ಟಾಪ್ 3 ನ್ಯೂಸ್ ಹಾಸನ
ಹಾಸನ: ಶಿರಾಡಿಘಾಟ್ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿತ
– ಪ್ರಯಾಣಿಕರು ಪಾರು, ವಾಹನ ಸಂಚಾರ ಬಂದ್
– ಸಕಲೇಶಪುರ: ಹೆಚ್ಚಿದ ವರುಣನ ಆರ್ಭಟ, ಕೊಚ್ಚಿ ಹೋದ ಕಿರು ಸೇತುವೆ
– ಹಾಸನ: ಅಪರಿಚಿತ ವಾಹನ ಡಿಕ್ಕಿ ಜಿಂಕೆ ಸಾವು
NAMMUR EXPRESS NEWS
ಹಾಸನ: ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಮಳೆಯಿಂದ ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡ್ಡು ಕುಸಿಯುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು 7 ಮಂದಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿಯ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಡರಾತ್ರಿ ಚಲಿಸುತ್ತಿದ್ದ ಓಮಿನಿ ಕಾರಿನ ಗುಡ್ಡ ಕುಸಿದಿದ್ದು, ಭಾರೀ ಪ್ರಮಾಣದ ಮಣ್ಣು ಬಿದ್ದಿದೆ. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗುಡ್ಡ ಕುಸಿತದಿಂದ ಶಿರಾಡಿಘಾಟ್ನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಘಟನೆ ನಡೆದ ಸ್ಥಳದಿಂದ ಎರಡೂ ಕಡೆಗೆ ಐದು ಕಿಮೀ ಟ್ರಾಫಿಕ್ ಜಾಮ್ ಆಗಿದೆ. ಮಣ್ಣು ತೆರವುಗೊಳಿಸಲಾಗುತ್ತಿದೆ. ಪೊಲೀಸರು ಬದಲಿ ಮಾರ್ಗ ಸೂಚಿಸಿದ್ದಾರೆ. ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬುಧವಾರ ಮಧ್ಯಾಹ್ನದಿಂದಲೇ ಗುಡ್ಡ ಕುಸಿಯಲು ಆರಂಭಿಸುತ್ತು. ನೋಡ ನೋಡುತ್ತಲೇ ಗುಡ್ಡದ ಕುಸಿದು ಬಿದ್ದಿದೆ. ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಪಾರಾಗಿದ್ದಾರೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ರಸ್ತೆ ಪಕ್ಕದ ಗುಡ್ಡಗಳು ಕುಸಿಯುತ್ತಿವೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.
– ಸಕಲೇಶಪುರ: ಹೆಚ್ಚಿದ ವರುಣನ ಆರ್ಭಟ, ಕೊಚ್ಚಿ ಹೋದ ಕಿರು ಸೇತುವೆ
ಸಕಲೇಶಪುರ: ತಾಲ್ಲೂಕಿನಾದ್ಯಂತ ಬುಧವಾರ ಇಡೀ ದಿನ
ವರುಣನ ಆರ್ಭಟ ಹೆಚ್ಚಾಗಿತ್ತು. ಹಲವೆಡೆ ಭೂ ಕುಸಿತ ಉಂಟಾಗಿದೆ. ಮನೆಗಳ ಮೇಲೆ ಮರಗಳು ಉರುಳಿದ್ದು, ಕಿರು ಸೇತುವೆಗಳು ಕೊಚ್ಚಿ ಹೋಗಿವೆ. ವಿದ್ಯುತ್ ಕಡಿತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ತಾಲ್ಲೂಕಿನಾದ್ಯಂತ ಸರಾಸರಿ 22 ಸೆಂ.ಮೀ. ಮಳೆ ದಾಖಲಾಗಿದೆ. ಇಡೀ ದಿನ ಬಿಡುವು ನೀಡದಂತೆ ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇತ್ತು.
