪಟ್ಟು ತನ್ನ ಹುಚ್ಚಾಟ ಮುಂದುವರೆಸಿದೆ. ಸಿಕ್ಕಸಿಕ್ಕ ಗದ್ದೆ ತೋಟಗಳಿಗೆ ನುಗ್ಗಿ ದಾಳಿ ಮಾಡುತ್ತಿರುವ ಒಂಟಿಸಲಗದಿಂದ ಅಪಾರ ಬೆಳೆಹಾನಿ ಸಂಭವಿಸಿದೆ. ಚಿಕ್ಕಮಗಳೂರು ತಾಲೂಕಿನ ಕೆಸುವಿನ ಮನೆ,ದುಂಗೆರೆ ಗ್ರಾಮಗಳಲ್ಲಿ ಒಡಾಡುತ್ತಿರುವ ಪುಂಡಾನೆಗೆ ಹೆದರಿ ಮನೆಯಿಂದ ಹೊರಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಕಾಫಿ ಕಟಾವಿಗೂ ಕಾರ್ಮಿಕರು ಬಾರದೆ ಬೆಳಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಕೃಷಿಚಟುವಟಿಕೆಗಳಿಗೂ ಆನೆಗಳು ಸಂಕಷ್ಟ ತಂದೊಡ್ಡಿದೆ.
ಕೊಪ್ಪಕ್ಕೆ ಬಂದ ಕಾಡಾನೆಗಳು..!!
ಕೊಪ್ಪ: ಇದೇ ಮೋದಲ ಬಾರಿಗೆ ಕೊಪ್ಪ ಪಟ್ಟಣದ ಸಮೀಪ ಬಂದ ಕಾಡಾನೆಗಳು ಗದ್ದೆ ತೋಟದಲ್ಲಿ ಸಂಚರಿಸಿ ಜನರನ್ನು ತೀವ್ರ ಆತಂಕಕ್ಕೀಡು ಮಾಡಿದೆ. ಗದ್ದೆ,ತೋಟದಲ್ಲಿ ಕಾಡಾನೆಗಳ ಹೆಜ್ಜೆ ಗುರುತು ಇದ್ದು ಮೂರು ಆನೆಗಳು ಓಡಾಡಿದ ಅನುಮಾನ ವ್ಯಕ್ತವಾಗಿದೆ. ಕಾಡಾನೆ ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಕರ್ತವ್ಯಲೋಪ ಆರೋಪ ಇನ್ಸ್ಪೆಕ್ಟರ್ ಅಮಾನತು..!!
ಚಿಕ್ಕಮಗಳೂರು: ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಚಿಕ್ಕಮಗಳೂರು ನಗರ ಠಾಣೆಯ ಇನ್ಸ್ಪೆಕ್ಟರ್ ರೇಣುಕಾ ಪ್ರಸಾದ್ ಅವರನ್ನು ಪಶ್ಚಿಮ ವಲಯ ಐಜಿಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ದನಗಳ್ಳರು, ಪೊಲೀಸರಿಗೆ ಮಚ್ಚು ತೋರಿಸಿದ್ದು, ಪೊಲೀಸ್ ಠಾಣೆ ಮೇಲೆ ಕಲ್ಲು ಎಸೆತ ಪ್ರಕರಣ, ವಕೀಲರು ಪೊಲೀಸರ ನಡುವಿನ ಸಂಘರ್ಷ, ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಕಾರ್ಯಕ್ರಮ ಸೇರಿದಂತೆ 12 ಕರ್ತವ್ಯ ಲೋಪದ ಆರೋಪದಡಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ರೇಣುಕಾ ಪ್ರಸಾದ್ ಮೂಲತಃ ಚನ್ನಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಓಓಡಿಯಲ್ಲಿ ಇನ್ಸ್ ಪೆಕ್ಟರ್ ಆಗಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸದ್ಯ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಆಗಿ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸೆಕ್ಟರ್ ಸಚಿನ್ ಕುಮಾರ್ ಅವರನ್ನು ಪ್ರಭಾರಯಾಗಿ ನಿಯೋಜಿಸಲಾಗಿದೆ.