ವೃದ್ಧರೇ, ಗರ್ಭಿಣಿಯರೇ ಎಚ್ಚರ..!
– ಬಿಸಿಲಿನ ಝಳದಿಂದ ನಲುಗಿದ ಕರ್ನಾಟಕ
– ಬರೋಬ್ಬರಿ 569 ಹೀಟ್ವೇವ್ ಕೇಸು ದಾಖಲು!
NAMMUR EXPRESS NEWS
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರುತ್ತಿದ್ದು, ಜನರು ಮನೆಯಿಂದ ಹೊರಗೆ ಬಂದರೆ ಬೆಂಕಿಯಲ್ಲಿ ನಡೆಯುತ್ತಿರುವ ಅನುಭವವಾಗುತ್ತಿದೆ. ರಾಜ್ಯದ ಅನೇಕ ಕಡೆಗಳಲ್ಲಿ ತಾಪಮಾನ ಏರುತ್ತಿರುವ ಸಮಯದಲ್ಲೇ ಇದೀಗ ಜನರಿಗೆ ಮತ್ತೊಂದು ಆತಂಕದ ಸುದ್ದಿ ಹೊರ ಬಿದ್ದಿದ್ದು, ಹೀಟ್ ವೇವ್ ಇನ್ನೂ ಹೆಚ್ಚಾಗುವ ಮುನ್ಸೂಚನೆಯನ್ನು ಆಧಿಕಾರಿಗಳು ನೀಡಿದ್ದಾರೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಈ ಹಿನ್ನೆಲೆ ಎಲ್ಲೆಡೆ ಹೀಟ್ ವೇವ್ ಆತಂಕ ಹೆಚ್ಚಾಗಿದೆ. ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಬರೋಬ್ಬರಿ 569 ಹೀಟ್ ವೇವ್ ಪ್ರಕರಣ ದಾಖಲು ಆಗಿದ್ದು, ಹೆಚ್ಚಿದ ತಾಪಮಾನದಿಂದಾಗಿ 85 ವರ್ಷದ ವೃದ್ದನಿಗೆ ಹೀಟ್ ಸ್ಟ್ರೋಕ್ ಉಂಟಾಗಿದೆ. ಮೈಸೂರು ಮೂಲದ ವೃದ್ಧನಿಗೆ ಏಪ್ರಿಲ್ 4 ರಂದು ಸ್ಟ್ರೋಕ್ ಆಗಿದ್ದು, ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆಯಿಂದ ಹೀಟ್ ವೇವ್ ಮಾಹಿತಿ ನೀಡಲಾಗಿದೆ.
ಹೀಟ್ ವೇವ್ ಪ್ರಕರಣದಲ್ಲೇ ಬೇರೆ ಬೇರೆ ರೀತಿಯ ಕೇಸು ದಾಖಲಾಗಿದ್ದು, ಆ ಪೈಕಿ ಹೀಟ್ ರಾಷ್ – 367 ಪ್ರಕರಣ, ಹೀಟ್ ಕ್ರಾಪ್ಸ್ (ಸೆಳೆತ) – 131 ಪ್ರಕರಣ ಮತ್ತು ಹೀಟ್ ಎಕ್ಸಾಯುಯೇಷನ್ – 70 ಪ್ರಕರಣ ದಾಖಲಾಗಿದೆ. ಈಗಾಗಲೇ ಹೀಟ್ ವೇವ್ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ಬೆಳಗ್ಗೆ 11 ಗಂಟೆಯಿಂದ ಸಂಜೆ 4ರವೆಗೂ ಬಿಸಿಲಿಗೆ ಓಡಾಡದಂತೆ ಜನರಿಗೆ ಸೂಚನೆ ನೀಡಲಾಗಿದೆ.
ಅಷ್ಟೇ ಅಲ್ಲದೇ, ವಯಸ್ಸಾದವರಲ್ಲಿ ಹೀಟ್ ಸ್ಟ್ರೋಕ್ ಹಾಗೂ ಬಿಪಿ ಲೋ, ನಿತ್ರಾಣದಂತಹ ಸಮಸ್ಯೆ ಎದುರಾಗುತ್ತಿದ್ದು, ವಯೋ ವೃದ್ಧರು ಬೆಳಿಗ್ಗೆ ಮತ್ತು ಸಾಯಂಕಾಲ ಮಾತ್ರ ಹೊರಗಡೆ ಬರಬೇಕು. ಬಿಸಿಲಿನಿಂದಾಗಿ ಮಕ್ಕಳಲ್ಲಿ ಜ್ವರ, ಆಯಾಸ ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳು ಹೆಚ್ಚಾಗಿ ನೀರು ಕುಡಿಯಬೇಕು, ಗರ್ಭಿಣಿಯರು ಕೂಡ ಆದಷ್ಟು ಬಿಸಿಲಿಗೆ ಹೊರಗಡೆ ಬರದಂತೆ ವೈದ್ಯರು ಸಲಹೆ ನೀಡಿದ್ದಾರೆ. ಇನ್ನು, ಈ ಸಂದರ್ಭದಲ್ಲಿ ಮಳೆ ಏನಾದ್ರು ಬಂದರೆ, ನೀರು ಕುಡಿಯೋದರಿಂದ ವಾಂತಿ ಭೇಧಿ ಪ್ರಕರಣಗಳು ಹೆಚ್ಚಾಗಬಹುದು.
ಮಳೆ ಬಂದಾಗ ನೀರು ಸಂಗ್ರಹಣೆಯಾದರೆ ಸೊಳ್ಳೆ ಉತ್ಪತ್ತಿಯಾಗಿ ಶಂಕಿತ ಡೆಂಗ್ಯೂ ಬರುವ ಸಾಧ್ಯತೆಯೂ ಇದ್ದು, ಬಿಸಿಲಿನ ಬೇಗೆ ಹೆಚ್ಚಳ ಮತ್ತು ಕಾಲರಾದಂತಹ ಪ್ರಕರಣ ಉಂಟಾಗಿರುವ ಹಿನ್ನೆಲೆ ಜನರಿಗೆ ಆರೋಗ್ಯ ಇಲಾಖೆ ಸೂಚನೆ ರವಾನಿಸಿದೆ. ಈತನ್ಮಧ್ಯೆ ಕರ್ನಾಟಕ ಆರೋಗ್ಯ ಇಲಾಖೆಯಿಂದ ರಾಜ್ಯದ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದ್ದು, ಹೀಟ್ ವೇವ್ ರೋಗಿಗಳಿಗೆ ಪ್ರತ್ಯೇಕ ವಾರ್ಡ್ ಮೀಸಲಿಡಬೇಕು, 4-6 ರಷ್ಟು ಬೆಡ್ಗಳನ್ನು ಪ್ರತ್ಯೇಕವಾಗಿ ಇಡಬೇಕು. ರೋಗಿಗಳು ಬಂದ ಕೂಡಲೇ ಚಿಕಿತ್ಸೆ ನೀಡಬೇಕು, ನಿರ್ಜಲೀಕರಣ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕುಔಷಧ, ಏರ್ ಕೂಲರ್, ಫ್ಯಾನ್ ಇಡಬೇಕು ಎಂದು ಸೂಚನೆ ನೀಡಲಾಗಿದೆ.