ಆಪರೇಷನ್ ತಿಲಕ : ಭಾರತದ ಮಡಿಲಿಗೆ ಏಷ್ಯಾಕಪ್ ಟಿ20
* ಬದ್ಧ ವೈರಿ ಪಾಕಿಸ್ಥಾನ ವಿರುದ್ಧ ಭಾರತಕ್ಕೆ ರೋಚಕ ಜಯ
* ಏಷ್ಯಾ ಕಪ್ನಲ್ಲಿ ನಾವೇ ಕಿಂಗ್ 9 ನೇ ಬಾರಿಗೆ ಟ್ರೋಫಿ
NAMMMUR EXPRESS NEWS
ದುಬೈ: ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 2025 ರ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಿತು. ಇಡೀ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಯಾವ ರೀತಿಯ ಮೇಲುಗೈ ಸಾಧಿಸಿತ್ತೋ ಅದೇ ರೀತಿ ಫೈನಲ್ ಪಂದ್ಯದಲ್ಲೂ ಪಾಕಿಸ್ತಾನದ ವಿರುದ್ಧ ವಿರೋಚಿತ ಪ್ರದರ್ಶನ ನೀಡಿ ಏಷ್ಯನ್ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಟೀಂ ಇಂಡಿಯಾ ದಾಖಲೆಯ 9ನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು ಎತ್ತಿಹಿಡಿಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19.1 ಓವರ್ಗಳಲ್ಲಿ 146 ರನ್ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ 5 ವಿಕೆಟ್ ಕಳೆದುಕೊಂಡು ಕೊನೆಯ ಓವರ್ನಲ್ಲಿ ಗೆಲುವು ಸಾಧಿಸಿತು.
* ಪಾಕ್ಗೆ ಉತ್ತಮ ಆರಂಭ,ಒಂದೇ ಓವರ್ನಲ್ಲಿ 3 ವಿಕೆಟ್ ಕಿತ್ತ ಕುಲ್ದೀಪ್
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ಗೆ ಬಲಿಷ್ಠ ಆರಂಭ ಸಿಕ್ಕಿತು. ಪಾಕ್ ಪರ ಆರಂಭಿಕ ಆಟಗಾರರಾದ ಸಾಹಿಬ್ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಆಕ್ರಮಣಕಾರಿ ಇನ್ನಿಂಗ್ಸ್ನೊಂದಿಗೆ ಉತ್ತಮ ಆರಂಭವನ್ನು ನೀಡಿದರು. ಫರ್ಹಾನ್ ಮತ್ತೊಮ್ಮೆ ಜಸ್ಪ್ರೀತ್ ಬುಮ್ರಾ ಅವರನ್ನು ಗುರಿಯಾಗಿಸಿಕೊಂಡು ಕೇವಲ 38 ಎಸೆತಗಳಲ್ಲಿ 57 ರನ್ ಬಾರಿಸಿದರು. ಅಲ್ಲದೆ ಫರ್ಹಾನ್ ಮತ್ತು ಫಖರ್ ಮೊದಲ ವಿಕೆಟ್ಗೆ 84 ರನ್ಗಳ ಅದ್ಭುತ ಜೊತೆಯಾಟವಾಡಿದರು. ನಂತರ ಫಖರ್ ಜಮಾನ್ ಜವಾಬ್ದಾರಿ ವಹಿಸಿಕೊಂಡು ತಂಡವನ್ನು 100 ರ ಗಡಿ ದಾಟಿಸಿದರು.
ಆದರೆ ಕುಲ್ದೀಪ್ ಯಾದವ್ ದಾಳಿಗಿಳಿದ ಬಳಿಕ ಪಂದ್ಯದ ಚಿತ್ರಣವೇ ಬದಲಾಯಿತು. 13 ನೇ ಓವರ್ನಲ್ಲಿ ಕುಲ್ದೀಪ್ ಪಾಕ್ನ ಸೈಮ್ ಅಯೂಬ್ ಅವರನ್ನು ಔಟ್ ಮಾಡಿದರು. ಇದರೊಂದಿಗೆ ಪಾಕಿಸ್ತಾನ 113 ರನ್ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ಅಲ್ಲಿಂದ, ಮುಂದಿನ ಐದು ಓವರ್ಗಳಲ್ಲಿ ಪಾಕಿಸ್ತಾನ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡು ಕೇವಲ 146 ರನ್ಗಳಿಗೆ ಆಲೌಟ್ ಆಯಿತು. 17 ನೇ ಓವರ್ನಲ್ಲಿ ಕುಲ್ದೀಪ್ ಕೇವಲ ಒಂದು ರನ್ ನೀಡಿ ಮೂರು ವಿಕೆಟ್ಗಳನ್ನು ಪಡೆದರು. ಉಳಿದಂತೆ ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ಬುಮ್ರಾ ತಲಾ ಎರಡು ವಿಕೆಟ್ಗಳನ್ನು ಪಡೆದರು.
