ಹಾಸನ- ಮೈಸೂರು ಬ್ರೇಕಿಂಗ್ ನ್ಯೂಸ್
ಹಾಸನ: ರೌಡಿಶೀಟರ್ ಮಾಸ್ತಿಗೌಡ ಹತ್ಯೆ: 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
– ಮೈಸೂರು: ಮರ ಬಿದ್ದು ಆಟೋ ಪುಡಿ:ಪವಾಡ ಎಂಬಂತೆ ಪಾರಾದ ಡ್ರೈವರ್!
NAMMUR EXPRESS NEWS
ಹಾಸನ: ಕಳೆದ ವರ್ಷ, ರೌಡಿಶೀಟರ್ ಮಾಸ್ತಿಗೌಡ ಎಂಬಾತನನ್ನು ಹತ್ಯೆಗೈದಿದ್ದ ರೌಡಿಶೀಟರ್ ಯಾಚೇನಹಳ್ಳಿ ಚೇತು ಸೇರಿ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ. ಚನ್ನರಾಯಪಟ್ಟಣದಲ್ಲಿ 2023ರ ಜುಲೈ 4ರಂದು ಮಾಸ್ತಿಗೌಡ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊಲೆ ಮಾಡಲಾಗಿತ್ತು. ಪ್ರರಕಣದ ವಿಚಾರಣೆ ನಡೆಸಿರುವ ಕೋರ್ಟ್, ಘಟನೆ ನಡೆದ 10 ತಿಂಗಳಲ್ಲೇ ವಿಚಾರಣೆ ಮುಗಿಸಿದ್ದು, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ, ಯಾಚೇನಹಳ್ಳಿ ಚೇತು, ಮಂಡ್ಯ ಶಿವು ಅಲಿಯಾಸ್ ಶಿವಕುಮಾರ್, ಉಲಿವಾಲ ಚೇತು, ರಾಕಿ ಸೇರಿದಂತೆ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ ಯಾಚೇನಹಳ್ಳಿ ಚೇತು ಪ್ರಮುಖ ಆರೋಪಿಯಾಗಿದ್ದ. ಆತ, ಕಲಬುರಗಿ ಜೈಲಿನಲ್ಲಿದ್ದುಕೊಂಡೇ ಮಾಸ್ತಿಗೌಡನನ್ನು ಕೊಲೆ ಮಾಡಿಸಿದ್ದ ಎಂದು ಪೊಲೀಸರು ವರದಿ ಸಲ್ಲಿಸಿದ್ದರು.
ಮರ ಬಿದ್ದು ಆಟೋ ಸಂಪೂರ್ಣ ಜಖಂ: ಪವಾಡ ಎಂಬಂತೆ ಪಾರಾದ ಡ್ರೈವರ್!
ಮೈಸೂರು: ಭಾರೀ ಬಿರುಗಾಳಿಗೆ ಬೃಹತ್ ಮರವೊಂದು ಬಿದ್ದ ಪರಿಣಾಮ ಚಾಲನೆಯಲ್ಲಿದ್ದ ಆಟೋವೊಂದು ಸಂಪೂರ್ಣ ಜಖಂ ಆಗಿರುವ ಘಟನೆ ನಗರದ ಕೆಆರ್ ಪೊಲೀಸ್ ಠಾಣೆಯ ಸಮೀಪ ನಡೆದಿದೆ. ಆಟೋ ಸಂಪೂರ್ಣ ನಜ್ಜುಗುಜ್ಜಾದರೂ ಅದರ ಚಾಲಕ ಪವಾಡವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಯಾನಕ ಘಟನೆ ಬಗ್ಗೆ ವಿವರಿಸಿದ ಆಟೋ ಡ್ರೈವರ್ ಅನಿಲ್ ಕುಮಾರ್, ಬುಧವಾರ ರಾತ್ರಿ ಮನೆಗೆ ಹೋಗುತ್ತಿದ್ದ ಸಂದರ್ಭ ಎದುರುಗಡೆ ಮರವೊಂದು ಬೀಳುವ ಸ್ಥಿತಿಯಲ್ಲಿತ್ತು. ಈ ವೇಳೆ ಆಟೋ ಸ್ಲೋ ಮಾಡಿದೆ. ಆದರೆ ಹಿಂದುಗಡೆ ಬೃಹತ್ ಮರ ಆಟೋ ಮೇಲೆಯೇ ಬಿತ್ತು. ಈ ವೇಳೆ ನಾನು ಆಟೋದಲ್ಲೇ ಇದ್ದೆ. ಬಳಿಕ ನಿಧಾನವಾಗಿ ಅದರಿಂದ ಹೊರಬಂದೆ ಎಂದಿದ್ದಾರೆ.
ಹೊರ ಬಂದು ಆಟೋ ಸ್ಥಿತಿ ನೋಡಿ ಆಘಾತವಾಗಿತ್ತು. ಬಳಿಕ ನಾನು ಸುಧಾರಿಸಿಕೊಂಡೆ. ಅಕ್ಕ ಪಕ್ಕದಲ್ಲಿದ್ದವರು ನನಗೆ ಸಹಾಯ ಮಾಡಿದರು. ನನ್ನ ದುಡಿಮೆ ಇರೋದೇ ಈ ಆಟೋದಿಂದ ಈಗ ಅದು ಸಂಪೂರ್ಣ ಡ್ಯಾಮೇಜ್ ಆಗಿದೆ. ಈಗ ಕಾರ್ಪೋರೇಶನ್ನಿಂದ ಸಂಬಂಧಪಟ್ಟವರು ಏನಾದರೂ ಸಹಾಯ ಮಾಡಿಕೊಡಬೇಕು ಎಂದು ಅನಿಲ್ ಕುಮಾರ್ ಮನವಿ ಮಾಡಿದ್ದಾರೆ.