10 ವರ್ಷಗಳಲ್ಲಿ ಸಾವಿರಾರು ಕೋಟಿ ಬಿಲ್ ಪಾವತಿ ಡೀಲ್!
– ಜಲ ಸಂಪನ್ಮೂಲ ಇಲಾಖೆಯಲ್ಲಿ ಭಾರೀ ಗೋಲ್ಮಾಲ್
– ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಿ: ಸಿಎಂಗೆ ವಕೀಲ ದೇವರಾಜೇಗೌಡ ಒತ್ತಾಯ
NAMMUR EXPRESS NEWS
ಹಾಸನ: ಜಲ ಸಂಪನ್ಮೂಲ ಇಲಾಖೆಯಲ್ಲಿ ೨೦೧೩ ರಿಂದ ೨೦೨೪ ರವರೆಗೆ ನಡೆದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಾವಿರಾರು ಕೋಟಿ ರೂಪಾಯಿ ಪಾವತಿಸಲಾಗಿದ್ದು, ಎಷ್ಟೋ ಕಡೆ ಕಳಪೆ ಕಾಮಗಾರಿ ನಡೆದಿದೆ. ಆ ಬಗ್ಗೆ ತನಿಖೆ ನಡೆಸಲು ಪ್ರಾಮಾಣಿಕ ನಿವೃತ್ತ ನ್ಯಾಯ ಮೂರ್ತಿಗಳ ಸಮಿತಿ ರಚಿಸಿ ತನಿಖೆ ಮಾಡಿಸಿ ಎಂದು ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.
ಪತ್ರಕರ್ತರ ಜತೆ ಮಾತನಾಡಿದ ಅವರು, ಆ ಸಮಿತಿಯಿಂದ ವರದಿ ಪಡೆದ ನಂತರ ಎಸ್ಐಟಿ ರಚನೆ ಮಾಡಿ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಾವು ಮುಖ್ಯಮಂತ್ರಿ ಆದ ಮೇಲೆ ಹಿಂದಿನ ಸರ್ಕಾರಗಳ ಅವಧಿಯ ಹಳೆಯ ಹಗರಣಗಳ ಬಗ್ಗೆ ತನಿಖೆ ಮಾಡಿಸುವ ನಿರ್ಧಾರ ಕೈಗೊಂಡಿದ್ದಾರೆ. ಅವುಗಳಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಪರಿಕರ ಖರೀದಿ ಬಗ್ಗೆ ತನಿಖೆ ನಡೆಸಲು ವರದಿ ಪಡೆದಿದ್ದಾರೆ. ಸಿಎಂ ಅವರ ನಡೆಯನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದರು.
ಅದೇ ರೀತಿಯಲ್ಲಿ ೨೦೧೩ ರಿಂದ ೨೦೨೪ ರವರಗೆ ಯಾವುದೇ ಸರ್ಕಾರವಿದ್ದರೂ ಕೂಡ ಅಂಜದೆ, ಅಳುಕದೆ, ನಿರ್ಭಯವಾಗಿ ಜಲಸಂಪನ್ಮೂಲ ಇಲಾಖೆಯ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ ಹೇಮಾವತಿ ಎಡದಂಡೆ ಹಾಗೂ ಬಲದಂಡೆ ನಾಲೆ ಆಧುನೀಕರಣ ಕಾಮಗಾರಿಯ ಸುಮಾರು ೨೩೦೦ ಕೋಟಿ ಮತ್ತು ಫಂಡ್ ಡೈವರ್ಷನ್ ಮಾಡಿ ಹಾಸನ ಜಿಲ್ಲೆಯಲ್ಲಿ ಇತರೆ ಅಭಿವೃದ್ಧಿ ಕಾಮಗಾರಿಯಲ್ಲಿ ಸುಮಾರು ೫೬೦೦ ಕೋಟಿಯಲ್ಲಿ ದುರ್ಬಳಕೆ ನಡೆದಿದೆ. ವಿಶ್ವೇಶ್ವರಯ್ಯ ಜಲ ನಿಗಮ ನಡೆಸುತ್ತಿರುವ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಆರಂಭದಲ್ಲಿ ೮೩೨೫.