* ಭಾರತಕ್ಕೆ ಆರಂಭಿಕ ಆಘಾತ:ಸಂಜು,ತಿಲಕ್,ದುಬೆ ತಾಳ್ಮೆಯ ಆಕ್ರಮಣ
ಈ ಪಂದ್ಯಕ್ಕೂ ಮುನ್ನ ಭಾರತ ತಂಡ ಗ್ರೂಪ್ ಹಂತ ಮತ್ತು ಸೂಪರ್ 4 ಸುತ್ತುಗಳಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿತ್ತು. ಇದಕ್ಕೆ ಕಾರಣರಾಗಿದ್ದವರು ಆರಂಭಿಕ ಅಭಿಷೇಕ್ ಶರ್ಮಾ, ಈ ಎರಡೂ ಪಂದ್ಯಗಳಲ್ಲಿ ಅವರು ಸ್ಫೋಟಕ ಆರಂಭವನ್ನು ನೀಡಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಎಡವಿದ ಅಭಿಷೇಕ್ ಎರಡನೇ ಓವರ್ನಲ್ಲಿಯೇ ಔಟಾದರು. ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಉಪನಾಯಕ ಶುಭ್ಮನ್ ಗಿಲ್ ಕೂಡ ತಮ್ಮ ಕಳಪೆ ಫಾರ್ಮ್ ಮುಂದುವರೆಸಿದರು. ಹೀಗಾಗಿ ತಂಡವು ಕೇವಲ 20 ರನ್ಗಳಿಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಇನ್ನಿಂಗ್ಸ್ ನಿಭಾಯಿಸಿ 57 ರನ್ಗಳ ಅದ್ಭುತ ಪಾಲುದಾರಿಕೆಯನ್ನು ನೀಡಿದರು.
ಸ್ಯಾಮ್ಸನ್ ಔಟಾದ ನಂತರ ಬಂದ ಶಿವಂ ದುಬೆ, ತಿಲಕ್ಗೆ ಉತ್ತಮ ಸಾಥ್ ನೀಡಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಈ ಇಬ್ಬರೂ ಕೇವಲ 40 ಎಸೆತಗಳಲ್ಲಿ 60 ರನ್ಗಳ ವೇಗದ ಜೊತೆಯಾಟವಾಡಿದರು. ಈ ಸಮಯದಲ್ಲಿ, ತಿಲಕ್ ತಮ್ಮ ಹೋರಾಟದ ಅರ್ಧಶತಕವನ್ನು ಪೂರ್ಣಗೊಳಿಸಿದರು ಮತ್ತು ತಂಡಕ್ಕೆ ಗೋಡೆಯಂತೆ ನಿಂತರು. 19 ನೇ ಓವರ್ನ ಕೊನೆಯ ಎಸೆತದಲ್ಲಿ ದುಬೆ ಔಟಾದರು, ಇದರಿಂದಾಗಿ ಭಾರತಕ್ಕೆ ಕೊನೆಯ ಆರು ಎಸೆತಗಳಲ್ಲಿ 10 ರನ್ಗಳು ಬೇಕಾಗಿದ್ದವು. ಕೊನೆಯ ಓವರ್ನಲ್ಲಿ ತಿಲಕ್, ಹ್ಯಾರಿಸ್ ರೌಫ್ ಅವರ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಒತ್ತಡ ಕಡಿಮೆ ಮಾಡಿದರು. ನಂತರ ಸ್ಟ್ರೈಕ್ಗೆ ಬಂದ ರಿಂಕು ಸಿಂಗ್ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
* ಪಾಕಿಸ್ತಾನದ ಫೈಟರ್ ಜೆಟ್ ಹೊಡೆದುರುಳಿಸಿದ ಬೂಮ್ರಾ,ವೀಡಿಯೋ ವೈರಲ್
ಭಾರತ ಮತ್ತು ಪಾಕಿಸ್ತಾನ ನಡುವಿನ 2025 ರ ಏಷ್ಯಾಕಪ್ ಫೈನಲ್ ಪಂದ್ಯವು ರೋಮಾಂಚಕ ಕ್ರಿಕೆಟ್ ಆಟಕ್ಕೆ ಮಾತ್ರವಲ್ಲದೆ ಮೈದಾನದಲ್ಲಿನ ಬಿಸಿಯಾದ ವಾತಾವರಣಕ್ಕೂ ಸುದ್ದಿಯಾಗುತ್ತಿದೆ. ಈ ಹೈ-ವೋಲ್ಟೇಜ್ ಪಂದ್ಯದಲ್ಲಿ, ಪಾಕಿಸ್ತಾನಿ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರನ್ನು ಔಟ್ ಮಾಡಿದ ನಂತರ ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ವಿಶಿಷ್ಟ ಆಚರಣೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ಪಾಕಿಸ್ತಾನ ಇನ್ನಿಂಗ್ಸ್ನ 18ನೇ ಓವರ್ನಲ್ಲಿ ಬುಮ್ರಾ, ಹ್ಯಾರಿಸ್ ರೌಫ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ರೌಫ್ ಅವರ ವಿಕೆಟ್ ಪಡೆದ ನಂತರ, ಬುಮ್ರಾ ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದಂತೆ ಸನ್ನೆ ಮಾಡಿ ಆಚರಿಸಿದರು. ಈ ಸಂಭ್ರಮಾಚರಣೆ ತುಂಬಾ ವಿಶೇಷವಾಗಿತ್ತು. ಏಕೆಂದರೆ ಹ್ಯಾರಿಸ್ ರೌಫ್ ಈ ಹಿಂದೆ ಸೂಪರ್ ಫೋರ್ ಪಂದ್ಯದಲ್ಲಿ ಬೌಂಡರಿ ಲೈನ್ನಲ್ಲಿ ಇದೇ ರೀತಿಯ ಸನ್ನೆ ಮಾಡಿದ್ದರು. ಬುಮ್ರಾ ಅವರ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.