ಬಾಳ್ಳುಪೇಟೆಯಿಂದ- ಹೆಗ್ಗದ್ದೆವರೆಗೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಹಾಗೂ ನಿರ್ಮಾಣ ಹಂತದಲ್ಲಿರುವ ಹೆದ್ದಾರಿಯ ಸುಮಾರು 10ಕ್ಕೂ ಹೆಚ್ಚು ಕಡೆ ರಸ್ತೆಯೇ ಕುಸಿದು ಹೋಗಿದೆ.
ಕೊಲ್ಲಹಳ್ಳಿ, ರಾಟೇಮನೆ, ಬಾಳ್ಳುಪೇಟೆ, ಸಕಲೇಶಪುರ ಬೈಪಾಸ್, ತೋಟದಗದ್ದೆ, ಆನೇಮಹಲ್, ದೋಣಿಗಾಲ್, ಕಪ್ಪಳ್ಳಿ, ಕೆಸಗಾನಹಳ್ಳಿ, ದೊಡ್ಡತಪ್ಪಲೆ ಮಾರ್ಗದ ಉದ್ದಕ್ಕೂ ಹೆದ್ದಾರಿಯ ಬದಿಯಲ್ಲಿ ಗುಡ್ಡ ಕುಸಿತ, ಚತುಷ್ಪಥಕ್ಕಾಗಿ ಕಟ್ಟಲಾದ ಗೇಬಿಯನ್ ವಾಲ್ ಕುಸಿದು ಬಿದ್ದು, ಭಾರಿ ಅನಾಹುತಗಳು ಸಂಭವಿಸಿವೆ. ದೊಡ್ಡತಪ್ಪಲೆ ಬಳಿ ಸುಮಾರು 100 ಅಡಿ ಎತ್ತರದಿಂದ ಗುಡ್ಡ ಕುಸಿದು ಕೂದಲೆಳೆ ಅಂತರದಲ್ಲಿ ವಾಹನಗಳು ಅಪಾಯದಿಂದ ಪಾರಾಗಿವೆ. ಈ ಪ್ರದೇಶದಲ್ಲಿ ನಿರಂತರವಾಗಿ ಭೂಮಿ ಕುಸಿಯುತ್ತಲೇ ಇದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಾರನಹಳ್ಳಿ ಬಳಿ ಎತ್ತಿನಹಳ್ಳದ ಉಪಹಳ್ಳಕ್ಕೆ, ಭರತ್ ಅವರ ಮನೆಗೆ ನಿರ್ಮಾಣ ಮಾಡಿದ್ದ ಕಿರು ಸೇತುವೆ ಕೊಚ್ಚಿ ಹೋಗಿದೆ. ಇವರ ಮನೆಗೆ ಇದೀಗ ಸಂಪರ್ಕಕ್ಕೆ ಬದಲಿ ರಸ್ತೆ ಇಲ್ಲದೇ ಸಮಸ್ಯೆ ಉಂಟಾಗಿದೆ.
– ಹಾಸನ: ಅಪರಿಚಿತ ವಾಹನ ಡಿಕ್ಕಿ ಜಿಂಕೆ ಸಾವು
ಹಾಸನ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಜಿಂಕೆಯೊಂದು ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ಬೆಳಗೋಡು ಹೋಬಳಿ ಹಳೆಹೊಂಕರವಳ್ಳಿ ಗ್ರಾಮದ ಬಳಿ ರಾಜ್ಯ ಹೆದ್ದಾರಿ ಯಲ್ಲಿ ಗುರುವಾರ ಮುಂಜಾನೆ ರಸ್ತೆ ದಾಟುತ್ತಿದ್ದ ವೇಳೆ ವಾಹನ ಡಿಕ್ಕಿ ಹೊಡೆ ದಿದ್ದರಿಂದ ಜಿಂಕೆ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲಿಸಿದ ನಂತರ ಜಿಂಕೆ ಶವವನ್ನು ವಶಕ್ಕೆ ಪಡೆದು ಪಶು ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.