೫೦ ಕೋಟಿ ರೂ.ಗೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿತ್ತು. ಈಗ ಯೋಜನೆ ಮೊತ್ತ ೨೬ ಸಾವಿರ ಕೋಟಿಗೆ ಏರಿದೆ. ಅದಕ್ಕಾಗಿ ಈಗಾಗಲೇ ೧೭ ಸಾವಿರ ಕೋಟಿ ಪಾವತಿಸಲಾಗಿದೆ ಎಂದು ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಮೊದಲ ಹಂತದ ಉದ್ಘಾಟನೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ೧೭ ಸಾವಿರ ಕೋಟಿ ಹಂಚಿಕೆ ಬಗ್ಗೆಯೂ ತನಿಖೆ ನಡೆಸಬೇಕು. ರಾಜ್ಯದ ಉದ್ದಗಲಕ್ಕೂ ರಸ್ತೆ ಅಭಿವೃದ್ಧಿ ಸಂಬಂಧ ೧೦ ವರ್ಷಗಳಲ್ಲಿ ಕೆ.ಆರ್.ಡಿ.ಸಿ.ಎಲ್ನಿಂದ ಲೆಕ್ಕಕ್ಕೆ ಸಿಗದಷ್ಟು ಅಂದರೆ ಸುಮಾರು ೧ ಲಕ್ಷದ ೨೫ ಸಾವಿರ ಕೋಟಿ ಹಣ ವ್ಯಯ ಮಾಡಿರುವ ಮಾಹಿತಿ ಇದೆ. ಆದ ಕಾರಣ ಕಳಂಕ ರಹಿತ ಮುಖ್ಯಮಂತ್ರಿ ಎನ್ನುತ್ತಿರುವ ಸಿದ್ದರಾಮಯ್ಯ ಅವರು, ಪಕ್ಷಾತೀತವಾಗಿ ನಿವೃತ್ತ ನ್ಯಾಯ ಮೂರ್ತಿ ನೇತೃತ್ವದ ಸಮಿತಿ ರಚಿಸಿ ತನಿಖೆ ಮಾಡಿ ಎಂದು ಆಗ್ರಹಿಸಿದರು. ನಾಲ್ಕು ಇಲಾಖೆಗಳ ವ್ಯಾಪ್ತಿಯಲ್ಲಿ ನಡೆದಿರುವ ಸಾವಿರಾರು ಕೋಟಿ ಕಾಮಗಾರಿಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಣ ನುಂಗಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟ ಭರಿಸಬೇಕಾಗಿ ಮನವಿ ಮಾಡಿದರು. ಉಚಿತ ಭಾಗ್ಯಗಳ ಹೆಸರಿನಲ್ಲಿ, ನಾವು ಸಾಕಷ್ಟು ಅಭಿವೃದ್ಧಿ ಮಾಡುತ್ತೇವೆ ಎಂದು ಡಂಗೂರ ಹೊಡೆದು ಅಧಿಕಾರಕ್ಕೆ ಬಂದ ಈ ಸರ್ಕಾರ, ಕೆಲ ಇಲಾಖೆಗಳನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ವ್ಯಾಪಕ ಭ್ರಷ್ಟಾಚಾರ ಮಾಡುತ್ತಿದೆ ಎಂದು ದೂರಿದರು. ಕಾಮಗಾರಿ ಬಿಲ್ ಪಡೆಯಲು ಎನ್ಒಸಿ ಪಡೆಯಲು ತಾವು ಹಣ ನೀಡಿಲ್ಲ ಎಂದು ಗುತ್ತಿಗೆದಾರರು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದರು.