- ಗ್ರಾಮ ಪಂಚಾಯತ್ ಸದಸ್ಯ ದ್ವೇಷಕ್ಕೆ ಬಲಿ
ಕಲಬುರ್ಗಿ: ಜಮೀನು ವಿವಾದಕ್ಕೆ ಸಂಬಂಧಿಸಿ ಗ್ರಾಮ ಪಂಚಾಯತ್ ಸದಸ್ಯನೋರ್ವನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರ್ಗಿ ನಗರದಲ್ಲಿ ನಡೆದಿದೆ. ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಶಿವಲಿಂಗಪ್ಪ ಭೋಗಶೆಟ್ಟಿ(53) ಕೊಲೆಯಾದಾತ. ಏಳು ಜನರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕಲಬುರ್ಗಿ ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯನೂ ಆಗಿದ್ದ ಈತ ಕಾಂಗ್ರೆಸ್ ಮುಖಂಡನಾಗಿ ಒಂದಷ್ಟು ರಾಜಕೀಯ ಚಟುವಟಿಕೆಗಳನ್ನು ಮಾಡುತ್ತಿದ್ದ. ಕಲಬುರ್ಗಿ ನಗರದ ಕೈಲಾಶ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಸೋಮವಾರ ರಾತ್ರಿ ಮನೆ ಬಳಿ ನಿಂತಾಗ ಏಕಾಏಕಿ ಬಂದೆರಗಿದ ದುಷ್ಕರ್ಮಿಗಳ ಗುಂಪು, ಕೊಲೆ ಮಾಡಿ ಪರಾರಿಯಾಗಿದೆ.
ತೀವ್ರ ರಕ್ತಸ್ರಾವದಿಂದ ಬಿದ್ದ ಸ್ಥಳದಲ್ಲಿಯೇ ವ್ಯಕ್ತಿ ಸಾವನ್ನಪ್ಪಿದ್ದಾನೆ. ಭೂ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೆÇಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕಡಗಂಚಿ ಗ್ರಾಮದ ಕಮಲಾಬಾಯಿ ಎನ್ನುವ ಮಹಿಳೆಯಿಂದ ಶಿವಲಿಂಗಪ್ಪ, 4 ಎಕರೆ, 4 ಗುಂಟೆ ಜಮೀನು ಖರೀದಿಸಿದ್ದ. ಹೊಲ ಖರೀದಿ ಮಾಡಿದಾಗಿನಿಂದಲೂ ಹೊಲ ಮಾರಾಟ ಮಾಡಿದ ಮಹಿಳೆಯ ಸಂಬಂಧಿಕರು ತಕರಾರು ತೆಗೆಯುತ್ತಲೇ ಇದ್ದರು. ಈ ಭೂಮಿ ತಮಗೆ ಸೇರಬೇಕಾದದ್ದೆಂದು ತಕರಾರು ತೆಗೆದು, ಶಿವಲಿಂಗಪ್ಪನಿಗೆ ಬಿತ್ತನೆ ಮಾಡಲೂ ಅವಕಾಶ ನೀಡಿರಲಿಲ್ಲ. ಹೀಗಾಗಿ ಖರೀದಿ ಮಾಡಿದ್ದ ಭೂಮಿ ಹಾಗೆಯೂ ಬೀಳಾಗಿ ಬಿದ್ದಿತ್ತು. ಇಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿಗಲು ಶಿವಲಿಂಗಪ್ಪನ ಮೇಲೆ ಒಮ್ಮೆ ಹಲ್ಲೆಯನ್ನೂ ಮಾಡಿದ್ದರು.
ಇತ್ತೀಚೆಗೆ ಹಣಕ್ಕಾಗಿ ಗೆಳೆಯನೇ ವ್ಯಕ್ತಿಯನ್ನು ಅಪಹರಿಸಿ, ಕೊಲೆಗೈದು ನದಿಗೆ ಎಸೆದಿದ್ದ ಸಿನಿಮೀಯ ಮಾದರಿಯ ಕೊಲೆ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಕಲಬುರ್ಗಿ ನಗರದಲ್ಲಿ ಮತ್ತೋರ್ವ ವ್ಯಕ್ತಿಯ ಬರ್ಬರ ಹತ್ಯೆಯಾಗಿದೆ.