- ಕಾರಿನ ಮೇಲೆ ಟಿಪ್ಪರ್ ಹರಿಸಿ ಫೈರಿಂಗ್
- ಇಬ್ಬರ ಸಾವು: ನಮ್ಮೂರ್ ಎಕ್ಸ್ಪ್ರೆಸ್ ವಿಶೇಷ ವರದಿ
ವಿಜಯಪುರ: ಭೀಮಾ ತೀರದ ನಟೋರಿಯಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹದೇವ ಬೈರಗೊಂಡ ಉರ್ಫ್ ಮಹದೇವ ಸಾವುಕಾರನ ಕಾರು ಚಾಲಕ ಉಪಚಾರ ಫಲಿಸದೇ ಮಂಗಳವಾರ ಸಾವನ್ನಪ್ಪಿದ್ದಾನೆ.
ಟಿಪ್ಪರ್ ಮೂಲಕ ಅಪಘಾತಪಡಿಸಿ ಸಾವುಕಾರನ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದ ದುಷ್ಕರ್ಮಿಗಳ, ಸಂಚಿನಲ್ಲಿ ಆತನ ಕಾರ್ ಚಾಲಕ ಲಕ್ಷ್ಮಣ ದಿಂಡೋರ್ (27) ಮಾರಣಾಂತಿಕ ಗಾಯಗೊಂಡಿದ್ದ. ಗುಂಡು ತಗುಲು ಗಂಭೀರ ಗಾಯಗೊಂಡಿದ್ದ ಲಕ್ಷ್ಮಣ ಉಪಚಾರ ಫಲಿಸದೇ ಮಂಗಳವಾರ ಕೊನೆಯುಸಿರೆಳೆದಿದ್ದಾನೆ.
ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಬೈರಗೊಂಡ ಸಾವುಕಾರನ ಮ್ಯಾನೇಜರ್ ಬಾಬುರಾಯ ಕಂಚನಾಳಕರ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮಹದೇವ ಬೈರಗೊಂಡ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಆತ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆ ಇದೆ ಎಂದು ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಟಿಪ್ಪರ್ ಡಿಕ್ಕಿ ಹೊಡೆಸಿ ಫೈರಿಂಗ್!: ಮಹಾದೇವ ಸಾಹುಕಾರ ಬೈರಗೊಂಡ ತನ್ನ ಸಹಚರರೊಂದಿಗೆ ಸೋಮವಾರ 3 ವಾಹನದೊಂದಿಗೆ ನಗರದ ಹೊರ ವಲಯದ ಹೆದ್ದಾರಿ ಬಳಿಯ ಭೂತನಾಳ ಕ್ರಾಸ್ ಹತ್ತಿರದ ಹಣಮಂತ ಚಿಂಚಲಿ ಅವರ ಪೈಪ್ ಫ್ಯಾಕ್ಟರಿಗೆ ಭೇಟಿ ನೀಡಿ, ಮರಳಿ ಚಡಚಣ ಕಡೆಗೆ ತೆರಳುತ್ತಿದ್ದಾಗ ಕನ್ನಾಳ ಕ್ರಾಸ್ ಬಳಿ ಬೈರಗೊಂಡನ ಕಾರಿಗೆ ಟಿಪ್ಪರ್ವೊಂದು ಡಿಕ್ಕಿಯಾದ ಕ್ಷಣ 8-10 ಜನರು ಕಾರನ್ನು ಸುತ್ತಗಟ್ಟಿ ಕಲ್ಲು ತೂರಾಟ ನಡೆಸಿದ್ದರಲ್ಲದೇ, ಗುಂಡಿನ ದಾಳಿ ನಡೆಸಿ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದರು.
ಗಂಭೀರ ಗಾಯ: ಗುಂಡಿನ ದಾಳಿಯಲ್ಲಿ ಮಹದೇವ ಸಾಹುಕಾರ ಬೈರಗೊಂಡನ ಹೊಟ್ಟೆ ಹಾಗೂ ಬೆನ್ನಿನ ಪಕ್ಕೆಲುಬು ಸೇರಿದಂತೆ ಮೂರು ಗುಂಡು ತಗುಲಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.
ಹಳೆ ವೈಷಮ್ಯ: ಭೀಮಾತೀರದ ನಟೋರಿಯಸ್ ಹಂತಕ ಚಂದಪ್ಪ ಹರಿಜನ, ಬಾಗಪ್ಪ ಹರಿಜನ ಇವರುಗಳ ರಕ್ತಪಾತದ ಕಥೆ ಒಂದೆಡೆಯಾದರೆ, ಇನ್ನು ಬೈರಗೊಂಡ ಹಾಗೂ ಚಡಚಣ ಕುಟುಂಬದ ವೈಷಮ್ಯದ ಕುಲುಮೆಯಲ್ಲಿ ಸದಾ ಬೇಯುತ್ತಿದ್ದ ಈ ಎರಡು ಕುಟುಂಬಗಳು ಭೀಮೆಯ ಒಡಲಲ್ಲಿ ರಕ್ತಪಾತ ಹರಿಸುತ್ತಲೇ ಬಂದಿವೆ.
