- ಪಶ್ಚಿಮ ಪದವೀಧರ ಕದನ ಜೋರು
- ನಮ್ಮೂರ್ ಎಕ್ಸ್ಪ್ರೆಸ್ ಗ್ರೌಂಡ್ ರಿಪೋರ್ಟ್..!
ಹುಬ್ಬಳ್ಳಿ: ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ ದಿನಗಳು ಬಾಕಿ ಇರುವಾಗ ಕೈ, ಕಮಲ ಹಾಗೂ ಪಕ್ಷೇತರ ಅಭ್ಯರ್ಥಿ ಮಧ್ಯೆ ಫೈಟ್ ಭರ್ಜರಿಯಾಗಿ ಕಂಡು ಬರುತ್ತಿದ್ದು, ಚುನಾವಣಾ ಅಖಾಡ ರಂಗೇರ ತೊಡಗಿದೆ.
ಜೆಡಿಎಸ್ ಅಭ್ಯರ್ಥಿ ಶಿವಶಂಕರ ಕಲ್ಲೂರ ಕಣದಲ್ಲಿದ್ದರೂ ಪಕ್ಷದ ವರಿಷ್ಠರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದರ ಪರಿಣಾಮ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡಿಸಿದೆ.
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲ ಹೊಂದಿರುವ ಬಸವರಾಜ ಗುರಿಕಾರ ಈ ಬಾರಿ ಗೆಲುವು ತಮ್ಮದೇ ಎನ್ನುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ, ಎರಡನೇ ಬಾರಿ ಅದೃಷ್ಟವನ್ನು ಪಣಕ್ಕೊಡಿದ್ದು, ಮೊದಲ ಅವಧಿಯ ಆರು ವರ್ಷಗಳ ಕಾಲ ಸರಕಾರಿ ನೌಕರರಿಗೆ ಹಾಗೂ ನಿರುದ್ಯೋಗ ಪದವೀಧರರಿಗೆ ಮಾಡಿರುವ ಕೆಲಸಗಳನ್ನು ಮುಂದಿಟ್ಟುಕೊಂಡು ಮತದಾರರ ಮನವೊಲಿಕೆ ಮುಂದಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ.ಕುಬೇರಪ್ಪ ಈ ಕ್ಷೇತ್ರದಲ್ಲಿ ಮೂರು ಬಾರಿ ಸೋಲುಂಡಿದ್ದು ಈ ಬಾರಿ ಮತದಾರರ ಅನುಂಕಪ ತಮ್ಮ ಕೈಹಿಡಿಯುವುದು ಖಚಿತ ಎಂದು ಬೀಗುತ್ತಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಎದುರು ಜೆಡಿಎಸ್ನಿಂದ ಬೆಂಬಲ ಪಡೆದಿರುವ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ, ಶಿಕ್ಷಕ ಸಂಘಟನೆಯಲ್ಲಿ ತಾವು ನಡೆಸಿರುವ ಮೂರು ದಶಕಗಳ ಹೋರಾಟ ತಮ್ಮನ್ನು ಈ ಚುನಾವಣೆಯಲ್ಲಿ ಗೆಲುವಿನ ದಡ ಸೇರಿಸಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ.
ಮೊಬೈಲ್ ಸಂದೇಶ…: ಕರೋನಾ ಸಂಕಷ್ಟ ಹಾಗೂ ಸತತ ಮಳೆ ಪ್ರಚಾರಕ್ಕೆ ಅಡ್ಡಿಯಾಗಿದ್ದು ಪ್ರತಿಯೊಬ್ಬ ಮತದಾರರು ತಲುಪುವುದು ಕಷ್ಟ ಸಾಧ್ಯ ಎಂಬುದನ್ನು ಅರಿತು ಅಭ್ಯರ್ಥಿ ಮೊಬೈಲ್ ಸಂದೇಶ, ಪತ್ರಗಳ ಮೂಲಕ ಮತದಾರರ ಮನವೊಲಿಸುವಲ್ಲಿ ನಿರತರಾಗಿದ್ದಾರೆ.
ಸರ್ಕಾರದ ವರ್ಚಸ್ಸು!: ಬಿಜೆಪಿ ಅಭ್ಯರ್ಥಿಗೆ ರಾಜ್ಯ ಹಾಗೂ ಕೇಂದ್ರದಲ್ಲಿರುವ ಸರ್ಕಾರದ ವರ್ಚಸ್ಸು ಹಾಗೂ ಯೋಜನೆಗಳು ಪ್ರಚಾರಕ್ಕೆ ಅನುಕೂಲವಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ 6ನೇ ವೇತನ ಆಯೋಗ ಜಾರಿಗೆ ತಂದಿರುವುದು ಕಾಂಗ್ರೆಸ್ ಅಭ್ಯರ್ಥಿ ಅಸ್ತ್ರವನ್ನು ಉಪಯೋಗಿಸುತ್ತಿದ್ದಾರೆ. ಚುನಾವಣೆಗೆ ಕೇವಲ 2 ದಿನ ಬಾಕಿವಿರುವಾಗಲೇ ಕ್ಷೇತ್ರದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರವೂ ಭರ್ಜರಿಯಾಗಿ ಕಂಡು ಬರುತ್ತಿದ್ದು ಅಂತಿಮವಾಗಿ ಅದೃಷ್ಟ ಯಾರಿಗೆ ಒಲಿಯುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಮತದಾರರೆಷ್ಟು?: ಕ್ಷೇತ್ರದಲ್ಲಿ ಒಟ್ಟು 74268 ಮತದಾರರು ನಾಲ್ಕು ಜಿಲ್ಲೆಗಳಲ್ಲಿದ್ದಾರೆ. ಹಾವೇರಿಯಲ್ಲಿ ಅತಿ ಹೆಚ್ಚು 23593 ಮತದಾರರಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 13148 ಮತದಾರರಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 21549 ಹಾಗೂ ಗದಗ ಜಿಲ್ಲೆಯಲ್ಲಿ 15978 ಮತದಾರರಿದ್ದಾರೆ.







