ಹಾಸನದಲ್ಲೂ ಬಾಂಗ್ಲಾ ಅಕ್ರಮ ವಲಸಿಗರು!
– ಮೂವರು ಬಾಂಗ್ಲಾ ಪ್ರಜೆಗಳ ಬಂಧನ
– ಶಿವಮೊಗ್ಗ, ಉಡುಪಿ ಈಗ ಹಾಸನದಲ್ಲಿ ಅಕ್ರಮ ಆಧಾರ್
– ಪಶ್ಚಿಮ ಬಂಗಾಳ ನಕಲಿ ಆಧಾರ್ ಕಾರ್ಡ್ ಬಳಕೆ!
NAMMUR EXPRESS NEWS
ಹಾಸನ: ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ಮೂವರು ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಜಮಾಲ್ ಅಲಿ, ಫಾರೂಕ್ ಅಲಿ ಮತ್ತು ಅಕ್ಮಲ್ ಹೊಕ್ಕು ಬಂಧಿತ ಆರೋಪಿಗಳು. ನಗರದ ೮೦ ಅಡಿ ರಸ್ತೆಯ ಗದ್ದೆಹಳ್ಳದ, ನಾಲ್ಕನೇ ಅಡ್ಡ ರಸ್ತೆಯ ಜುಬೇರ್ ಎಂಬುವವರ ಮನೆಯಲ್ಲಿ ಈ ಮೂವರು ವಾಸ ಇದ್ದರು. ಜುಬೇರ್ ಅವರ ಹೊಸ ಮನೆಯ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದರು. ಇಲ್ಲಿಗೆ ಬರುವ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ನಕಲಿ ಆಧಾರ್ ಕಾರ್ಡ್ ಪಡೆದಿದ್ದ ನುಸುಳುಕೋರರು, ಈಗಲೂ ಪಶ್ಚಿಮ ಬಂಗಾಳ ವಿಳಾಸ ಇರುವ ಆಧಾರ್ಕಾರ್ಡ್ ಹೊಂದಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಖಚಿತ ಮಾಹಿತಿ ಮೇರೆಗೆ ಬಾಂಗ್ಲಾ ಪ್ರಜೆಗಳನ್ನು ಡಿಸಿಆರ್ಬಿ ಪೊಲೀಸರು ಬಂಧಿಸಿ ತನಿಖೆಗೆ ಒಳ ಪಡಿಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ಪೆನ್ಷನ್ಮೊಹಲ್ಲಾ ಪೊಲೀಸರು, ಮೂವರನ್ನೂ ವಿಚಾರಣೆ ನಡೆಸುತ್ತಿದ್ದಾರೆ.
ಬಾಂಗ್ಲಾ ವಲಸಿಗರು ನಕಲಿ ಆಧಾರ್ ಕಾರ್ಡ್ ಜಾಲ!
ಮೂವರು ಬಾಂಗ್ಲಾ ಪ್ರಜೆಗಳನ್ನು ಬಂಧಿಸಿ ಪೊಲೀಸ್ ಇಲಾಖೆ ವಿಚಾರಣೆ ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹಿಂದೂಪರ ಸಂಘಟನೆ ಮುಖಂಡ ವೇಣುಗೋಪಾಲ್ ಒತ್ತಾಯಿಸಿದ್ದಾರೆ. ಇತ್ತೀಚಿಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಕಲಿ ಆಧಾರ್ ಕಾರ್ಡ್ ಮಾಡುತ್ತಿದ್ದ ಒಬ್ಬ ಮಹಿಳೆಯನ್ನು ಬಂಧಿಸಲಾಗಿತ್ತು. ಆದರೆ ಅವರನ್ನು ಬಿಡುಗಡೆಗೊಳಿಸಲಾಗಿದೆ. ನಮ್ಮ ದೇಶದ ಜನರಿಗೆ ನೀಡಲಾಗುವ ಎಲ್ಲಾ ರೀತಿಯ ಸವಲತ್ತುಗಳನ್ನು ಬಳಸಿಕೊಂಡು ಬಾಂಗ್ಲಾ ವಲಸಿಗರು ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡು ಇಲ್ಲಿ ನೆಲೆಸಿರುವುದು ಕಳವಳಕಾರಿ ಸಂಗತಿ. ಮುಂದೆ ಈ ಬಗ್ಗೆ ಮೇಲಧಿಕಾರಿಗಳು ಗಮನ ಹರಿಸಿ ಹಾಸನದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ವಲಸಿಗರನ್ನು ಬಂಧಿಸಿ ಅವರ ಮೇಲೆ ಮೊಕದ್ದಮೆ ದಾಖಲಿಸಬೇಕಾಗಿ ಮನವಿ ಮಾಡಿದ್ದಾರೆ.