ಟಾಪ್ 3 ನ್ಯೂಸ್ ಹಾಸನ
– ಹಾಸನ: ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು
– ನಾಲ್ವರು ಪ್ರಾಣಾಪಾಯದಿಂದ ಪಾರು
– ಅರಸೀಕೆರೆ: ಡೆಂಗ್ಯೂ ಜ್ವರದಿಂದ ಬಾಲಕ ಸಾವು
– ಸಕಲೇಶಪುರ : ಭಾರಿ ಮಳೆಯಿಂದ ಹೆದ್ದಾರಿಯ ಹಲವಡೆ ಭೂ ಕುಸಿತ
NAMMUR EXPRESS NEWS
ಹಾಸನ : ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಅವಾಂತರವನ್ನೇ ಸೃಷ್ಟಿಸಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಠದಕೊಪ್ಪಲ್ನಲ್ಲಿ ಭಾರಿ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿ ಬಿದ್ದಿದೆ. ರಿಡ್ಜ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಲ್ವರ ಪೈಕಿ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಕೆರೆಯೊಳಗಿದ್ದ ಕಾರನ್ನು ಜೆಸಿಬಿ ಬಳಸಿ ಹೊರತೆಗೆಯಲಾಗಿದೆ. ಭಾರಿ ಮಳೆ ಇದ್ದ ಕಾರಣಕ್ಕೆ ರಸ್ತೆ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ.
– ಅರಸೀಕೆರೆ: ಡೆಂಗ್ಯೂ ಜ್ವರದಿಂದ ಬಾಲಕ ಸಾವು
ಅರಸೀಕೆರೆ: ತಾಲ್ಲೂಕಿನ ಮಾಡಾಳು ಗ್ರಾಮದ ರಾಜೇಶ (8)ಎಂಬ ಬಾಲಕ ಡೆಂಗಿ ಜ್ವರದಿಂದ ಸಾವನ್ನಪಿರುವ ಘಟನೆ ನಡೆದಿದೆ. ಬಾಲಕ ಎರಡು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ರಕ್ತ ಪರೀಕ್ಷೆ ನಂತರ ಡೆಂಗಿ ಎಂಬುದು ಗೊತ್ತಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಾಪಿದ್ದಾನೆ. ಮೃತ ಬಾಲಕ ತಂದೆ ತಾಯಿ ಅಣ್ಣನನ್ನು ಅಗಲಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು.
– ಸಕಲೇಶಪುರ : ಭಾರಿ ಮಳೆಯಿಂದ ಹೆದ್ದಾರಿಯ ಹಲವಡೆ ಭೂ ಕುಸಿತ
ಹಾಸನ : ಇಲ್ಲಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಕಲೇಶಪುರ-ಮಾರನಹಳ್ಳಿ ನಡುವೆ ಹಲವೆಡೆ ಭೂ ಕುಸಿತವಾಗಿತ್ತು, ಮಳೆ ಹೀಗೇ ಮುಂದುವರಿದರೆ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. ಅವೈಜ್ಞಾನಿಕವಾಗಿ ಭೂಮಿ ಕತ್ತರಿಸಿ, ಕಾಂಕ್ರೀಟ್ ರಸ್ತೆ ನಿರ್ಮಿಸಿರುವ ದೊಡ್ಡತಪ್ಪಲೆ ಬಳಿ ಸುಮಾರು 150 ಅಡಿ ಉದ್ದಕ್ಕೂ ಭಾರೀ ಪ್ರಮಾಣದಲ್ಲಿ ಮರ ಗಿಡಗಳ ಸಮೇತ ಮಣ್ಣು ಕುಸಿದು ಬಿದ್ದಿದೆ. ಮಳೆ ಬಂದಂತೆಲ್ಲಾ ಕುಸಿತ ಮುಂದುವರಿದಿದ್ದು, ವಾಹನಗಳು ಹಳೇ ಹೆದ್ದಾರಿಯಲ್ಲೇ ಸಂಚರಿಸುವಂತಾಗಿದೆ. ಹಳೆ ರಸ್ತೆ ಮೇಲೂ 100 ಅಡಿಗೂ ಹೆಚ್ಚು ಎತ್ತರ ಹಾಗೂ 200 ಮೀಟರ್ಗೂ ಹೆಚ್ಚು ಉದ್ದ ಇರುವ ಗೆರೆ ಕುಸಿಯುವ ಹಂತದಲ್ಲಿದ್ದು, ಆ ಮಾರ್ಗದಲ್ಲಿಯೂ ವಾಹನಗಳ ಸಂಚಾರಕ್ಕೆ ಅಪಾಯ ಎದುರಾಗಿದೆ. ‘ರಸ್ತೆ ನಿರ್ಮಾಣಕ್ಕೆ ಇಳಿಜಾರಿನಲ್ಲಿ ಭೂಮಿ ಕತ್ತರಿಸದೇ, 90 ಡಿಗ್ರಿ ಕತ್ತರಿಸಿರುವುದರಿಂದ ನಿರಂತರವಾಗಿ ಮಣ್ಣು ಕುಸಿಯುತ್ತಿದೆ. ಹೆದ್ದಾರಿ ಪ್ರಾಧಿಕಾರ ಸ್ವಾಧೀನ ಪಡಿಸಿಕೊಳ್ಳದೇ ಇರುವ ಗೋದಾಮಿನವರೆಗೆ ಮಣ್ಣು ಕುಸಿದಿದ್ದು, ಮಳೆ ಮುಂದುವರಿದರೆ ಗೋದಾಮಿನ ಗೋಡೆಯೂ ಕುಸಿಯುತ್ತದೆ.
‘ರಾಷ್ಟ್ರೀಯ ಹೆದ್ದಾರಿ 75 ರ ಸಕಲೇಶಪುರ-ಹೆಗ್ಗದ್ದೆವರೆಗೆ 12 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣ ಹಂತದಲ್ಲಿದ್ದು, ಹಲವೆಡೆ ಭೂ ಕುಸಿತವಾಗಿದೆ. ವಾಹನಗಳು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು, ಕಾಮಗಾರಿ ನಿರ್ವಹಿಸುತ್ತಿರುವ ರಾಜ್ಮಲ್ ಕಂಪನಿಯ ಎಂಜಿನಿಯರ್ ಹಾಗೂ ಆ ವ್ಯಾಪ್ತಿಯ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ಜಿ. ಮೇಘನಾ ತಿಳಿಸಿದ್ದಾರೆ.