- ಬಿಜೆಪಿಗೆ ಜಂಪ್ ವದಂತಿಗೆ ತೆರೆ ಎಳೆದ ಕುಲಕರ್ಣಿ
- ಮತ್ತೆ ಆಹ್ವಾನ ನೀಡಿದ ರಮೇಶ ಜಾರಕಿಹೊಳಿ!
ಬೆಳಗಾವಿ: “ಬಿಜೆಪಿ ಸೇರಲು ತಮಗೆ ಆಹ್ವಾನ ಬಂದಿದ್ದು ನಿಜ. ಆದರೆ, ಅದನ್ನು ನಾನು ನಯವಾಗಿ ತೀರಸ್ಕರಿಸಿದ್ದೇನೆ” ಎಂದು ಹೇಳುವ ಮೂಲಕ ತಾವು ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಹರಡುತ್ತಿರುವ ವದಂತಿಗೆ ಮಾಜಿ ಸಚಿವ ವಿನಯ ಕುಲಕರ್ಣಿ ವಿರಾಮ ಹಾಕಿದರು.
ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ವಿನಯ ಕುಲಕರ್ಣಿಯರಿಗೆ ವೇದಿಕೆ ಹಂಚಿಕೊಂಡಿದ್ದ ರಮೇಶ ಜಾರಕಿಹೊಳಿ, ಬಿಜೆಪಿಗೆ ಬರುತ್ತೀಯಲ್ಲ ಎಂದು ಆಹ್ವಾನ ನೀಡಿದ ಪ್ರಸಂಗ ನಡೆಯಿತು. ಇದೇ ಸಮಯದಲ್ಲಿ ಕುಲಕರ್ಣಿ, ಸಚಿವ ಜಾರಕಿಹೊಳಿ ಅವರಿಗೆ ಕೈ ಮುಗಿದು ಕುಳಿತುಕೊಂಡರು.
ನಂತರ ಮಾತನಾಡಿದ ವಿನಯ ಕುಲಕರ್ಣಿ, ತಾವು ಬಿಜೆಪಿಗೆ ಸೇರುವ ಬಗ್ಗೆ ಎಲ್ಲಿಯೂ ಚರ್ಚೆ ನಡೆಸಿಲ್ಲ. ನಾನು ನನ್ನ ಹೊಲ ಬಿಟ್ಟು ಎಲ್ಲಿಯೂ ಹೋಗಿಲ್ಲ. ಆದರೆ, ನಾನು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂಬ ಚರ್ಚೆ ನಡೆಯುತ್ತಿದೆ. ರಮೇಶ ಜಾರಕಿಹೊಳಿ ನನಗೆ ಬಿಜೆಪಿಗೆ ಬರುವಂತೆ ಹೇಳಿದರು. ಆದರೆ, ಎಲ್ಲರ ಎದುರು ಕೈಮುಗಿದು ಅವರಿಗೆ ನಮಸ್ಕಾರ ಮಾಡಿದೆ. ಬಿಜೆಪಿ ಸೇರುವ ಯೋಚನೆ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಹುಕ್ಕೇರಿ ಪ್ರಸ್ತಾಪ ಇಲ್ಲ: ಪ್ರಕಾಶ ಹುಕ್ಕೇರಿ ಬಿಜೆಪಿಗೆ ಸೇರ್ಪಡೆಯಾಗುವ ವಿಚಾರ ಕುರಿತಂತೆ ಮಾತನಾಡಿದ ಅವರು, ಬೆಂಬಲ ನೀಡುವುದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ. ಆದರೆ, ಬಿಜೆಪಿ ಸೇರ್ಪಡೆ ಬಗ್ಗೆ ಎಲ್ಲಿಯೂ ಅವರು ಬಹಿರಂಗ ಹೇಳಿಕೆ ನೀಡಿಲ್ಲ ಆ ಬಗ್ಗೆ ಚರ್ಚೆಯೂ ನಡೆದಿಲ್ಲ. ಪಕ್ಷದಲ್ಲಿನ ಕೆಲವೊಂದು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ ಖಾಸಗಿ ಹೊಟೇಲಿನಲ್ಲಿ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಬೆಳಗಾವಿ, ಮಸ್ಕಿ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಕುರಿತು ಚರ್ಚೆಯಾಗಿದ್ದು, ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯವಿದ್ದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಬೆಳಗಾವಿ ಲೋಕಸಭೆ ಚುನಾವಣೆ ಕುರಿತೂ ಚರ್ಚೆ ನಡೆದೇ ಇಲ್ಲ ಎಂದರು.