ಈ ವೈಷಮ್ಯದ ಬೆಂಕಿಗೆ ಅದೆಷ್ಟೋ ಜನರು ಬಲಿಯಾದರೂ ಈ ಹೇಗೆತನ ಇನ್ನೂ ಆರುತ್ತಿಲ್ಲ. ಬೈರಗೊಂಡ ಹಾಗೂ ಚಡಚಣ ಕುಟುಂಬದ ವೈಷಮ್ಯಕ್ಕೆ ಮಹಾದೇವ ಸಾಹುಕಾರ ಬೈರಗೊಂಡನ ಅಣ್ಣ ಪುತ್ರಪ್ಪ ಸಾಹುಕಾರ ಬೈರಗೊಂಡ ಹಲವು ವರ್ಷಗಳ ಹಿಂದೆ ಗುಂಡಿನ ದಾಳಿಗೆ ಗಂಭೀರ ಗಾಯಗೊಂಡು ನೆಲ ಹಿಡಿದು ಸಾವಿಗೀಡಾಗಿದ್ದ. ಈ ವೈಷಮ್ಯ ಹೀಗೆ ಮುಂದುವರೆದ ಪರಿಣಾಮ ಮಲ್ಲಿಕಾರ್ಜುನ ಚಡಚಣನ ಮಕ್ಕಳಾದ ಧರ್ಮರಾಜ ಚಡಚಣ ಹಾಗೂ ಗಂಗಾಧರ ಚಡಚಣ ಸಾವಿನವರೆಗೂ ಹೊತ್ತಿಕೊಂಡು ಬಂದಿತ್ತು.
ನಕಲಿ ಎನ್ಕೌಂಟರ್ನಿಂದ ಜೈಲು!: ಅ.30 2017ರಂದು ಧರ್ಮರಾಜ ಚಡಚಣ ನಕಲಿ ಎನ್ಕೌಂಟರ್ ಹಾಗೂ ಗಂಗಾಧರ ಚಡಚಣ ನಿಗೂಢ ಕೊಲೆ ಪ್ರಕರಣಕ್ಕೆ ಮಹಾದೇವ ಸಾಹುಕಾರ ಬೈರಗೊಂಡ ಸೇರಿದಂತೆ ಕೆಲ ಪೆÇಲೀಸ್ ಅಧಿಕಾರಿಗಳು ದರ್ಗಾ ಜೈಲು ಸೇರಿದ್ದರು. ಅನಂತರ ಜಾಮೀನಿನ ಮೇಲೆ ಮಹಾದೇವ ಸಾಹುಕಾರ ಬೈರಗೊಂಡ ಹೊರಗೆ ಬಂದಿದ್ದ. ಅಲ್ಲದೇ ಈಚೆಗೆ ಮಹಾದೇವ ಸಾಹುಕಾರ ಬೈರಗೊಂಡ ಹಾಗೂ ಬಾಗಪ್ಪ ಹರಿಜನ ಸೇರಿದಂತೆ ಮೂವರು ಚಿನ್ನದ ವ್ಯಾಪಾರಿಯನ್ನು ಹೆದರಿಸಿ 5 ಕೋಟಿ ರೂ.ಗಳು ಹಾಗೂ 3 ಕೆಜಿ ಚಿನ್ನಕ್ಕೆ ಬೇಡಿಕೆಯಿಟ್ಟು ಮತ್ತೇ ಮೈಮೇಲೆ ಪ್ರಕರಣ ಹಾಕಿಕೊಂಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ದಾಳಿ ಶಂಕೆ: ಧರ್ಮರಾಜ ಚಡಚಣ ನಕಲಿ ಎನ್ಕೌಂಟರ್ ಹಾಗೂ ಗಂಗಾಧರ ಚಡಚಣ ನಿಗೂಢ ಸಾವಿನ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೆಲ ದಿನಗಳ ಹಿಂದೆ ಚಡಚಣ ಸಹೋದರರ ತಾಯಿ ವಿಮಲಾಬಾಯಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಳು.ಸೋಮವಾರ ನಡೆದ ಘಟನೆಗೆ ಸಂಬಂಧಿಸಿದಂತೆ ವಿಜಯಪುರ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಉನ್ನತ ಪೊಲೀಸ್ ಅಧಿಕಾರಿಗಳ ತಂಡದ ಮೂವರು ಸದಸ್ಯರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಸಿಕ್ಕ ಜೀವಂತ ಗುಂಡುಗಳು ಹಾಗೂ ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ವಿಶೇಷ ತಂಡಕ್ಕೆ ಎಸ್ಪಿ ಅನುಪಮ್ ಅಗರವಾಲ್ ಸಾಥ್ ನೀಡಿದ್ದಾರೆ.